HOME

ಗಿಳಿ ಜ್ಯೋತಿಷ್ಯ ಹೇಳಿ ಮೋಸ: ವರ್ಗಾವಣೆಯ ಆಸೆ ತೋರಿಸಿ ಐಟಿ ಅಧಿಕಾರಿಯಿಂದ 35 ಲಕ್ಷ ಮೌಲ್ಯದ ಚಿನ್ನ ದೋಚಿದ ವಂಚಕ

ಬೆಂಗಳೂರು, ಮಾ.10: ಗಿಳಿ ಜ್ಯೋತಿಷ್ಯದ ಹೆಸರಿನಲ್ಲಿ ಭವಿಷ್ಯ ಹೇಳಿ ನಂಬಿಕೆ ಗಳಿಸಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಶೇಖರ್ ಎಂಬಾತನಿಗಾಗಿ ಭಾರತಿನಗರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಪೊಲೀಸರ ಮಾಹಿತಿಯಂತೆ, ಬೆಂಗಳೂರಿನ ಆದಾಯ ತೆರಿಗೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರು ಕಳೆದ ಡಿಸೆಂಬರ್ ತಿಂಗಳಲ್ಲಿ ಭಾರತಿನಗರದ ಶ್ರೀ ಸರ್ಕಲ್ ಪ್ರದೇಶದಲ್ಲಿ ಹೋಗುತ್ತಿದ್ದ ವೇಳೆ ರಸ್ತೆಯ ಬದಿಯಲ್ಲಿ ಗಿಳಿ ಜ್ಯೋತಿಷ್ಯ ಹೇಳುತ್ತಿದ್ದ ಶೇಖರ್ ಎಂಬಾತನ ಪರಿಚಯವಾಗಿತ್ತು. ಮುಖ ನೋಡಿ ಜಾತಕ ಹಾಗೂ ಭವಿಷ್ಯ ಹೇಳುತ್ತೇನೆ ಎಂದು ಹೇಳಿ ಅಧಿಕಾರಿಯೊಂದಿಗೆ ಮಾತುಕತೆ ಆರಂಭಿಸಿದ್ದಾನೆ.

ಮಾತು ಮಾತಿನಲ್ಲೇ ಅಧಿಕಾರಿಯ ವೈಯಕ್ತಿಕ ಮತ್ತು ಉದ್ಯೋಗ ಸಂಬಂಧಿತ ವಿಚಾರಗಳನ್ನು ತಿಳಿದುಕೊಂಡ ಶೇಖರ್, ನಿಮ್ಮ ಜೀವನದಲ್ಲಿ ದೊಡ್ಡ ಪ್ರಗತಿ ಆಗಬೇಕಾದರೆ ವಿಶೇಷ ಪೂಜೆ ಮಾಡಿಸಬೇಕು ಎಂದು ಹೇಳಿದ್ದಾನೆ. ಅದಕ್ಕಾಗಿ ಆರಂಭದಲ್ಲಿ ಸುಮಾರು 50 ಸಾವಿರ ರೂಪಾಯಿ ಪಡೆದು ಪೂಜೆ ಮಾಡಿಸಿದ್ದಾನೆ ಎಂದು ತಿಳಿದುಬಂದಿದೆ.

ಆ ಬಳಿಕ ಪದೇ ಪದೇ ಕರೆ ಮಾಡಿ ಮತ್ತಷ್ಟು ಪೂಜೆಗಳು ಮಾಡಬೇಕೆಂದು ಹೇಳುತ್ತಿದ್ದ ಶೇಖರ್, ಅಧಿಕಾರಿಯ ವರ್ಗಾವಣೆಯ ವಿಷಯ ಕೇಳಿ ಅದಕ್ಕೆ ದೊಡ್ಡ ಪೂಜೆ ಅಗತ್ಯವಿದೆ ಎಂದು ಹೇಳಿದ್ದಾನೆ. ಪೂಜೆ ಮಾಡಲು ಮನೆಯಲ್ಲಿರುವ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ತರಬೇಕು ಎಂದು ಸಲಹೆ ನೀಡಿದ್ದಾನೆ.

ಅವನ ಮಾತುಗಳನ್ನು ನಂಬಿದ ಐಟಿ ಅಧಿಕಾರಿ ಸುಮಾರು 35 ಲಕ್ಷ ರೂಪಾಯಿ ಮೌಲ್ಯದ 194 ಗ್ರಾಂ ಚಿನ್ನಾಭರಣ ಹಾಗೂ 1 ಕೆಜಿ 300 ಗ್ರಾಂ ಬೆಳ್ಳಿ ತೆಗೆದುಕೊಂಡು ಹೋಗಿ ಶೇಖರ್‌ಗೆ ನೀಡಿದ್ದಾರೆ. ಪೂಜೆ ಮುಗಿದ ಬಳಿಕ ಒಂದು ದಿನದಲ್ಲಿ ವಾಪಸ್ ಕೊಡುತ್ತೇನೆ ಎಂದು ಹೇಳಿ ಆಭರಣಗಳನ್ನು ಪಡೆದುಕೊಂಡಿದ್ದಾನೆ.

ಆದರೆ ನಂತರ “ಪೂಜೆ ಇನ್ನೂ ಪೂರ್ಣವಾಗಿಲ್ಲ” ಎಂದು ಹೇಳುತ್ತಾ ಸುಮಾರು ಒಂದು ವಾರ ಕಾಲ ಅಧಿಕಾರಿಯನ್ನು ತಳ್ಳಿಹಾಕಿದ್ದಾನೆ. ಅನುಮಾನಗೊಂಡ ಅಧಿಕಾರಿ ಮತ್ತೆ ಶ್ರೀ ಸರ್ಕಲ್ ಪ್ರದೇಶಕ್ಕೆ ತೆರಳಿ ನೋಡಿದಾಗ, ಅಲ್ಲಿಗೆ ಗಿಳಿ ಜ್ಯೋತಿಷ್ಯ ಹೇಳುತ್ತಿದ್ದ ಶೇಖರ್ ಕಾಣೆಯಾಗಿದ್ದ.

ಈ ಬಗ್ಗೆ ತಿಳಿದ ನಂತರ ಐಟಿ ಅಧಿಕಾರಿ ಭಾರತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಶೇಖರ್ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಈ ಘಟನೆ ಹಿನ್ನೆಲೆ, ಅಪರಿಚಿತರ ಮಾತುಗಳಿಗೆ ಸುಲಭವಾಗಿ ನಂಬಿಕೆ ಇಡುವುದರಿಂದ ದೊಡ್ಡ ಪ್ರಮಾಣದ ವಂಚನೆಗೆ ಒಳಗಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Leave a Reply