
ದಲಿತರ ಪ್ರದೇಶದಲ್ಲಿ ಕ್ರೀಡಾಂಗಣ ತಡೆಯಲು ಹುನ್ನಾರ? ಸ್ಥಳೀಯರ ಆಕ್ರೋಶ
ಟಿ.ನರಸೀಪುರ:- ಸಿಲ್ಕ್ ಫ್ಯಾಕ್ಟರಿ ಇರುವುದು ಶೇ.90 ರಷ್ಟು ದಲಿತರು ವಾಸಿಸುವ ಪಟ್ಟಣದ ಬೈರಾಪುರ, ಗೋಪಾಲಪುರ, ತ್ರಿವೇಣಿ ನಗರ ಏರಿಯಾಗಳ ಕೇಂದ್ರಭಾಗದಲ್ಲಿ. ದಲಿತರು ವಾಸ ಮಾಡುವ ಜಾಗದಲ್ಲಿ ಸದೃಢ ದೇಹ ಆರೋಗ್ಯ ಹೊಂದಲು ಪೂರಕವಾದ ಕ್ರೀಡಾಂಗಣ ನಿರ್ಮಾಣ ಸಹಿಸದೆ ಮಲಿನ ನೀರು ಹೊರ ಹಾಕುವ ರೋಗಕಾರಕ ಸಿಲ್ಕ್ ಫ್ಯಾಕ್ಟರಿ ಪರವಾದ ಹೋರಾಟ ಬೇಕಿತ್ತೇ? ದಲಿತ ಕೇರಿಗಳಿಗೆ ಗಬ್ಬುನಾತ ಬೀರುವ ಹುಳುಬೆಂದ ಬಿಸಿ ನೀರು ಹರಿಸಿ ಮೂಗು ಮುರಿಯುವವರ ಮುಂದೆ ದಲಿತರು ಅಂದರೆ ಅಸಹ್ಯ ಅನ್ನುವ ವಾತಾವರಣ ನಿರ್ಮಿಸುವ ಹುನ್ನಾರವೇ? ಎಂದು ಕವಿಗಳು ಹಾಗೂ ಸಾಹಿತಿಗಳಾದ ಎಂ.ಜವರಾಜುರವರು ಪ್ರಶ್ನಿಸಿದ್ದಾರೆ.
ಇದರ ಬದಲು ರೇಷ್ಮೆಹುಳು ಬೇಯಿಸಿದ ಬಿಸಿಯಾದ ಕಚ್ಚಾ ಮಲಿನ ನೀರು ಹೊರ ಹಾಕುತ್ತಿರುವ ಸಿಲ್ಕ್ ಫ್ಯಾಕ್ಟರಿಯನ್ನೇ ಜನವಸತಿ ಪ್ರದೇಶದಿಂದ ಬೇರೆಡೆಗೆ ಸ್ಥಳಾಂತರಿಸಬಾರದೇಕೆ? ಇಲ್ಲಿಂದ ರೇಷ್ಮೇ ಬೆಂದಹುಳುವಿನ ಬಿಸಿನೀರು ಫ್ಯಾಕ್ಟರಿಯ ಹೊರಗೆ ಹರಿಯುತ್ತದೆ. ಬಹುಹಿಂದೆ ನಾವೇ ಫ್ಯಾಕ್ಟರಿಯ ಹಿಂಭಾಗದಲ್ಲಿದ್ದ ನಮ್ಮ ಹೊಲಕ್ಕೆ ಅದರ ಅರಿವಿರದೆ ಬೆಳೆ ಬೆಳೆಯಲು ಆ ನೀರನ್ನು ಹಾಯಿಸುತ್ತಿದ್ದೆವು. ಆ ನೀರಿನ ಒಡನಾಟದಿಂದ ನನಗೂ ಸೇರಿದಂತೆ ಕೆಲವರಿಗೆ ಚರ್ಮದ ಅಲರ್ಜಿಗೂ ಕಾರಣವಾಗಿ ಅದರ ಅನುಭವವನ್ನೂ ಪಡೆದು ನೊಂದಿದ್ದೇವೆ. ಈಗ ನಮ್ಮ ಹೊಲಕ್ಕೆ ಹರಿತುತ್ತಿದ್ದ ಜಾಗಗಳೀಗ ವಾಸ ಮನೆಗಳಾಗಿರುವುದರಿಂದ ಜನ ವಿರೋಧಿಸಿದ ಕಾರಣ ಆ ನೀರು ಸ್ಥಳಾಂತರಗೊಂಡು ಪೈಪ್ ಲೈನ್ ಮೂಲಕ ಫ್ಯಾಕ್ಟರಿ ಮುಂಭಾಗ ಮುಖ್ಯರಸ್ತೆ ಮೂಲಕದ ಕಾವೇರಿ ಕಪಿಲ ನದೀ ಭಾಗದ ಕಡೆ ಹರಿಸಲಾಗುತ್ತಿದೆ. ಈ ನಡುವೆ ಅದು ಹಾದು ಹೋಗುವ ಮಾರ್ಗದಲ್ಲಿ ಇರುವ ಭೂಮಿಯ ಜನ ಗೊತ್ತಿಲ್ಲದೆ ಹಿಂದೆ ನಾವು ಬಳಸುತ್ತಿದ್ದಂತೆ ಇವತ್ತೂ ಆ ನೀರನ್ನು ಕೃಷಿಗಾಗಿಯೋ ಇನ್ನೇತಕ್ಕೊ ಬಳಸುತ್ತಿದ್ದಾರೆ. ಅಥವಾ ಶುದ್ದವಾಗಿ ಹರಿಯುವ ಜನಬಳಕೆಯ ನದಿಗೆ ಹರಿದು ಕಲುಷಿತಗೊಳ್ಳುತ್ತಿದೆ. ಇದರಿಂದ ಸುತ್ತಮುತ್ತಲಿನ ಜನರಿಗೆ ರೋಗರುಜಿನಗಳು ತಗಲುವ ಅಪಾಯವಿದೆ.
ಇದು ಟಿ.ನರಸೀಪುರದ ಸಿಲ್ಕ್ ಫ್ಯಾಕ್ಟರಿಯ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣವನ್ನು ವಿರೋಧಿಸುತ್ತಿರುವವರಿಗೆ ಸಿಲ್ಕ್ ಫ್ಯಾಕ್ಟರಿಯಿಂದಾಗಿ ಫ್ಯಾಕ್ಟರಿ ಸುತ್ತಮುತ್ತ ವಾಸಿಸುತ್ತಿರುವ ಜನವಾಸಿಗಳಿಗೆ ಆಗುತ್ತಿರುವ ತೊಂದರೆ ತಿಳಿದಿಲ್ಲವೇಕೆ..? ಇಲ್ಲಿ ಕ್ರೀಡಾಂಗಣ ನಿರ್ಮಾಣ ವಿರೋಧಿಸುವವರು ಮೊದಲು ಕೈಗಾರಿಕಾ ಪ್ರದೇಶವಲ್ಲದ ಜನವಸತಿ ಪ್ರದೇಶದಲ್ಲಿರುವ ಸುತ್ತಮುತ್ತಲಿನ ಪ್ರದೇಶವನ್ನು ಮಲಿನಗೊಳಿಸಿ ರೋಗರುಜಿನಕ್ಕೆ ಎರವಾಗುತ್ತಿರುವ ಈ ಸಿಲ್ಕ್ ಫ್ಯಾಕ್ಟರಿಯನ್ನೇ ನಗರ ಪ್ರದೇಶದಾಚೆಗೆ ಸ್ಥಳಾಂತರಿಸುವಂಥ ಜನಪರ ಹೋರಾಟ ಮಾಡಬೇಕೆಂಬಲ ಮನಸ್ಸೇಕೆ ಇಲ್ಲ?
ಟಿ.ನರಸೀಪುರದ ಜನವಾಸಿಗಳು ಮತ್ತು ಫ್ಯಾಕ್ಟರಿ ವಾಸದ ಪ್ರದೇಶದ ಬಗ್ಗೆ ಅರಿವಿರದ ಹೊರಗಿನ ಕೆಲವರು ಮತ್ತು ಅವರಿಗೆ ಬೆಂಬಲ ಸೂಚಿಸುವ ಸ್ಥಳೀಯ ಹೋರಾಟಗಾರರು ಫ್ಯಾಕ್ಟರಿ ಸ್ಥಾಪನೆ ಇತಿಹಾಸ, ಅದರ ಉದ್ದೇಶ, ಸ್ಥಾಪನೆ ಕಾಲಘಟ್ಟ, ಆ ಕಾಲಘಟ್ಟದ ಪ್ರದೇಶದ ಸ್ಥಿತಿಗತಿ, ಜನಸಂಖ್ಯೆ ಪ್ರಮಾಣ , ಈಗಿನ ಜನಸಂಖ್ಯೆ ಪ್ರಮಾಣ, ಈಗಿರುವ ಫ್ಯಾಕ್ಟರಿ ಪ್ರದೇಶ ಏನಾಗಿತ್ತು? ಆಗ ಏಗಿತ್ತು? ಈಗ ಏನಾಗಿದೆ..? ಇದರ ಪೂರ್ವಾಪರ ತಿಳಿಯದೆ ಪ್ರಸ್ತುತ ಸಿಲ್ಕ್ ಫ್ಯಾಕರಿಯಲ್ಲಿ ತಮ್ಮ ಜೀವನ ನಿರ್ವಣೆಗಾಗಿ ಕೆಲಸ ನಿರ್ವಹಿಸುತ್ತಿರುವ ಸುತ್ತಮುತ್ತಲಿನವರೇ ಆದ 200- 250 ಜನ ಕಾರ್ಮಿಕರ ಮನಸ್ಸಿನ ಮೇಲೆ ಕೆಲಸ ಕಳೆದುಕೊಳ್ಳುವ ಅಭದ್ರತೆಯ ಭೀತಿ ಹುಟ್ಟಿಸಿ ತಮ್ಮ ಸ್ವಾರ್ಥ ಮತ್ತು ಪ್ರತಿಷ್ಠೆಗಾಗಿ ಈ ಕಾರ್ಮಿಕರನ್ನು ದಿಕ್ಕುತಪ್ಪಿಸಿ ಪ್ರತಿಭಟನೆಗೆ ಎಳೆದು ತಂದಿರುವುದೇಕೆ? ಈ ಎಲ್ಲ ಕಾರ್ಮಿಕರಿಗೆ ಕ್ರಿಡಾಂಗಣದ ಉದ್ದೇಶದ ಬಗ್ಗೆ ತಿಳಿಸುವ ಬದಲು ಫ್ಯಾಕ್ಟರಿ ಮುಚ್ಚಿಸುವಂಥ ಸುಳ್ಳನ್ನು ಬಿತ್ತಿ ಸಾರ್ವಜನಿಕವಾಗಿ ತಪ್ಪು ಅಭಿಪ್ರಾಯ ಬರುವಂತೆ ನಡೆದುಕೊಳ್ಳುತ್ತಿರುವ ಕ್ರೀಡಾಂಗಣ ವಿರೋಧಿ ಹೋರಾಟಗಾರರು ಸಾರ್ವಜನಿಕ ಜವಾಬ್ದಾರಿ ಮರೆತಂತಿದೆ ಅಲ್ಲವೇ?

ಸಿಲ್ಕ್ ಫ್ಯಾಕ್ಟರಿ ಸ್ಥಾಪನೆ ಹಿಂದಿನ ಉದ್ದೇಶ ತಿಳಿಯುವುದಾರೆ, ಮೈಸೂರು ಸಂಸ್ಥಾನದ ರಾಜ ಪ್ರಗತಿಪರ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನಪರ ಯೋಜನೆ ಬಗ್ಗೆ ಅಧ್ಯಯನ ಮಾಡಿ ಸಿಲ್ಕ್ ಫ್ಯಾಕ್ಟರಿ ಸ್ಥಾಪನೆ ಉದ್ದೇಶ ಅವತ್ತಿನ ಸ್ಥಿತಿಗತಿ ಇವತ್ತಿನ ಸ್ಥಿತಿಗತಿ ತಿಳಿದು ಟಿ.ನರಸೀಪುರ ಕ್ರೀಡಾಂಗಣದ ಉದ್ದೇಶದ ಬಗ್ಗೆ ತಿಳಿದುಕೊಂಡು ‘ವಿರೋಧದ ಹೋರಾಟ’ಕ್ಕೆ ಇಳಿಯಬೇಕಿತ್ತು.
ಕಾರಣ, ನಮ್ಮ ಟಿ.ನರಸೀಪುರದ ಈ ಸಿಲ್ಕ್ ಫ್ಯಾಕ್ಟರಿ ಸ್ಥಾಪನೆ ನಾಲ್ವಡಿ ಕೃಷ್ಣರಾಜ ಒಡೆಯರ ದೂರದೃಷ್ಟಿಯ ಕನಸಿನ ಜನಪರ ಯೋಜನೆಯಾಗಿತ್ತು. ಸ್ಥಳೀಯರಿಗೆ ಉದ್ಯೋಗ, ಕೃಷಿಕರಿಗೆ ಪ್ರೋತ್ಸಾಹ, ಹೈದ್ರಾಬಾದ್, ಮದ್ರಾಸ್ ಸಂಸ್ಥಾನಗಳಿಗೆ ಸರಿಸಮಾನವಾಗಿ ಮೈಸೂರು ಪ್ರಾಂತ್ಯವೂ ನಿಲ್ಲುವ ಮೂಲಕ ಹೊರ ರಾಜ್ಯ, ದೇಶಗಳಿಗೆ, ಅಲ್ಲಿನ ರಾಜಮನೆತನಗಳಿಗೆ ಗುಣಮಟ್ಟದ ರೇಷ್ಮೆ, ಸೀರೆ, ಮತ್ತಿತರ ರೇಷ್ಮೆ ಉಡುಪುಗಳನ್ನು ರಪ್ತು ಮಾಡಿ ಆರ್ಥಿಕವಾಗಿ ಸಂಸ್ಥಾನವನ್ನು ಸದೃಢಗೊಳಿಸುವುದಾಗಿತ್ತು.
ಈ ಎಲ್ಲ ಆಲೋಚನೆಗಳ ಫಲವಾಗಿ ಅವರ ಕಣ್ಮುಂದೆ ಬಂದದ್ದು ಮೈಸೂರು ರಾಜ್ಯದ ಕೃಷಿಕ ರೈತರು. ಅದರಲ್ಲು ಕೈಗಾರಿಕೆ ಬೇಕಾದ ರೇಷ್ಮೆ ಬೆಳೆ ಬಗ್ಗೆ.
ಎಲ್ಲ ಅಧ್ಯಯನದ ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 193೦ ರ ದಶಕದ ಆರಂಭದಲ್ಲಿ ವಿಸ್ತೃತವಾದ ರೂಪುರೇಷೆ ಬಳಿಕ ರೇಷ್ಮೆ ಕೈಗಾರಿಕೆ ಸ್ಥಾಪನೆ ಬಗ್ಗೆ ಸ್ಪಷ್ಟ ತೀರ್ಮಾನಕ್ಕೆ ಬಂದರು. ಹಾಗೆ ಅದಕ್ಕೆ ಬೇಕಾದ ಕೃಷಿಗೆ, ರೈತರಿಗೆ ಎಲ್ಲಕ್ಕಿಂತ ಹೆಚ್ಚಾಗಿ ಸಾಮಾನ್ಯ ಜನರಿಗೆ ತೊಂದರೆಯಾಗದ ವರ್ಷಪೂರ್ತಿ ತುಂಬಿ ಹರಿವ ಕಾವೇರಿ ಕಪಿಲ ನದೀ ದಡದ ಜನವಸತಿ ಅಲ್ಲದ ಪ್ರದೇಶವನ್ನು ಗೊತ್ತು ಮಾಡಿ ರೇಷ್ಮೆ ಉದ್ಯಮಗಳ ನಿಗಮವನ್ನು ಸ್ಥಾಪಿಸಲಾಯ್ತು.
ಮುವ್ವತ್ತರ ದಶಕದ ಅವರ ಆ ಯೋಜನೆಗೆ ಅವತ್ತಿನ ಫ್ಯಾಕ್ಟರಿ ನಿರ್ಮಾಣಕ್ಕೆ ವಾತಾವರಣ ಪೂರಕವಾಗಿತ್ತು. ಅವತ್ತಿನ ಜನಸಂಖ್ಯೆ ಎಷ್ಟಿತ್ತು? ಆ ಪ್ರದೇಶ ಹೇಗಿತ್ತು? ಅವತ್ತು ಈಗಿರುವ ಸಿಲ್ಕ್ ಫ್ಯಾಕ್ಟರಿ ಸ್ಥಳ ವ್ಯವಸಾಯಕ್ಕೆ ಯೋಗ್ಯವಲ್ಲದ ಜೇಡಿಮಣ್ಣಿನ ಮುಳ್ಳುಗಂಟಿ ಮರಗಿಡ ಬೆಳೆದು ನಿಂತ ಕಾಡು ಪ್ರದೇಶವಾಗಿತ್ತು.
ಹೀಗೆ ಜನವಸತಿ ಅಲ್ಲದ ಬಂಜರು ಪ್ರದೇಶವನ್ನು ಕೈಗಾರಿಕೆ ಸ್ಥಾಪನೆಗೆ ಬಳಸಿಕೊಂಡಿದ್ದು ಸೂಕ್ತವೂ ಆಗಿತ್ತು. ಆದರೆ ಈಗಿರುವ ಸಿಲ್ಕ್ ಫ್ಯಾಕ್ಟರಿಯನ್ನು ಮುಚ್ವಿಸುವ ಕಾರ್ಮಿಕರಿಗೆ ಯಾವುದೇ ತೊಂದರೆ ಆಗದ ಹಾಗೆ ಕ್ರೀಡಾಂಗಣ ನಿರ್ಮಿಸಲು ಹೊರಟ ಸರ್ಕಾರದ ಕ್ರಮ ಸರಿಯಾಗಿದ್ದರು ಕ್ರೀಡಾಂಗಣ ನಿರ್ಮಾಣವನ್ನು ವಿರೋಧಿಸುವ ಉದ್ದೇಶವಾದರು ಏಕೆ? ಸರ್ಕಾರ ಸಿಲ್ಕ್ ಫ್ಯಾಕ್ಟರಿಯನ್ನು ಮುಚ್ಚಿಸುವ ಇರಾದೆ ಇಲ್ಲದಿದ್ದರು ಸಾರ್ವಜನಿಕರ ಪರವಾದ ನಮ್ಮ ಪ್ರಶ್ನೆ ಇವತ್ತಿಗೆ ಸಿಲ್ಕ್ ಫ್ಯಾಕ್ಟರಿ ಇರುವ ಆ ಜಾಗ ಕೈಗಾರಿಕೆಗೆ ಎಷ್ಟು ಸೂಕ್ತ ಎಂಬುದನ್ನು ಹೋರಾಟಗಾರರು ಹೇಳಬೇಕು?
ಹಾಗಾಗಿ ಶೇ.90 ರಷ್ಟು ಇರುವ ದಲಿತರ ಏರಿಯಾದಲ್ಲಿ ಕ್ರೀಡಾಂಗಣ ನಿರ್ಮಾಣ ಸಹಿಸದೆ ಅದನ್ನು ತಡೆಯುವ ದೊಡ್ಡ ಹುನ್ನಾರದ ಸಂಚು ನಡೆಯುತ್ತಿರುವುದನ್ನು ಒಕ್ಕೊರಲ ದನಿಯಿಂದ ಹಿಮ್ಮೆಟ್ಟಿಸಬೇಕಿದೆ. ಇದಕ್ಕೆ ಈಗಾಗಲೇ ರಚನೆಗೊಂಡಿರುವ ಟಿ.ನರಸೀಪುರ ಕ್ರೀಡಾಂಗಣ ಸಮಿತಿ ಅವರ ಕಾನೂನು ಬದ್ಧ ಹೋರಾಟಕ್ಕೆ ಪ್ರತಿ ಹೋರಾಟದ ರೂಪುರೇಷೆ ಸಿದ್ದಪಡಿಸಿಕೊಂಡು ಟಿ.ನರಸೀಪುರ ಪಟ್ಟಣದಲ್ಲಿ ಹಿಂದೆ ಮ್ಯಾರಥಾನ್ ರೂಪದಲ್ಲಿ ಜರುಗಿದಂತೆ ದೊಡ್ಡ ಜನಪರ ಹೋರಾಟ ಮಾಡಬೇಕಿದೆ. ಈ ಬಗ್ಗೆ ಕ್ರೀಡಾಂಗಣ ಸಮಿತಿ ಎಚ್ಚೆತ್ತುಕೊಂಡು ಸಜ್ಜುಗೊಳ್ಳಲ್ಲಿ.





