HOMENewsPolitical

ನಿಖಿಲ್ ಕುಮಾರಸ್ವಾಮಿ ಫೆ.18ರಿಂದ ಮೈಸೂರಿನಲ್ಲಿ ‘ಜನರೊಂದಿಗೆ ಜನತಾ ದಳ ಅಭಿಯಾನ ಆರಂಭ

ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಜನಸಂಪರ್ಕ ಯಾತ್ರೆ

ಮೈಸೂರು, ಫೆ.16: ಕರ್ನಾಟಕ ರಾಜ್ಯ ರಾಜಕೀಯ ಚಟುವಟಿಕೆಗಳ ಜೊತೆಯಲ್ಲಿಯೆ   ಸಾರ್ವಜನಿಕ ಸಂಪರ್ಕ ಹಾಗೂ ಪಕ್ಷವನ್ನು ಸಂಘಟನೆ ಮೂಲಕ ಬಲಪಡಿಸುವ ಉದ್ದೇಶದಿಂದ Janata Dal (Secular) (ಜೆಡಿಎಸ್) ಪಕ್ಷವು ಮೈಸೂರು ಜಿಲ್ಲೆಯಲ್ಲಿ ಹೊಸ ಅಭಿಯಾನಕ್ಕೆ ಚಾಲನೆ ನೀಡಲು ಮುಂದಾಗಿದೆ. ಯುವ ಘಟಕದ ರಾಜ್ಯಾಧ್ಯಕ್ಷ ನಿಕಿಲ್ ಕುಮಾರ ಸ್ವಾಮಿ Nikhil Kumaraswamy ಅವರ ಮುಂದಾಳತ್ವದಲ್ಲಿ  ಫೆಬ್ರವರಿ 18ರಿಂದ “ಜನರೊಂದಿಗೆ ಜನತಾ ದಳ” ಎಂಬ ಶೀರ್ಷಿಕೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಗಳು ಮತ್ತು ಪಕ್ಷದ ಸದಸ್ಯತ್ವ ಅಭಿಯಾನ ಆರಂಭವಾಗಲಿದೆ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:-  ಕೆ.ಆರ್.ನಗರ ರಾಜಕೀಯದಲ್ಲಿ ಹೊಸ ಸಮೀಕರಣವೇ? ಪುತ್ರನತ್ತ ಹೊಣೆಗಾರಿಕೆ ಒಲಿಯುತ್ತದೆಯೇ ಎಂಬ ಚರ್ಚೆ

ರಾಜ್ಯದಲ್ಲಿ ಜೆಡಿಎಸ್ ಸಂಘಟನ ಬಲಕ್ಕೆ ಹೆಜ್ಜೆ: ಕಾರ್ಯಕರ್ತರ ಸಭೆಗಳು ಆರಂಭ

ಸೋಮವಾರ ಮೈಸೂರಿನಲ್ಲಿ ಖಾಸಗಿ ಹೋಟೆಲ್ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾ.ರಾ.ಮಹೇಶ್  ಈ ಕಾರ್ಯಕ್ರಮದ ಉದ್ದೇಶ ಪಕ್ಷದ ಮೂಲ ಸಂಘಟನೆಗೆ ಹೊಸ ಉತ್ಸಾಹ ಹಾಗೂ ಚೈತನ್ಯ ತುಂಬುವುದು ಹಾಗೂ ಗ್ರಾಮಮಟ್ಟದಿಂದ ನಗರಮಟ್ಟದವರೆಗೆ ಜೆಡಿಎಸ್ ಕಾರ್ಯಕರ್ತರನ್ನು ಸಕ್ರಿಯಗೊಳಿಸುವುದಾಗಿದೆ ಎಂದರು. ಪಕ್ಷದ ಮುಂದಿನ ಭವಿಷ್ಯದ ನಾಯಕತ್ವವನ್ನು ಯುವಕರೊಂದಿಗೆ ಜತೆಗೂಡಿಸುವ ನಿಟ್ಟಿನಲ್ಲಿ ನಿಖಿಲ್ ಕುಮಾರಸ್ವಾಮಿ ಜಿಲ್ಲೆಯಲ್ಲಿ  ಅಭಿಯಾನ ನಡೆಸಲಿದ್ದು, ಸಾರ್ವಜನಿಕರ ಸಮಸ್ಯೆಗಳನ್ನು ನಿಖಿಲ್ ಕುಮಾರ ಸ್ವಾಮಿರವರೆ ನೇರವಾಗಿ ಕೇಳುವ ಪ್ರಯತ್ನ ಇದಾಗಿದೆ ಎಂದು ತಿಳಿಸಿದರು.

ನಿಖಿಲ್ ಕುಮಾರಸ್ವಾಮಿ ಪಕ್ಷದ ಹಿರಿಯ ನಾಯಕರ ಕುಟುಂಬದ ಹಿನ್ನೆಲೆಯಲ್ಲಿದ್ದರೂ ವೈಯಕ್ತಿಕ ಅಧಿಕಾರದ ಆಸೆ ಇಟ್ಟುಕೋಳ್ಳದೆ  ಪಕ್ಷದ ಸಂಘಟನೆಗೆ ಒತ್ತು ಕೋಡುತ್ತಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಅವರಿಗೆ ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಸಾಮಾನ್ಯ ಜನರೊಂದಿಗಿನ ಸಂವಾದ ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ನೇರ ಸಂಪರ್ಕದಿಂದ ಪಕ್ಷದ ನೆಲೆಯನ್ನೂ ಬಲಪಡಿಸುವ ಸಾಧ್ಯತೆ ಇದೆ ಎಂದು ಸಾ.ರಾ.ಮಹೇಶ್ ಅಭಿಪ್ರಾಯಪಟ್ಟರು.

 

ಇನ್ನೊಂದೆಡೆ ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ನಿಖಿಲ್ ಕುಮಾರಸ್ವಾಮಿ ಈಗಾಗಲೇ ರಾಜ್ಯದ 52 ಕ್ಷೇತ್ರಗಳಲ್ಲಿ “ಜನರೊಂದಿಗೆ ಜನತಾ ದಳ” ಕಾರ್ಯಕ್ರಮ ನಡೆಸಿದ್ದು ಸುಮಾರು 9 ಸಾವಿರ ಕಿಲೋಮೀಟರ್ ಪ್ರಯಾಣ ಮಾಡಿದ್ದಾರೆ ಎಂದು ತಿಳಿಸಿದರು. ಈ ಅಭಿಯಾನ ಪಕ್ಷದ ಕಾರ್ಯಕರ್ತರಿಗೆ ಹೊಸ ಉತ್ಸಾಹ ತುಂಬಿದ್ದು, ಸದಸ್ಯತ್ವ ಹೆಚ್ಚಿಸಲು ಸಹಕಾರಿ ಆಗಿದೆ ಎಂದರು. ಮುಂದಿನ ಕಾರ್ಯಕ್ರಮಗಳಿಗೂ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.

ಸಿಎಂ ವಿರುದ್ಧ ಸಾ.ರಾ.ಮಹೇಶ್ ವಾಗ್ದಾಳಿ ನಡುವೆ ಜೆಡಿಎಸ್ ಅಭಿಯಾನ ಘೋಷಣೆ

ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಸಾ.ರಾ.ಮಹೇಶ್ ತೀವ್ರ ವಾಗ್ದಾಳಿ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಾಧನೆ ಎಂದರೆ ರಾಜ್ಯದ ಪ್ರತಿಯೊಬ್ಬರ ಮೇಲೂ ಸುಮಾರು ಒಂದು ಲಕ್ಷ ರೂಪಾಯಿ ಸಾಲದ ಭಾರ ಹಾಕಿರುವುದೇ ಸಾಧನೆ ಎಂದು ವ್ಯಂಗ್ಯವಾಡಿದರು. ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರೊಂದಿಗೆ ಹೋಲಿಕೆ ಮಾಡಿಕೊಳ್ಳುವ ಬದಲು ಸರ್ಕಾರ ತನ್ನ ಸಾಧನೆಗಳನ್ನು ಜನತೆಗೆ ವಿವರಿಸಬೇಕು ಎಂದು ಅವರು ಪ್ರಶ್ನಿಸಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟ ಅನುಭವಿಸುತ್ತಿದ್ದರೂ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ಹೇಳಲಾಗುತ್ತಿದೆ ಎಂದು ಟೀಕಿಸಿದರು. ಮೈಸೂರಿನ ಜೆ.ಸಿ.ನಗರ ಪ್ರದೇಶದಲ್ಲಿ ಕೆರೆಗೆ ಖಾಸಗಿ ವ್ಯಕ್ತಿಯೊಬ್ಬರು ಬೇಲಿ ಹಾಕಿರುವ ಘಟನೆ ಆಡಳಿತದ ನಿರ್ಲಕ್ಷ್ಯತೆಯನ್ನು ತೋರಿಸುತ್ತದೆ ಎಂದು ಹೇಳಿದರು. ಸಾರ್ವಜನಿಕ ಆಸ್ತಿಗಳ ರಕ್ಷಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ಇದನ್ನೂ ಓದಿ:-  ಸಾಹಿತಿ ಕವಿ ರಾಜಕಾರಣಿ ಹಳ್ಳಿಹಕ್ಕಿ ಹೆಚ್ ವಿಶ್ವನಾಥ್ ರಾಜಕೀಯ ನಡೆ ಯಾವ ಕಡೆ?

ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ 8 ರಿಂದ 10 ವಾಹನಗಳನ್ನು ಸ್ಕ್ರಾಪ್‌ಗೆ ಹಾಕಿರುವ ಪ್ರಕರಣವನ್ನೂ ಉದಾಹರಿಸಿ ಆಡಳಿತ ವ್ಯವಸ್ಥೆಯ ಮೇಲಿನ ಪ್ರಶ್ನೆಗಳನ್ನು ಎತ್ತಿದರು. ಆರ್.ಟಿ.ಐ ಕಾರ್ಯಕರ್ತನೊಬ್ಬ ಅವುಗಳ ದಾಖಲೆಗಳ ಕುರಿತು ಮಾಹಿತಿ ಕೇಳಿದಾಗ ಅಧಿಕಾರಿಗಳ ಮೇಲೆ ಒತ್ತಡ ತಂದು ವರ್ಗಾವಣೆ ಮಾಡಿಸಿದ ಘಟನೆ ಆಡಳಿತದ ದುರ್ಬಲತೆಯನ್ನು ಬಿಂಬಿಸುತ್ತದೆ ಎಂದು ಹೇಳಿದರು.

ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ: ಮೈಸೂರಿನಲ್ಲಿ ಜೆಡಿಎಸ್ ಚಟುವಟಿಕೆ ಜೋರಾಗಲಿದೆ

ಜೆಡಿಎಸ್ ಅಭಿಯಾನ ಕಾರ್ಯಕ್ರಮದ ವೇಳಾಪಟ್ಟಿಯ ವಿವರ ನೀಡಿದ ಸಾ.ರಾ.ಮಹೇಶ್ ಅವರು, ಫೆ.18ರಂದು ಬೆಳಗ್ಗೆ 11 ಗಂಟೆಗೆ ಮಾಜಿ ಶಾಸಕ ಮಹದೇವು ಅವರ ನೇತೃತ್ವದಲ್ಲಿ ಪಿರಿಯಾಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಯಲಿದೆ ಎಂದು ತಿಳಿಸಿದರು . ನಂತರ ಫೆ.22ರಂದು ಸಂಜೆ 4ಕ್ಕೆ ಕೆ.ಆರ್.ನಗರದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಹಂಪಾಪುರ ರಾಜಣ್ಣ ರವರ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿದ್ದು, ಫೆ.24ರಂದು ಸಂಜೆ 4ಕ್ಕೆ ತಿ.ನರಸೀಪುರ ಕ್ಷೇತ್ರದ ಬನ್ನೂರಿನಲ್ಲಿ ಮಾಜಿ ಶಾಸಕ ಅಶ್ವಿನ್ ಕುಮಾರ್ ಮುಂದಾಳತ್ವದಲ್ಲಿ ಸಭೆ ನಡೆಯಲಿದೆ. ಫೆ.25ರಂದು ಬೆಳಗ್ಗೆ 11ಕ್ಕೆ ಹುಣಸೂರಿನಲ್ಲಿ ಹಾಲಿ ಶಾಸಕ ಜಿ.ಡಿ.ಹರೀಶ್‌ಗೌಡ ನೇತೃತ್ವದಲ್ಲಿ ಮತ್ತೊಂದು ಪಕ್ಷದ  ಸಭೆ ನಡೆಯಲಿದೆ.

ಇದರೊಂದಿಗೆ ಎಚ್.ಡಿ.ಕೋಟೆ, ವರುಣ, ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ ಮತ್ತು ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿಯೂ ಸಭೆಗಳನ್ನು ನಡೆಸುವ ಯೋಜನೆ ಇದೆ. ಈ ಕ್ಷೇತ್ರಗಳ ಸಭೆಗಳ ದಿನಾಂಕಗಳನ್ನು ಅತಿ ಶೀಘ್ರದಲ್ಲೇ ತಿಳಿಸಲಾಗುವುದು ಎಂದು ತಿಳಿಸಿದರು. ಮೈಸೂರು ಜಿಲ್ಲೆಯಾದ್ಯಂತ ಸದಸ್ಯತ್ವ ಅಭಿಯಾನವನ್ನು ವಿಸ್ತರಿಸಿ ಹೆಚ್ಚಿನ ಜನರನ್ನು ಜೆಡಿಎಸ್ ಪಕ್ಷದ ಚಟುವಟಿಕೆಗಳಲ್ಲಿ ಸೇರಿಸುವುದು ಪ್ರಮುಖ ಉದ್ದೇಶವಾಗಿದೆ ಎಂದು ವಿವರಿಸಿದರು.

ಜೆಡಿಎಸ್ ಪಕ್ಷದ ಸಂಘಟನೆಗೆ ಇನ್ನಷ್ಟು ಚೈತನ್ಯ ನೀಡುವ ನಿಟ್ಟಿನಲ್ಲಿ ಮೈಸೂರು ಜಿಲ್ಲಾ ಹಾಗೂ ತಾಲೂಕು ಘಟಕಗಳ ಪುನರ್‌ ರಚನೆಯೂ ನಡೆಯುತ್ತಿದೆ. ಈಗಾಗಲೇ ಎಸ್.ಬಿ.ಎಂ. ಮಂಜು ಅವರನ್ನು ಮೈಸೂರು ನಗರಾಧ್ಯಕ್ಷರನ್ನಾಗಿ ಹಾಗೂ ಅಶ್ವಿನ್ ಕುಮಾರ್ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಅಗತ್ಯವಿದ್ದಲ್ಲಿ ತಾಲೂಕು ಮಟ್ಟದ ಪದಾಧಿಕಾರಿಗಳ ಬದಲಾವಣೆಗಳನ್ನೂ ಪರಿಗಣಿಸಲಾಗುವುದು ಎಂದು ಸಾ.ರಾ.ಮಹೇಶ್ ಹೇಳಿದರು. ಸಂಘಟನೆಗೆ ಯುವ ನಾಯಕತ್ವ ಮತ್ತು ಅನುಭವೀ ಕಾರ್ಯಕರ್ತರ ಅಗತ್ಯವಿದ್ದು, ಅದಕ್ಕೆ ತಕ್ಕಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹುಣಸೂರಿನ ಶಾಸಕ ಜಿ.ಡಿ. ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮಾಜಿ ಶಾಸಕರಾದ ಮಹದೇವು ಮತ್ತು ಅಶ್ವಿನ್ ಕುಮಾರ್  ಮಾಜಿ ಮೇಯರ್ ಲಿಂಗಪ್ಪ, ಎಂ,ಜಿ ರವಿ ಕುಮಾರ್,ಭಾಗ್ಯವತಿ,, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸಿ ಜೆ ದ್ವಾರಕೇಶ್ ರವರು, ಚಾಮರಾಜ ಕ್ಷೇತ್ರದ  ಮುಖಂಡರಾದ ರವಿ ರವರು, ವರುಣ ಕ್ಷೇತ್ರದ ಮುಖಂಡರಾದ ಅಭಿಷೇಕ್, ಹಾಗೂ ಮೈಸೂರು ನಗರ ಮತ್ತು ಜಿಲ್ಲಾ ಜೆಡಿಎಸ್ ವಿವಿಧ ಅಧ್ಯಕ್ಷರು, ಪದಾಧಿಕಾರಿಗಳು  ಮುಖಂಡರುಗಳು ಉಪಸ್ಥಿತರಿದ್ದರು ಕಾರ್ಯಕರ್ತರು ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕಾರ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದರು.

ಇದನ್ನೂ ಓದಿ:- ಜೆಡಿಎಸ್ ಏಕಚಕ್ರಾಧಿಪತ್ಯಕ್ಕೆ ಸವಾಲು: ಕೆಆರ್ ನಗರ ರಾಜಕೀಯ ಕಾದಾಟ

ಜೆಡಿಎಸ್ ಪಕ್ಷ ಮೈಸೂರು ಜಿಲ್ಲೆಯಲ್ಲಿ ಸಂಘಟನೆ ಬಲಪಡಿಸುವ ಉದ್ದೇಶದಿಂದ ಕೈಗೊಂಡಿರುವ ಈ ಅಭಿಯಾನ ರಾಜಕೀಯ ಚಟುವಟಿಕೆಗಳಿಗೆ ಹೊಸ ಚಲನೆ ನೀಡುವ ಸಾಧ್ಯತೆ ಇದೆ. ಜನರೊಂದಿಗೆ ನೇರ ಸಂಪರ್ಕ ಸಾಧಿಸುವ ಮೂಲಕ ಪಕ್ಷ ತನ್ನ ನೆಲೆಯನ್ನು ಗಟ್ಟಿಗೊಳಿಸಬಹುದೇ ಎಂಬುದನ್ನು ಮುಂದಿನ ದಿನಗಳಲ್ಲಿ ಗಮನಿಸಬೇಕಿದೆ.

Leave a Response