HOMENews

ಅಣುಕು ನ್ಯಾಯಾಲಯ ಸ್ಪರ್ಧೆ: ಕಾನೂನು ವಿದ್ಯಾರ್ಥಿಗಳ ವಾದ ಕೌಶಲ್ಯಕ್ಕೆ ವೇದಿಕೆ

ಮೈಸೂರು:-  ನಗರದ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಭಾನುವಾರ ನಡೆದ ಪ್ರಥಮ ರಾಷ್ಟ್ರೀಯ ಅಣುಕು ನ್ಯಾಯಾಲಯ (Moot Court) ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ, ಕಾನೂನು ವಿದ್ಯಾರ್ಥಿಗಳ ಪ್ರತಿಭೆಗೆ ಅದ್ಭುತ ವೇದಿಕೆಯಾಗಿತು.

ಕಾರ್ಯಕ್ರಮದಲ್ಲಿ ಗೌರವಾನ್ವಿತ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎಸ್. ಇಂದಿರೇಶ್ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, “ಅಣುಕು ನ್ಯಾಯಾಲಯವು ಕೇವಲ ಸ್ಪರ್ಧೆಯಲ್ಲ, ಅದು ಒಬ್ಬ ಉತ್ತಮ ನ್ಯಾಯವ್ಯಾದಿಯ ರೂಪುಗೊಳಿಸುವ ಮೊದಲ ಹೆಜ್ಜೆ” ಎಂದು ಅಭಿಪ್ರಾಯಪಟ್ಟರು. ಸಮರ್ಥ ಸಂಶೋಧನೆ ಹಾಗೂ ನಿರಂತರ ಅಭ್ಯಾಸದಿಂದ ವಿದ್ಯಾರ್ಥಿಗಳು ಯಾವುದೇ ಕಠಿಣ ಪ್ರಶ್ನೆಗೂ ನ್ಯಾಯಪೀಠದ ಮುಂದೆ ಆತ್ಮವಿಶ್ವಾಸದಿಂದ ಉತ್ತರಿಸಬಹುದೆಂದರು. ವಾದ ಮಂಡನೆ ಎಂದರೆ ಕೇವಲ ಮಾತಲ್ಲ, ಅದು ತಾರ್ಕಿಕತೆಯೊಂದಿಗೆ ನ್ಯಾಯಾಧೀಶರಿಗೆ ವಿಷಯವನ್ನು ಮನವರಿಕೆ ಮಾಡಿಸುವ ಕಲೆಯಾಗಿದೆ ಎಂದು ವಿವರಿಸಿದರು.

ಇನ್ನೋರ್ವ ಮುಖ್ಯ ಅತಿಥಿಯಾದ ಡಾ. ಎನ್. ಸತೀಶ್ ಗೌಡ ಅವರು ಮಾತನಾಡಿ, “ಮೂಟ್ ಕೋರ್ಟ್ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಸಂಶೋಧನಾ ಸಾಮರ್ಥ್ಯ ಹಾಗೂ ವಾದ ಮಂಡನೆ ಕೌಶಲ್ಯವನ್ನು ಅಭಿವೃದ್ಧಿಪಡಿಸುತ್ತವೆ” ಎಂದು ಹೇಳಿದರು.

 

ಸ್ಪರ್ಧೆಯಲ್ಲಿ ಪಿ.ಇ.ಎಸ್. ವಿಶ್ವವಿದ್ಯಾಲಯ ಮೊದಲ ಸ್ಥಾನ ಪಡೆದು ಪ್ರಶಸ್ತಿ ಕೈಸೇರಿಸಿಕೊಂಡರೆ, ವಿ.ವಿ. ಪುರಂ ಕಾನೂನು ಕಾಲೇಜು ದ್ವಿತೀಯ ಸ್ಥಾನವನ್ನು ಪಡೆದಿದೆ. ವಿವಿಧ ರಾಜ್ಯಗಳಿಂದ ಭಾಗವಹಿಸಿದ್ದ ಸುಮಾರು 35 ಕಾನೂನು ಕಾಲೇಜುಗಳ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಗಳನ್ನು ವಿತರಿಸಲಾಯಿತು.

ಕಾರ್ಯಕ್ರಮಕ್ಕೆ ಇಂಜಿನಿಯರ್ ಪಿ. ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದು, ಸಿ.ಎಂ.ಸಿ. ಅಧ್ಯಕ್ಷರಾದ ಇಂಜಿನಿಯರ್ ಎಸ್. ಶಿವಲಿಂಗಯ್ಯ, ಕೋಶಾಧ್ಯಕ್ಷರಾದ ಶ್ರೀ ಶ್ರೀಶೈಲ ರಾಮಣ್ಣನವರ್ ಹಾಗೂ ಪ್ರಾಂಶುಪಾಲರಾದ ಡಾ. ದೀಪು ಪಿ. ಉಪಸ್ಥಿತರಿದ್ದರು. ಅಣುಕು ನ್ಯಾಯಾಲಯ ಸ್ಪರ್ಧೆಯ ಸಂಯೋಜಕರಾದ ಡಾ. ಶ್ರೀದೇವಿ ಕೃಷ್ಣ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮವನ್ನು ಡಾ. ಪ್ರಕೃತಿ ಎ.ಆರ್. ನಿರೂಪಿಸಿದರು.

ಈ ಸಮಾರಂಭ ಕಾನೂನು ಶಿಕ್ಷಣದಲ್ಲಿ ಪ್ರಾಯೋಗಿಕ ಅನುಭವದ ಮಹತ್ವವನ್ನು ಮತ್ತೆ ಒತ್ತಿಹೇಳಿದಂತಾಯಿತು.

Leave a Reply