
ಧುರಂಧರ್ ಜಗತ್ತೇ ಗೆದ್ದಾಗ… ಲಿಯಾರಿಯಿಂದ ವಿಚಿತ್ರ ಬೇಡಿಕೆ: “500 ಕೋಟಿ ನಮಗೂ ಕೊಡಿ!”
ಮುಂಬೈ/ಕರಾಚಿ, ಮಾರ್ಚ್ 30: ಬಾಕ್ಸ್ ಆಫೀಸ್‌ನಲ್ಲಿ ಚಂಡಮಾರುತದಂತೆ ದೌಡಾಯಿಸುತ್ತಿರುವ ಧುರಂಧರ್ 2 ಸಿನಿಮಾಗೆ ಈಗ ಗಡಿಪಾರು ವಿವಾದವೊಂದು ಸೇರಿಕೊಂಡಿದೆ. ಭಾರತದಲ್ಲಿ ಭರ್ಜರಿ ಯಶಸ್ಸು ಕಂಡಿರುವ ಈ ಚಿತ್ರ, ಅಧಿಕೃತವಾಗಿ ಬಿಡುಗಡೆ ಆಗದಿದ್ದರೂ ಪಾಕಿಸ್ತಾನದಲ್ಲೂ ಭಾರೀ ಚರ್ಚೆಗೆ ಗ್ರಾಸವಾಗಿದೆ. ವಿಶೇಷವಾಗಿ ಲಿಯಾರಿ ಪ್ರದೇಶದಲ್ಲಿ ಈ ಸಿನಿಮಾದ ಪ್ರಭಾವ ಹೆಚ್ಚಾಗಿದ್ದು, ಅಲ್ಲಿನ ಕೆಲವರ ಹೇಳಿಕೆಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಸಿನಿಮಾದ ಕಥಾಹಂದರ ಲಿಯಾರಿ ಪ್ರದೇಶದ ಗ್ಯಾಂಗ್‌ವಾರ್, ಅಂಡರ್‌ವರ್ಡ್ ಚಟುವಟಿಕೆಗಳು ಮತ್ತು ಐಎಸ್‌ಐ ಜೊತೆಗಿನ ಸಂಬಂಧಗಳ ಹಿನ್ನೆಲೆಯನ್ನು ಹೊಂದಿದೆ. ಈ ಕಾರಣದಿಂದ ಅಲ್ಲಿನ ಜನರು ಸಿನಿಮಾದೊಂದಿಗೆ “ಭಾವನಾತ್ಮಕ ಸಂಪರ್ಕ” ಹೊಂದಿರುವಂತೆ ಹೇಳಿಕೊಂಡಿದ್ದಾರೆ. ಆದರೆ ಇದೇ ಸಂಪರ್ಕ ಈಗ ವಿಚಿತ್ರ ಬೇಡಿಕೆಗೆ ಕಾರಣವಾಗಿದೆ.
https://x.com/SurajKrBauddh/status/2037534614454202795?s=20
“ಈ ಸಿನಿಮಾ ನಮ್ಮ ಪ್ರದೇಶವನ್ನು ಆಧರಿಸಿದೆ. ಆದ್ದರಿಂದ ಬಂದಿರುವ ಲಾಭದಲ್ಲಿ 500 ಕೋಟಿ ರೂಪಾಯಿ ನಮಗೂ ನೀಡಬೇಕು,” ಎಂದು ಕೆಲವರು ಹೇಳಿಕೊಂಡಿದ್ದು, “ನಮ್ಮ ರಸ್ತೆಗಳು ಹಾಳಾಗಿವೆ, ಮೂಲಸೌಕರ್ಯಗಳ ಕೊರತೆ ಇದೆ. ಈ ಹಣದಿಂದ ನಮ್ಮ ಪ್ರದೇಶವನ್ನು ಅಭಿವೃದ್ಧಿಪಡಿಸಬಹುದು,” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವರು ಇದನ್ನು ಅರ್ಧ-ಹಾಸ್ಯ, ಅರ್ಧ-ಗಂಭೀರವಾಗಿ ಹೇಳಿದರೂ, ಈ ಹೇಳಿಕೆಗಳು ಇಂಟರ್ನೆಟ್‌ನಲ್ಲಿ ಟ್ರೋಲ್‌ಗಳ ಹಬ್ಬಕ್ಕೆ ಕಾರಣವಾಗಿವೆ.
ಚಿತ್ರವನ್ನು ನಿರ್ದೇಶಿಸಿರುವ ಆದಿತ್ಯ ಧರ್ ತಮ್ಮ ಕಥೆಯನ್ನು ವಾಸ್ತವ ಘಟನೆಗಳಿಂದ ಪ್ರೇರಣೆ ಪಡೆದು ರೂಪಿಸಿದ್ದಾರೆ. ಆದರೆ ಚಿತ್ರೀಕರಣ ಸಂಪೂರ್ಣವಾಗಿ ವಿದೇಶದಲ್ಲೇ ನಡೆದಿದೆ. ಥೈಲ್ಯಾಂಡ್‌ನ ಬ್ಯಾಂಕಾಕ್ ನಗರದಲ್ಲಿ ಸುಮಾರು 6 ಎಕರೆ ಪ್ರದೇಶದಲ್ಲಿ ಲಿಯಾರಿ ಮಾದರಿಯ ಸೆಟ್ ನಿರ್ಮಿಸಲಾಗಿತ್ತು. ನಿರ್ಮಾಣ ವಿನ್ಯಾಸಕ ಸೈನಿ ಎಸ್ ಜೋಹ್ರೇ ನೇತೃತ್ವದಲ್ಲಿ ಕೇವಲ 20 ದಿನಗಳಲ್ಲಿ ಈ ಭಾರಿ ಸೆಟ್ ಸಿದ್ಧಗೊಂಡಿತ್ತು.
ಇದರ ಮಧ್ಯೆ, ಸಿನಿಮಾ ಕಲೆಕ್ಷನ್ ಅಂಕೆಗಳು ಇನ್ನೂ ಗಗನಕ್ಕೇರುತ್ತಿವೆ. 11 ದಿನಗಳಲ್ಲಿ 1200 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿರುವ ಚಿತ್ರ, ಭಾರತದಲ್ಲೇ 770 ಕೋಟಿ ರೂಪಾಯಿ ಕಲೆಹಾಕಿದ್ದು, ಒಟ್ಟು 1226 ಕೋಟಿ ರೂಪಾಯಿ ದಾಟಿದೆ. ಈ ಯಶಸ್ಸು ಚಿತ್ರತಂಡಕ್ಕೆ ಸಂಭ್ರಮ ತಂದಿದ್ದರೂ, ಲಿಯಾರಿಯಿಂದ ಬಂದಿರುವ ಈ “ಹಣ ಬೇಡಿಕೆ” ಹೊಸ ಚರ್ಚೆಗೆ ಕಾರಣವಾಗಿದೆ.
ಒಂದು ಸಿನಿಮಾದ ಕಥೆ ಗಡಿ ದಾಟಿ ಜನಮನ ತಲುಪಿದಾಗ ಏನೇನೋ ವಿಚಿತ್ರ ಪ್ರತಿಕ್ರಿಯೆಗಳು ಬರುತ್ತವೆ ಎಂಬುದಕ್ಕೆ ಇದು ಹೊಸ ಉದಾಹರಣೆ. ಕೆಲವರಿಗೆ ಇದು ಹಾಸ್ಯ, ಕೆಲವರಿಗೆ ಆಶ್ಚರ್ಯ… ಆದರೆ ಸೋಶಿಯಲ್ ಮೀಡಿಯಾಕ್ಕೆ ಇದು ಸಿಕ್ಕಾಪಟ್ಟೆ “ಕಂಟೆಂಟ್” ಆಗಿರುವುದು ಖಚಿತ





