HOMENews

Mysuru | ಯುವಕನ ಅಪಹರಣ, ಬಲವಂತವಾಗಿ ಮಂಗಳಮುಖಿ ವೇಷದಲ್ಲಿ ಕಲೆಕ್ಷನ್: ಲಷ್ಕರ್ ಠಾಣೆಗೆ ದೂರು

ಮೈಸೂರು, ಏಪ್ರಿಲ್ 13: ನಗರದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಯುವಕನನ್ನು ಅಪಹರಿಸಿ ಬಲವಂತವಾಗಿ ಮಂಗಳಮುಖಿ ವೇಷದಲ್ಲಿ ಬೀದಿಗಳಲ್ಲಿ ಕಲೆಕ್ಷನ್ ಮಾಡಿಸಿದ ಆರೋಪ ಕೇಳಿಬಂದಿದೆ. ಈ ಕುರಿತು ನೊಂದ ಯುವಕ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ಇದೀಗ ತನಿಖಾ ಹಂತದಲ್ಲಿದೆ.

ಅನಿಲ್ ಕುಮಾರ್ ಅಲಿಯಾಸ್ ಅಕ್ಷತಾ ಎಂಬುವವರೇ ದೂರು ನೀಡಿದ ಯುವಕ. ಮೈಸೂರು ಜಿಲ್ಲೆಯ ನಂಜನಗೂಡಿನ ತ್ಯಾಗರಾಜ ಕಾಲೋನಿಯ ನಿವಾಸಿಯಾದ ಅನಿಲ್ ಕುಮಾರ್, ಸುಮಾರು ನಾಲ್ಕು ತಿಂಗಳ ಹಿಂದೆ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಬಸ್‌ಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಆರಂಭವಾಗಿದೆ ಎಂದು ಹೇಳಿಕೊಂಡಿದ್ದಾರೆ. ಆ ಸಮಯದಲ್ಲಿ ಮಂಗಳಮುಖಿ ಅನಿತಾ ಹಾಗೂ ಆಕೆಯ ತಂಡದವರ ಪರಿಚಯವಾಗಿದ್ದು, ನಂತರ ಈ ಪರಿಚಯವೇ ಅಪಹರಣಕ್ಕೆ ಕಾರಣವಾಯಿತೆಂದು ಅವರು ಆರೋಪಿಸಿದ್ದಾರೆ.

ದೂರಿನಲ್ಲಿ ನೀಡಿದ ವಿವರಗಳ ಪ್ರಕಾರ, ಅನಿಲ್ ಕುಮಾರ್ ಅವರನ್ನು ಮುಸುಕು ಹಾಕಿ ಬಲವಂತವಾಗಿ ಕಿಡ್ನಾಪ್ ಮಾಡಿ ಮಂಗಳೂರಿಗೆ ಕರೆದೊಯ್ಯಲಾಗಿದೆ. ಅಲ್ಲಿ ಅವರಿಗೆ ಸೀರೆ, ನೈಟಿ, ಕಿವಿಗೆ ಓಲೆ, ಮೂಗಿಗೆ ಬೊಟ್ಟು ಹಾಕಿಸಿ ಮಂಗಳಮುಖಿಯಂತೆ ವೇಷ ಹಾಕಿಸಲಾಗಿದೆ. ಬಳಿಕ ನಗರದಲ್ಲಿನ ಬೀದಿಗಳು ಹಾಗೂ ಅಂಗಡಿಗಳ ಮುಂದೆ ನಿಲ್ಲಿಸಿ ಕಲೆಕ್ಷನ್ ಮಾಡಿಸುವಂತೆ ಒತ್ತಾಯಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರತಿದಿನ ಸುಮಾರು 2 ರಿಂದ 3 ಸಾವಿರ ರೂಪಾಯಿವರೆಗೆ ಕಲೆಕ್ಷನ್ ಮಾಡಿಸಿಕೊಂಡು, ಆ ಹಣವನ್ನು ಸಂಪೂರ್ಣವಾಗಿ ತಮ್ಮ ಬಳಿ ಪಡೆದುಕೊಂಡಿದ್ದಾರೆ ಎಂದು ಅನಿಲ್ ಕುಮಾರ್ ಆರೋಪಿಸಿದ್ದಾರೆ. ಜೊತೆಗೆ, ಈ ವೇಳೆ ಅವರಿಂದ ಬಲವಂತವಾಗಿ ರೀಲ್ಸ್‌ ವಿಡಿಯೋಗಳನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಲಾಗಿದೆ. ಇದರಿಂದ ಯುವಕ ಮಾನಸಿಕವಾಗಿ ತೀವ್ರ ಹಿನ್ನಡೆಯನ್ನು ಅನುಭವಿಸಿದ್ದಾನೆ ಎಂದು ತಿಳಿದುಬಂದಿದೆ.

ಈ ಘಟನೆ ನಾಲ್ಕು ತಿಂಗಳ ಕಾಲ ಮುಂದುವರೆದಿದ್ದು, ಬಳಿಕ ಯಾವುದೋ ರೀತಿಯಲ್ಲಿ ಅಲ್ಲಿಂದ ತಪ್ಪಿಸಿಕೊಂಡು ಮೈಸೂರಿಗೆ ವಾಪಸ್ಸಾದ ಅನಿಲ್ ಕುಮಾರ್, ಇದೀಗ ಧೈರ್ಯ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ಗಂಭೀರತೆಯನ್ನು ಮನಗಂಡಿರುವ ಲಷ್ಕರ್ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪೊಲೀಸರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸುವ ಸಾಧ್ಯತೆ ಇದ್ದು, ಮಂಗಳೂರು ಸೇರಿದಂತೆ ಸಂಬಂಧಿಸಿದ ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಲಾದ ವಿಡಿಯೋಗಳನ್ನೂ ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ಪ್ರಕರಣ ಸಮಾಜದಲ್ಲಿ ಆತಂಕ ಹುಟ್ಟಿಸಿದ್ದು, ಸಾರ್ವಜನಿಕರು ಅನಪರಿಚಿತರೊಂದಿಗೆ ಎಚ್ಚರಿಕೆಯಿಂದ ವರ್ತಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಇನ್ನೂ ತನಿಖೆ ಮುಂದುವರಿದಿದ್ದು, ಸತ್ಯಾಸತ್ಯತೆಗಳನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ.

Leave a Reply