
ಮೈಸೂರು ವಿಸ್ತರಣೆ ನಿರ್ಧಾರ ಕೈಬಿಡಿ: ಜನಾಂದೋಲನ ಮಹಾ ಮೈತ್ರಿ ಆಗ್ರಹ
ಸರ್ಕಾರ ಬೃಹತ್ ಮೈಸೂರು ಮಹಾ ನಗರ ಪಾಲಿಕೆ ರಚನೆಗೆ ಮುಂದಾಗಿದೆ. ಆದರೆ ಈಗಲೇ ನಗರದ ಬಡಾವಣೆಗಳಿಗೆ ಶುದ್ಧ ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಸೌಲಭ್ಯ ಒದಗಿಸಲು ಪಾಲಿಕೆಗೆ ಸಾಧ್ಯವಾಗಿಲ್ಲ. ಹೀಗಾಗಿ ಒಂದು ವೇಳೆ ಬೃಹತ್ ಮೈಸೂರು ಪಾಲಿಕೆ ರಚನೆಯಾದರೆ ಅದು ನಗರಕ್ಕೆ ಮಾರಕವಾಗಲಿದೆ ಎಂದು ಜನಾಂದೋಲನ ಮಹಾ ಮೈತ್ರಿ ಸಂಚಾಲಕ ಉಗ್ರ ನರಸಿಂಹೇಗೌಡ ಕಳವಳ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಬೃಹತ್ ಮೈಸೂರು ರಚನೆಗೆ ಸಂಬಂಧಿಸಿದಂತೆ ಆಕ್ಷೇಪಣೆ ಆಹ್ವಾನಿಸಲಾಗಿದೆ. ಆದರೆ ಈ ವಿಷಯದಲ್ಲಿ ಭೂ ಮಾಫಿಯಾ ಲಾಬಿ ನಡೆದಿದೆ ಎಂಬ ಶಂಕೆಯಿದೆ. ರಾಜಕಾರಣಿಗಳು ಸಹಾ ಸುಮ್ಮನಿರಲು ಕಾರಣ ಅವರೂ ಸಹಾ ಇದರಲ್ಲಿ ಶಾಮೀಲಾಗಿರಬಹುದಾಗಿದೆ. ಆದ್ದರಿಂದ ಎಲ್ಲರೂ ಸುಮ್ಮನಿದ್ದಾರೆಂದು ಆರೋಪಿಸಿದರು.
ಸೌಲಭ್ಯ ಕೊರತೆ ಮಧ್ಯೆ ಪಾಲಿಕೆ ವಿಸ್ತರಣೆ ಪ್ರಶ್ನೆ: ಉಗ್ರ ನರಸಿಂಹೇಗೌಡ ಕಳವಳ
ಈಗಲೇ ಮೈಸೂರು 87 ಚದುರ ಕಿಲೋ ಮೀಟರ್ ಇದೆ. ಇದನ್ನು341ಚದುರ ಕಿಮೀಗೆ ವಿಸ್ತರಿಸಿ ಬೃಹತ್ ಪಾಲಿಕೆ ರಚಿಸಲು ಯೋಜಿಸಲಾಗಿದೆ. ಈ ಹಿಂದೆಯೇ 2030 ರ ವೇಳೆಗೆ ಮೈಸೂರು ಹೇಗಿರಬೇಕೆಂಬ ಯೋಜನೆ ಇತ್ತು. ಅದನ್ನು ಬದಿಗಿರಿಸಿ ಈಗ ಬೃಹತ್ ಮೈಸೂರು ಪಾಲಿಕೆ ರಚನೆಗೆ ಮುಂದಾಗಿದ್ದಾರೆ. ಇವರೇನು ವ್ಯವಸ್ಥಿತ ಮೈಸೂರು ರಚನೆಗೆ ಕಾರಣರಾದ ನಾಲ್ವಡಿ ಅವರಿಗಿಂತ ಮೇಧಾವಿಗಳೇನು ಎಂದು ಪ್ರಶ್ನಿಸಿದರು.
ಎಂಡಿಎನಲ್ಲಿ ಬಹಳಷ್ಟು ಮಂದಿ ಅಧಿಕಾರಿಗಳು ಹಲವಾರು ವರ್ಷಗಳಿಂದ ಅಲ್ಲಿಯೇ ತಳವೂರಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇದೇ ವೇಳೆ ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳನ್ನ ಮುಚ್ಚಿ ಮ್ಯಾಗ್ನೆಟ್ ಹೆಸರಿನಲ್ಲಿ ಕೆಪಿಎಸ್ ಶಾಲೆ ತೆರೆಯಲು ಮುಂದಾಗಿ ಏಷ್ಯನ್ ಅಭಿವೃದ್ಧಿ ಬ್ಯಾಂಕ್‌ಗೆ ಸುಮಾರು 2500 ಕೋಟಿ ಸಾಲಕ್ಕೆ ಕೈಚಾಚಿದೆ. ಮೈಸೂರು ಮಹಾ ನಗರ ಪಾಲಿಕೆಯಲ್ಲಿಯೂ ಹಣವಿಲ್ಲ. ಹೀಗಾಗಿ ಸುಮಾರು 5 ಸಾವಿರ ಕೋಟಿ ರೂ. ಬೇಡುವ ಬೃಹತ್ ಮಹಾ ನಗರ ಪಾಲಿಕೆ ರಚನೆ ಮಾಡಿದಲ್ಲಿ ನಿರ್ವಹಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಮೈಸೂರಿನ ಶಾಸಕರೊಬ್ಬರು ತಮ್ಮ ವ್ಯಾಪ್ತಿಯಲ್ಲಿ ಕೃಷಿ ಭೂಮಿಯ ಅಚ್ಚುಕಟ್ಟು ಇಲ್ಲದ ಕಟ್ಟೆಯೊಂದಕ್ಕೆ ಕಾವೇರಿ ನದಿಯಿಂದ ನೀರು ತುಂಬಿಸಲು 50 ಕೋಟಿ ಮಂಜೂರು ಮಾಡಿಸಿಕೊಂಡಿದ್ದಾರೆ. ಇವರು ತಮಗೆ ಮತ ನೀಡಿದ ರೈತರಿಂದ ಅತಿ ಕಡಿಮೆ ಬೆಲೆಗೆ ಭೂಮಿ ಖರೀದಿಸಿ ಅಧಿಕ ಬೆಲೆಗೆ ಮಾರಿಕೊಂಡ ವಂಚಕರಾಗಿದ್ದಾರೆ. ಇಂತಹವರೆಲ್ಲ ಬೃಹತ್ ಮೈಸೂರು ಪಾಲಿಕೆ ರಚನೆ ಹಿಂದಿದ್ದಾರೆ ಎಂದು ಆರೋಪಿಸಿದರು.
ಈಗಿನ ಪಾಲಿಕೆ ವ್ಯಾಪ್ತಿಯ ಕೆರೆ ಕಟ್ಟೆ ಸಂರಕ್ಷಣೆಯೇ ಆಗಿಲ್ಲ, ಕುಡಿಯಲು ಯೋಗ್ಯವಾದ, ಜೀವಪರ ನದಿ ಮೂಲಕ ನೀರು ನೀಡುತ್ತಿಲ್ಲ. ಹೀಗಿರುವಾಗ ಬೃಹತ ಮೈಸೂರು ಮಹಾ ನಗರ ಪಾಲಿಕೆ ರಚನೆ ಮೂಲಕ ಮೈಸೂರನ್ನು ರೋಗಗ್ರಸ್ಥ ಮಾಡಲು ಹೊರಟಿದ್ದಾರೆ. ನಮಗೆ ಸುಂದರವಾದ, ಜೀವಿಸಲು ಯೋಗ್ಯವಾದ ರೀತಿ ಮೈಸೂರು ಇರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಿ ಬೃಹತ್ ಮೈಸೂರು ಮಹಾ ನಗರ ಪಾಲಿಕೆ ರಚನೆ ನಿರ್ಧಾರ ಕೈಬಿಡಬೇಕೆಂದು ಆಗ್ರಹಿಸಿದರು.
ಇನ್ನಿತರ ಪದಾಧಿಕಾರಿಗಳಾದ ಚಂದ್ರಶೇಖರ ಮೇಟಿ, ಅಭಿರುಚಿ ಗಣೇಶ್ ಹಾಜರಿದ್ದರು.



