
ಕೆಸ್ತೂರು ಪಂಚಾಯಿತಿಯಲ್ಲಿ ಮಹಿಳೆಯರಿಗೆ ಉದ್ಯಮ ಆರಂಭಿಸುವ ಕುರಿತು ವಿಶೇಷ ತರಬೇತಿ
ವರದಿ:-ವಡ್ಡರಕೊಪ್ಪಲು ಶಿವರಾಮು.
ಕೆ ಆರ್ ನಗರ. ಮಾ. 03:- ಕೆಸ್ತೂರು ಗ್ರಾಮ ಪಂಚಾಯಿತಿಯ ಪಂಚಾಯತ್ ಸಭಾಂಗಣದಲ್ಲಿ ಐಟಿಸಿ ಮತ್ತು ಔಟ್ ರೀಚ್ ಸಂಸ್ಥೆಯಿಂದ ಮಹಿಳಾ ಸ್ವಸಾಯ ಸಂಘದ ಸದಸ್ಯರುಗಳಿಗೆ ನವ ಉದ್ಯಮ ಸ್ಥಾಪನೆಗೆ ಸಂಬಂಧಪಟ್ಟಂತೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಗಿಡಕ್ಕೆ ನೀರು ಎರೆಯುವುದರ ಮುಖಾಂತರ ಈ ತರಬೇತಿ ಕಾರ್ಯಕ್ರಮವನ್ನು ಕೆಸ್ತೂರು ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ದಿವ್ಯ ರವರು ಉದ್ಘಾಟಿಸಿದರು ಹಾಗೂ ಐಟಿಸಿ ಮತ್ತು ಔಟ್ ರೀಚ್ ಸಂಸ್ಥೆಯು ಕಳೆದ ಅನೇಕ ವರ್ಷಗಳಿಂದ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯ ಸಂಬಂಧಪಟ್ಟಂತೆ ಪಂಚಾಯತ್ ಮಟ್ಟದಲ್ಲಿ ಚುನಾವಣಾ ಪ್ರತಿನಿಧಿಗಳಿಗೆ ಪಂಚಾಯತ್ ಸಿಬ್ಬಂದಿಗಳಿಗೆ ಒಕ್ಕೂಟ ಸದಸ್ಯರುಗಳಿಗೆ ಸಾಮರ್ಥ್ಯ ಅಭಿವೃದ್ಧಿ ತರಬೇತಿಗಳನ್ನು ಕಾಲಕಾಲಕ್ಕೆ ಆಯೋಜನೆ ಮಾಡುತ್ತಿದೆ ಹಾಗೂ ಇದಕ್ಕೆ ಸಂಬಂಧಿಸಿದಂತೆ ಬೀದಿ ನಾಟಕ ಗೋಡೆ ಬರಹ, ಬಿತ್ತಿ ಚಿತ್ರಗಳ ಹಂಚಿಕೆ ಮುಖಾಂತರ ಜಾಗೃತಿ ಕಾರ್ಯಕ್ರಮವನ್ನು ಮೂಡಿಸುತ್ತಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು,

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಔಟ್ ರೀಚ್ ಸಂಸ್ಥೆಯ ಕೃಷ್ಣಯ್ಯ ರವರು ಮಾತನಾಡಿ ಔಟ್ ರೀಚ್ ಸಂಸ್ಥೆಯು ಹುಣಸೂರು ಕೆ ಆರ್ ನಗರ ಸಾಲಿಗ್ರಾಮ ಮತ್ತು ಅರಕಲಗೂಡು ತಾಲೂಕು ವ್ಯಾಪ್ತಿಯಲ್ಲಿ 72 ಸರ್ಕಾರಿ ಶಾಲೆಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕ, ತಡೆಗೋಡೆ ನಿರ್ಮಾಣ, ಹೈಟೆಕ್ ಶೌಚಾಲಯ, ಕೊಠಡಿಗಳು, ಕೈ ತೊಳೆಯುವ ಘಟಕಗಳನ್ನು ನಿರ್ಮಾಣ ಮಾಡಿದ್ದು, ಗ್ರಾಮ ಪಂಚಾಯಿತಿಗಳಲ್ಲಿ ಕಸ ಸಂಗ್ರಹಣೆಗಾರರಿಗೆ ಕಾಲಕಾಲಕ್ಕೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಿ ಜೊತೆಗೆ ಅವರ ಆರ್ಥಿಕ ಸ್ವಾವಲಂಬನೆಗೆ ಹಲವಾರು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ, ಕಳೆದ ಬಾರಿಕೇಂದ್ರ ಸರ್ಕಾರದ ಲೈಟ್ ಹೌಸ್ ಇನಿಶಿಯೇಟಿವ್ ಕಾರ್ಯಕ್ರಮದಲ್ಲಿ ಬಿಳಿಕೆರೆ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ಬಾರಿ ಹುಣಸೂರು ತಾಲೂಕಿನ 40 ಗ್ರಾಮ ಪಂಚಾಯಿತಿಗಳನ್ನು ಸಹ ಲೈಟ್ ಹೌಸ್ ಇನಿಷಿಯೇಟಿವ್ ಎರಡನೇ ಹಂತದಲ್ಲಿ ಆಯ್ಕೆ ಮಾಡಿಕೊಂಡಿದ್ದು ಇದರಲ್ಲಿ ಐದು ಗ್ರಾಮ ಪಂಚಾಯಿತಿಗಳನ್ನು ಮಾದರಿ ಗ್ರಾಮ ಪಂಚಾಯಿತಿಗಳನ್ನಾಗಿ ಘೋಷಣೆ ಮಾಡುವ ಹಂತದಲ್ಲಿ ಹಲವಾರು ಕಾಮಗಾರಿಗಳು ಪ್ರಗತಿಯಲ್ಲಿವೆ ಹಾಗೂ ಈ ತಾಲೂಕು ವ್ಯಾಪ್ತಿಗಳಲ್ಲಿ 125 ದೇವಸ್ಥಾನಗಳಿಗೆ ಡ್ರಮ್‌ಗಳನ್ನು ನೀಡುವುದರ ಮುಖಾಂತರ ಸ್ವಚ್ಛ ಹಾಗೂ ಹಸಿರು ಪರಿಸರ ನಿರ್ಮಾಣಕ್ಕೆ ಪಣತೊಟ್ಟಿದೆ ಹಾಗೂ ಅಪೇಕ್ಷೆ ಪಡುವ ಮನೆಗಳಿಗೂ ಸಹ ಪೈಪ್ ಮತ್ತು ಡ್ರಮ್ ಗಳನ್ನು ನೀಡುವುದರ ಮುಖಾಂತರ ಮನೆಯಲ್ಲಿಯೇ ಹಸಿ ಪದಾರ್ಥಗಳಿಂದ ಗೊಬ್ಬರ ತಯಾರಿಸುವ ಕಾರ್ಯಕ್ರಮಕ್ಕೆ ಅಗತ್ಯ ನೆರವು ನೀಡುತ್ತಿದೆ, ಮಹಿಳಾ ಸ್ವಸಹಾಯ ಸಂಘದ ಸದಸ್ಯರುಗಳಿಗೆ ತರಬೇತಿ ನೀಡುವುದರ ಮುಖಾಂತರ ಆರ್ಥಿಕ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ಸಹಕಾರ ನೀಡುತ್ತಿದೆ. ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಗೆ ಸಂಬಂಧಪಟ್ಟಂತೆ 75 ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಐಟಿಸಿ ಔಟ್ ರೀಚ್ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಈ ದಿನದ ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶ್ರೀಯುತ ರಮೇಶ್ ರವರು ಮಹಿಳಾ ಸದಸ್ಯರುಗಳು ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಉತ್ಪಾದಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು, ಸಣ್ಣ ಸಣ್ಣ ಉದ್ಯಮಿಗಳನ್ನು ಪ್ರಾರಂಭಿಸಬೇಕು, ವ್ಯಾಪಾರದಂತ ಮಾರ್ಗಗಳನ್ನು ಹುಡುಕಿ ಕೊಳ್ಳಬೇಕು, ಅಣಬೆ ಬೇಸಾಯ, ಕೋಳಿ ಸಾಕಾಣಿಕೆ, ಬ್ಯೂಟಿ ಪಾರ್ಲರ್,ಸಿದ್ದ ಉಡುಪು ತಯಾರಿಕೆ,ಬ್ಯಾಗ್ ತಯಾರಿಕೆ, ಗಂಧದ ಕಡ್ಡಿ ತಯಾರಿಕೆ, ಹೀಗೆ ಅನೇಕ ಸಣ್ಣ ಸಣ್ಣ ಉದ್ಯಮಗಳನ್ನು ಸ್ಥಾಪಿಸುವುದರ ಮುಖಾಂತರ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಸುವುದರ ಜೊತೆಗೆ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬೇಕು ಎಂದು ತಿಳಿಸಿದರು.
ತರಬೇತಿಯಲ್ಲಿ ಮಹಿಳೆಯರಿಗೆ ಅನೇಕ ಕಾರ್ಯ ಚಟುವಟಿಕೆಗಳ ಮುಖಾಂತರ ಉದ್ಯಮಗಳನ್ನು ಪ್ರಾರಂಭಿಸಲು ನೆರವು ನೀಡುವ ಸಂಸ್ಥೆಗಳು, ಹಾಗೂ ಮಾರುಕಟ್ಟೆ ಸೌಲಭ್ಯಗಳು ಮತ್ತು ಪ್ರಾದೇಶಿಕತೆಗೆ ಅನುಗುಣವಾಗಿ ಮಾರುಕಟ್ಟೆಯ ಸಮಸ್ಯೆಯನ್ನು ಎದುರಿಸದೆ ಸ್ಥಳೀಯರಿಗೆ ಅನುಕೂಲಕರ ಉದ್ಯಮಗಳನ್ನು ಪ್ರಾರಂಭಿಸಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ದಿವ್ಯ, ಕಾರ್ಯದರ್ಶಿ ಬೋರೇಗೌಡ, ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಮೇಶ್ ಎ. ಪಿ, MBK ಹೇಮಾ, ಅಶೋಕ್, ಗುರುಪ್ರಸಾದ್, ಮಧುಚಂದ್ರ, ಹಾಗೂ ಮಹಿಳಾ ಸದಸ್ಯರುಗಳು ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.





