HOMEFilm News

ಮೈಸೂರು: ‘ಪಾರ್ಟಿ’ ನಾಟಕಕ್ಕೆ ಭರ್ಜರಿ ಚಾಲನೆ – ರಂಗಭೂಮಿಯ ಚಿಂತನೆಗೆ ಹೊಸ ಸ್ಪಂದನೆ

ಮೈಸೂರು: ನಗರದ ಕಲಾಮಂದಿರ ಆವರಣದಲ್ಲಿರುವ ಕಿರು ರಂಗಮಂದಿರದಲ್ಲಿ ‘ಪಾರ್ಟಿ’ ನಾಟಕಕ್ಕೆ ಗಣ್ಯರ ಸಮ್ಮುಖದಲ್ಲಿ ಭರ್ಜರಿ ಚಾಲನೆ ದೊರೆಯಿತು. ಹಿರಿಯ ವಿಮರ್ಶಕ ಪ್ರೊ. ಓ.ಎಲ್. ನಾಗಭೂಷಣಸ್ವಾಮಿ ಅವರು ನಾಟಕಕ್ಕೆ ಚಾಲನೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದರು.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ವಿಮರ್ಶಕ ಪ್ರೊ. ಓ.ಎಲ್. ನಾಗಭೂಷಣಸ್ವಾಮಿರವರು , “ನಿರಂತರ ಫೌಂಡೇಶನ್ (ರಿ.), ಮೈಸೂರು, ಕಳೆದ ಮೂರು ದಶಕಗಳಿಂದ ಕನ್ನಡ ರಂಗಭೂಮಿಯಲ್ಲಿ ಚಿಂತನಾ ಪ್ರಧಾನ ಸಾಂಸ್ಕೃತಿಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ. ಸಮಾನತೆ, ಜನಪರ ಚಿಂತನೆ ಮತ್ತು ಸಾಂಸ್ಕೃತಿಕ ಹೊಣೆಗಾರಿಕೆಯನ್ನು ಆಧಾರವಾಗಿಟ್ಟುಕೊಂಡು ರಂಗಭೂಮಿಯನ್ನು ಸಮಾಜದೊಂದಿಗೆ ಸಂವಾದ ನಡೆಸುವ ಜೀವಂತ ಮಾಧ್ಯಮವನ್ನಾಗಿ ರೂಪಿಸುವಲ್ಲಿ ಈ ತಂಡದ ಪಾತ್ರ ಬಹಳ ಮಹತ್ವದ್ದಾಗಿದೆ” ಎಂದು ತಿಳಿಸಿದರು.

ನಿರಂತರ ಫೌಂಡೇಶನ್ ಕನ್ನಡ ರಂಗಭೂಮಿಯ ಅದರಲ್ಲೂ ಮೈಸೂರಿನ ಪ್ರಮುಖ ರಂಗತಂಡಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದು, ಸಮಾಜಮುಖಿ ನಾಟಕಗಳ ಮೂಲಕ ಪ್ರೇಕ್ಷಕರಲ್ಲಿ ಚಿಂತನೆಗೆ ಪ್ರೇರಣೆ ನೀಡುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಅದರ ಭಾಗವಾಗಿ ‘ಪಾರ್ಟಿ’ ನಾಟಕವು ಸಹ ಸಮಕಾಲೀನ ಸಾಮಾಜಿಕ ವಿಷಯಗಳನ್ನು ಒಳಗೊಂಡಿದ್ದು, ಪ್ರೇಕ್ಷಕರಲ್ಲಿ ಚಿಂತನೆ ಹುಟ್ಟಿಸುವ ಪ್ರಯತ್ನವಾಗಿದೆ.

ಈ ನಾಟಕದ ನಿರ್ದೇಶಕರಾದ ಚಿದಂಬರರಾವ್ ಜಂಬೆ ಅವರ ಕುರಿತು ಪ್ರೊ. ನಾಗಭೂಷಣಸ್ವಾಮಿ ವಿಶೇಷವಾಗಿ ಮಾತನಾಡಿ, “ನನ್ನೊಂದಿಗೆ ಸುಮಾರು ಐದು ದಶಕಗಳ ಒಡನಾಟ ಹೊಂದಿರುವ ಚಿದಂಬರರಾವ್ ಜಂಬೆ ಕನ್ನಡ ರಂಗಭೂಮಿಗೆ  ಅಪಾರ ಕೊಡುಗೆ ನೀಡಿದ್ದಾರೆ. ವಾಸ್ತವವಾದಿ (Realistic) ನಾಟಕ ಶೈಲಿಯಲ್ಲಿ ಅವರಿಗಿರುವ ಪ್ರಾವಿಣ್ಯ ಅತ್ಯಂತ ವಿಶಿಷ್ಟವಾಗಿದೆ. ಪಠ್ಯ ಮತ್ತು ಪ್ರದರ್ಶನದ ನಡುವಿನ ಸೂಕ್ಷ್ಮತೆಯನ್ನು ನಿಖರವಾಗಿ ಹಿಡಿದಿಡುವ ಅವರ ಸಾಮರ್ಥ್ಯ ಗಮನಾರ್ಹ. ಪಾತ್ರಗಳ ಮನೋವೈಜ್ಞಾನಿಕ ಆಳವನ್ನು ಅರಿತು ಅದನ್ನು ವೇದಿಕೆಯಲ್ಲಿ ಜೀವಂತವಾಗಿ ಮೂಡಿಸುವುದು ಅವರ ನಿರ್ದೇಶನದ ಶಕ್ತಿ” ಎಂದು ಕೊಂಡಾಡಿದರು.

ಕಾರ್ಯಕ್ರಮದಲ್ಲಿ ನಾಟಕಕಾರರಾದ ನಿರಂತರದ ಪ್ರಸಾದ್ ಕುಂದೂರ್, ನಿರಂತರದ ಸುಗುಣ ಎಂ.ಎಂ, ಪ್ರೊ. ಕಾಳಚೆನ್ನೇಗೌಡ, ವನ್ಯಜೀವಿ ಛಾಯಾಗ್ರಾಹಕ ಲೋಕೇಶ್ ಮೊಸಳೆ, ಚಿನ್ನಸ್ವಾಮಿ ಒಡ್ಡಗೆರೆ, ಹಿರಿಯ ರಂಗಕರ್ಮಿಗಳಾದ ಶ್ರೀಮತಿ ರಾಮೇಶ್ವರಿವರ್ಮ ಹಾಗೂ ರತ್ನ ಮಿರ್ಲೆಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಅಲ್ಲದೆ ನಿರಂತರದ ಶ್ರೀನಿವಾಸ್, ಡಾ. ರೇಖಾ, ಸಹ ಪ್ರಾಧ್ಯಾಪಕರಾದ ರಘು ರೆಡ್ಡಿ, ಉಪನ್ಯಾಸಕರಾದ ಸವೆರೆ ಸ್ವಾಮಿ, ರಂಗಾಯಣ ನಿರ್ದೇಶಕರಾದ ಸತೀಶ್ ತಿಪಟೂರು ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಪ್ರೇಕ್ಷಕರು ನಾಟಕದ ಆರಂಭವನ್ನು ಕಣ್ತುಂಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಕಿರು ರಂಗಮಂದಿರದಲ್ಲಿ ನಡೆದ ಈ ಕಾರ್ಯಕ್ರಮವು ಸಾಂಸ್ಕೃತಿಕ ಹಬ್ಬದ ವಾತಾವರಣವನ್ನು ಸೃಷ್ಟಿಸಿತು.

‘ಪಾರ್ಟಿ’ ನಾಟಕದ ಆರಂಭವು ಮೈಸೂರು ರಂಗಭೂಮಿಗೆ ಹೊಸ ಚೈತನ್ಯ ತುಂಬಿದಂತಾಗಿದೆ. ಸಮಾಜಮುಖಿ ಚಿಂತನೆಗಳನ್ನು ಮನಸ್ಸಿನಲ್ಲಿ ಮೂಡಿಸುವ ಇಂತಹ ನಾಟಕಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರೇಕ್ಷಕರನ್ನು ಸೆಳೆಯಲಿವೆ ಎಂಬ ವಿಶ್ವಾಸ ವ್ಯಕ್ತವಾಗಿದೆ.