HOMENews

ಕುಕ್ಕರಹಳ್ಳಿ ಕೆರೆ ಪ್ರದೇಶದಲ್ಲಿ ವಾಣಿಜ್ಯ ಕಟ್ಟಡಕ್ಕೆ ವಿರೋಧ: ಪರಿಸರ ಸಂರಕ್ಷಣೆಗಾಗಿ ಪ್ರತಿಭಟನೆ

ಮೈಸೂರು, ಮಾ.16: ನಗರದ ಪ್ರಮುಖ ಪರಿಸರ ತಾಣವಾದ ಕುಕ್ಕರಹಳ್ಳಿ ಕೆರೆ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಣಿಜ್ಯ ಹಾಗೂ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸುವ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿ ಪರಿಸರ ಸಂರಕ್ಷಿಸಿ ಹೋರಾಟ ಸಮಿತಿ ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಹೃದಯಭಾಗದಲ್ಲಿರುವ ಕುಕ್ಕರಹಳ್ಳಿ ಕೆರೆ ಪರಿಸರವನ್ನು ಸಂರಕ್ಷಿಸಬೇಕು ಹಾಗೂ ಈ ಪ್ರದೇಶದಲ್ಲಿ ಯಾವುದೇ ರೀತಿಯ ವಾಣಿಜ್ಯ ಕಟ್ಟಡಗಳು ಮತ್ತು ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯ ವೇಳೆ ಮಾತನಾಡಿದ ಹೋರಾಟ ಸಮಿತಿ ಸದಸ್ಯರು, ಕುಕ್ಕರಹಳ್ಳಿ ಕೆರೆ ಪ್ರದೇಶವು ಇತಿಹಾಸ ಪ್ರಸಿದ್ಧವಾಗಿದ್ದು, ಈ ಹಿಂದೆ ಸ್ಥಳೀಯ ನಿವಾಸಿಗಳು ಕುಡಿಯುವ ನೀರು, ಬಟ್ಟೆ ತೊಳೆಯುವ ಕೆಲಸಗಳು ಹಾಗೂ ದನ-ಕರುಗಳಿಗೆ ನೀರು ನೀಡಲು ಕೆರೆಯನ್ನು ಬಳಸುತ್ತಿದ್ದರು ಎಂದು ತಿಳಿಸಿದರು. ಕಾಲಕ್ರಮೇಣ ಈ ಪ್ರದೇಶವು ನಗರದಲ್ಲಿ ಪ್ರಮುಖ ಪರಿಸರ ತಾಣವಾಗಿ ರೂಪುಗೊಂಡಿದ್ದು, ಪಶು-ಪಕ್ಷಿಗಳಿಗೆ ಆಶ್ರಯ ನೀಡುವ ಜತೆಗೆ ವಾಯುವಿಹಾರಿಗಳಿಗೆ ಶುದ್ಧ ಗಾಳಿ ಒದಗಿಸುವ ಸ್ಥಳವಾಗಿದೆ ಎಂದು ಹೇಳಿದರು.

ಮೈಸೂರು ಅರಸರ ಕಾಲದಲ್ಲಿ ಜನರ ಕಲ್ಯಾಣದ ದೃಷ್ಟಿಯಿಂದ ಸುಮಾರು 400 ಎಕರೆ ವ್ಯಾಪ್ತಿಯಲ್ಲಿ ಈ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ನಿರಂತರ ಒತ್ತುವರಿಗಳ ಪರಿಣಾಮವಾಗಿ ಕೆರೆಯ ವಿಸ್ತೀರ್ಣವು ಸುಮಾರು 100 ಎಕರೆಗೆ ಹಾಗೂ ಕೆರೆ ಆವರಣವು ಸುಮಾರು 110 ಎಕರೆಗೆ ಮಾತ್ರ ಸೀಮಿತವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಭೂದೇವಿ ಫಾರಂನ ಕೆಲವು ಸರ್ವೇ ನಂಬರಿನ 2 ಎಕರೆ 20 ಗುಂಟೆ ಪ್ರದೇಶವನ್ನು ಉದ್ಯಾನ ಮತ್ತು ಬಯಲು ಪ್ರದೇಶದಿಂದ ವಾಣಿಜ್ಯ ವಲಯಕ್ಕೆ ಬದಲಾವಣೆ ಮಾಡಿರುವುದನ್ನು ಅವರು ತೀವ್ರವಾಗಿ ಖಂಡಿಸಿದರು. ಇಂತಹ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ವಾಣಿಜ್ಯ ಕಟ್ಟಡಗಳು ಹಾಗೂ ಬಹುಮಹಡಿ ಕಟ್ಟಡಗಳ ನಿರ್ಮಾಣವು ಪರಿಸರ ಸಮತೋಲನಕ್ಕೆ ಧಕ್ಕೆಯುಂಟುಮಾಡಲಿದೆ ಎಂದು ಎಚ್ಚರಿಸಿದರು.

ಕುಕ್ಕರಹಳ್ಳಿ ಕೆರೆ ಪ್ರದೇಶವು ಮೈಸೂರು ವಿಶ್ವವಿದ್ಯಾನಿಲಯ ಆವರಣಕ್ಕೆ ಹೊಂದಿಕೊಂಡಿದ್ದು, ಇಲ್ಲಿ ದೇಶ-ವಿದೇಶಗಳಿಂದ ಬರುವ ಅಪರೂಪದ ಪಕ್ಷಿಗಳು ಆಶ್ರಯ ಪಡೆಯುತ್ತವೆ. ಜೊತೆಗೆ ನೂರಾರು ಜನರು ಪ್ರತಿದಿನ ವಾಯುವಿಹಾರ, ವ್ಯಾಯಾಮ ಹಾಗೂ ಆರೋಗ್ಯಕರ ಚಟುವಟಿಕೆಗಳಿಗಾಗಿ ಈ ಪ್ರದೇಶಕ್ಕೆ ಬರುತ್ತಾರೆ. ಇಂತಹ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಪರಿಸರ ಸಂರಕ್ಷಣೆಗಾಗಿ ಈ ಪ್ರದೇಶವನ್ನು ಕಟ್ಟುನಿಟ್ಟಾಗಿ ರಕ್ಷಿಸುವಂತೆ ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳನ್ನು ಅವರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪರಿಸರ ಸಂರಕ್ಷಿಸಿ ಹೋರಾಟ ಸಮಿತಿ ಸದಸ್ಯರಾದ ವೆಂಕಟಸುಬ್ಬಯ್ಯ, ಪ್ರೊ. ಕಾಂಗ್ರೇಸ್ ಚಾಮರಾಜ ಕ್ಷೇತ್ರದ ಬ್ಲಾಕ್ ಅದ್ಯಕ್ಷ ಮಂಚೇಗೌಡನ ಕೊಪ್ಪಲು ರವಿ,ಆಶಾ, ಜಯರಾಮಯ್ಯ, ಸಾಮಾಜಿಕ ಚಳವಳಿಗಾರ ಅರವಿಂದ್ ಶರ್ಮ, ಸಿದ್ದರಾಜು ಸೋಸಲೆ, ಪ್ರಕಾಶ್ ಬಾಬು, ಆದರ್ಶ್ ಅರಸ್, ಬಾನುಮೋಹನ್, ಗಂಟಯ್ಯ, ಬಾನುಪ್ರಕಾಶ್, ನಟರಾಜ್ ಹಾಗೂ ಸುನೀಲ್ ಸೇರಿದಂತೆ ಹಲವು ಪರಿಸರ ಹೋರಾಟಗಾರರು ಭಾಗವಹಿಸಿದ್ದರು.

Leave a Reply