HOMENews

ಮಾ. 23ರಂದು ಶೇಷಾದ್ರಿಪುರಂ ತಾಂತ್ರಿಕ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡ ಉದ್ಘಾಟನೆ

ಮೈಸೂರು:- ನಗರದ ಕಡಕೊಳ ಕೈಗಾರಿಕಾ ಪ್ರದೇಶದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮತ್ತೊಂದು ಮಹತ್ವದ ಸೇರ್ಪಡೆಯಾಗಿ, ಶೇಷಾದ್ರಿಪುರಂ ಎಜುಕೇಶನಲ್ ಟ್ರಸ್ಟ್ ಅಧೀನದ ಶೇಷಾದ್ರಿಪುರಂ ತಾಂತ್ರಿಕ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡ ಉದ್ಘಾಟನೆ ಮಾ. 23ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಜಂಟಿ ಕಾರ್ಯದರ್ಶಿ ಶೇಷ ನಾರಾಯಣ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕಾರ್ಯಕ್ರಮವನ್ನು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಲಿದ್ದು, ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಡಾ. ಎಸ್. ವಿದ್ಯಾಶಂಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣ ದತ್ತಿಯ ಅಧ್ಯಕ್ಷ ಎನ್. ಆರ್. ಪಂಡಿತಾರಾಧ್ಯ ವಹಿಸಲಿದ್ದಾರೆ.

ಶೇಷಾದ್ರಿಪುರಂ ತಾಂತ್ರಿಕ ಶಿಕ್ಷಣ ಸಂಸ್ಥೆ ಈಗಾಗಲೇ ತನ್ನ ಶೈಕ್ಷಣಿಕ ಗುಣಮಟ್ಟ ಮತ್ತು ಶಿಸ್ತುಬದ್ಧ ವ್ಯವಸ್ಥೆಯಿಂದ ವಿದ್ಯಾರ್ಥಿಗಳ ವಿಶ್ವಾಸ ಗಳಿಸಿದೆ. ನೂತನ ಕಟ್ಟಡವು ಈ ಸಾಧನೆಗೆ ಇನ್ನಷ್ಟು ಬಲ ನೀಡಲಿದ್ದು, ಆಧುನಿಕ ಮೂಲಸೌಕರ್ಯಗಳೊಂದಿಗೆ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ಒದಗಿಸಲಿದೆ.

ಈ ಕಟ್ಟಡದಲ್ಲಿ ಸುಸಜ್ಜಿತ ಪ್ರಯೋಗಾಲಯಗಳು, ಆಧುನಿಕ ತರಗತಿಗಳು, ತಾಂತ್ರಿಕ ಅಧ್ಯಯನಕ್ಕೆ ಅಗತ್ಯವಾದ ಎಲ್ಲಾ ಸೌಲಭ್ಯಗಳು ಹಾಗೂ ಅನುಭವಿ ಅಧ್ಯಾಪಕರ ಮಾರ್ಗದರ್ಶನ ಸಿಗಲಿದೆ ಎಂದು ಶೇಷ ನಾರಾಯಣ ಹೇಳಿದರು.

ಶಿಕ್ಷಣದಲ್ಲಿ ಪರಂಪರೆ ಮತ್ತು ನವೀನತೆ

ಸಂಸ್ಥೆಯು ತನ್ನ ಗೌರವಯುತ ಪರಂಪರೆಯನ್ನು ಮುಂದುವರಿಸಿಕೊಂಡು, ಉದ್ಯೋಗಮುಖಿ ಮತ್ತು ತಾಂತ್ರಿಕ ಜ್ಞಾನವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಪೂರಕವಾದ ಅಧ್ಯಯನ ವಾತಾವರಣವನ್ನು ನಿರ್ಮಿಸುವತ್ತ ಸಂಸ್ಥೆ ವಿಶೇಷ ಗಮನ ಹರಿಸಿದೆ.

ಈ ಸಂದರ್ಭದಲ್ಲಿ ಟ್ರಸ್ಟಿ ಅನಂತಾಂ, ಪ್ರೊ. ರಾಜಾರಾವ್, ಡಾ. ಸುರೇಶ್ ಮನೋಜ್ ಹಾಗೂ ಪ್ರಾಚಾರ್ಯ ಡಾ. ಪ್ರಹ್ಲಾದ್ ರಾವ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಈ ನೂತನ ಕಟ್ಟಡವು ಕೇವಲ ಇಟ್ಟಿಗೆ-ಸಿಮೆಂಟ್ ಕಟ್ಟಡವಲ್ಲ…ಇದು ಸಾವಿರಾರು ವಿದ್ಯಾರ್ಥಿಗಳ ಕನಸುಗಳಿಗೆ ಹೊಸ ವಿಳಾಸ, ಭವಿಷ್ಯದ ಇಂಜಿನಿಯರ್‌ಗಳಿಗೆ ಹೊಸ ಪ್ರಯೋಗಾಲಯ,

ಮತ್ತು ಜ್ಞಾನಕ್ಕೆ ಮತ್ತೊಂದು ದೀಪಸ್ತಂಭ.  ಮಾ. 23ರಂದು ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ ಶಿಕ್ಷಣ ಕ್ಷೇತ್ರದ ಗಣ್ಯರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

Leave a Reply