
ಸಕಲೇಶಪುರ, ಮಾ.28: ಪ್ರಕೃತಿ ಸೌಂದರ್ಯಕ್ಕೆ ಪ್ರಸಿದ್ಧವಾಗಿರುವ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ ವೇಳೆ ನಡೆದ ಗಲಾಟೆ ಹಿಂಸಾತ್ಮಕ ತಿರುವು ಪಡೆದು, ಫೋಟೋಗ್ರಾಫರ್‌ಗಳ ಮೇಲೆ ಹಲ್ಲೆ ನಡೆದ ಘಟನೆ ಆತಂಕ ಹುಟ್ಟಿಸಿದೆ. ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತರುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆ ಸ್ಥಳೀಯರೊಂದಿಗಿನ ವಾಗ್ವಾದ ಕ್ಷಣಾರ್ಧದಲ್ಲಿ ಗಲಭೆಯಾಗಿ ಮಾರ್ಪಟ್ಟಿದೆ.
ಫ್ರೀ ವೆಡಿಂಗ್ ಶೂಟಿಂಗ್ ಮಧ್ಯೆ ಪುಂಡರ ದಾಳಿ
ಶನಿವಾರ ಮುಂಜಾನೆ ಬೆಂಗಳೂರು ಹಾಗೂ ಹಾಸನದಿಂದ ಬಂದಿದ್ದ ನಾಲ್ಕು ಫೋಟೋಗ್ರಫಿ ತಂಡಗಳು ಬೆಟ್ಟದ ಭೈರವೇಶ್ವರ ದೇಗುಲದ ಸುತ್ತಮುತ್ತಲಿನ ಸುಂದರ ಸ್ಥಳಗಳಲ್ಲಿ ಪ್ರೀ-ವೆಡ್ಡಿಂಗ್ ಶೂಟಿಂಗ್‌ನಲ್ಲಿ ತೊಡಗಿಕೊಂಡಿದ್ದವು. ಇದೇ ವೇಳೆ ಸ್ಥಳಕ್ಕೆ ಬಂದ ಕೆಲ ಸ್ಥಳೀಯರು, “ಇದು ಪ್ರವಾಸಿ ತಾಣವಲ್ಲ, ನಮ್ಮ ಭಕ್ತಿ ಕೇಂದ್ರ” ಎಂದು ಹೇಳಿ ವಿರೋಧ ವ್ಯಕ್ತಪಡಿಸಿದ್ದಾರೆ. ಮಾತಿನ ಚರ್ಚೆ ತೀವ್ರಗೊಂಡು, ಕೆಲ ಕಿಡಿಗೇಡಿಗಳು ಫೋಟೋಗ್ರಾಫರ್‌ಗಳ ಮೇಲೆ ದೈಹಿಕ ದಾಳಿ ನಡೆಸಿದ್ದಾರೆ.
ಹಲ್ಲೆಯಲ್ಲಿ ಚೇತನ್, ಯಶು ಮತ್ತು ಸೋಮಶೇಖರ್ ಎಂಬ ಫೋಟೋಗ್ರಾಫರ್‌ಗಳು ಗಾಯಗೊಂಡಿದ್ದಾರೆ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ, ಫೋಟೋಗ್ರಾಫರ್‌ಗಳು ಕೈಮುಗಿದು ಬೇಡಿಕೊಂಡರೂ ಹಲ್ಲೆ ನಿಲ್ಲಿಸದ ಆರೋಪ ಕೇಳಿಬಂದಿದೆ. ಮೇಕಪ್ ಆರ್ಟಿಸ್ಟ್‌ಗಳ ಮೇಲೂ ದೌರ್ಜನ್ಯ ನಡೆದಿರುವ ಮಾಹಿತಿ ದೊರೆತಿದೆ.
ಫ್ರೀ ವೆಡ್ಡಿಂಗ್ ಮಾಡಲು ಬಳಸುತ್ತಿದ್ದ ಲಕ್ಷಾಂತರ ಮೌಲ್ಯದ ಕ್ಯಾಮರಗಳು ಹಾನಿ
ಆಕ್ರೋಶಗೊಂಡ ಗುಂಪು ಕ್ಯಾಮೆರಾ, ಲೆನ್ಸ್ ಹಾಗೂ ಮೊಬೈಲ್‌ಗಳನ್ನು ನೆಲಕ್ಕೆ ಅಪ್ಪಳಿಸಿ ಜಖಂಗೊಳಿಸಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಉಪಕರಣಗಳು ಹಾನಿಗೊಂಡಿರುವುದಾಗಿ ತಿಳಿದುಬಂದಿದೆ. ಈ ದೃಶ್ಯ ಸ್ಥಳದಲ್ಲಿದ್ದ ಕೆಲವರ ಮೊಬೈಲ್‌ಗಳಲ್ಲಿ ಸೆರೆಯಾಗಿದ್ದು, ಘಟನೆ ಗಂಭೀರತೆಯನ್ನು ತೋರಿಸುತ್ತದೆ.
ದೂರು ನೀಡಲು ಬಂದ ಛಾಯಾಗ್ರಾಹಕರಿಗೆ ಠಾಣೆ ಮುಂದೆ ಮತ್ತೆ ಘರ್ಷಣೆ
ಘಟನೆ ಬಳಿಕ ದೂರು ನೀಡಲು ಫೋಟೋಗ್ರಫಿ ತಂಡ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿದಾಗ, ಅಲ್ಲಿ ಕೂಡ ಎರಡೂ ಗುಂಪಿನ ನಡುವೆ ವಾಗ್ವಾದ ಮುಂದುವರಿದು ಮತ್ತೆ ಗಲಾಟೆ ನಡೆದಿದೆ. ಪೊಲೀಸರ ಸಮ್ಮುಖದಲ್ಲೇ ಮಾತಿನ ಚಕಮಕಿ ಹಲ್ಲೆಯ ಮಟ್ಟಿಗೆ ತಲುಪಿರುವುದು ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆ ಎಬ್ಬಿಸಿದೆ.
ಗಾಯಗೊಂಡ ಫೋಟೋಗ್ರಾಫರ್‌ಗಳಲ್ಲಿ ಒಬ್ಬರು ಹಾಸನ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಛಾಯಾಗ್ರಾಹಕರಿಗೆ ಸ್ಥಳೀಯರ ಆಕ್ರೋಶದ ಹಿನ್ನೆಲೆ
ಇನ್ನೊಂದೆಡೆ ಸ್ಥಳೀಯರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. “ದೇವಾಲಯಗಳು ಕೇವಲ ಪ್ರವಾಸಿ ತಾಣಗಳಲ್ಲ, ಅವು ಭಕ್ತಿ ಮತ್ತು ಸಂಪ್ರದಾಯದ ಸಂಕೇತ. ಅಸಭ್ಯ ಉಡುಗೆ, ಅಸಂಗತ ಭಂಗಿಗಳಿಂದ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ಬರುತ್ತಿದೆ” ಎಂದು ಆರೋಪಿಸಿದ್ದಾರೆ. ದೇವಾಲಯದ ಸುತ್ತಮುತ್ತ ಬೇಲಿ ಹಾಕಿ ರಕ್ಷಣೆ ನೀಡುವಂತೆ ಅವರು ಒತ್ತಾಯಿಸಿದ್ದಾರೆ.
ಫ್ರ ವೆಡ್ಡಿಂಗ್ ಮಾಡುವಾಗ ದೇವಸ್ಥಾನದ ನಿಯಮ ಪಾಲನೆಯ ಅಗತ್ಯ
ಈ ಘಟನೆ ದೇವಾಲಯಗಳಲ್ಲಿ ಪ್ರೀ-ವೆಡ್ಡಿಂಗ್ ಶೂಟಿಂಗ್ ಮಾಡುವಾಗ ನಿಯಮಗಳನ್ನು ಪಾಲಿಸುವ ಅಗತ್ಯವನ್ನು ಮತ್ತೆ ಒತ್ತಿ ಹೇಳಿದೆ.
ದೇವಸ್ಥಾನದ ಆಡಳಿತದಿಂದ ಪೂರ್ವಾನುಮತಿ ಪಡೆಯುವುದು
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯ ಶೂಟಿಂಗ್ ತಪ್ಪಿಸುವುದು
ಸಾಂಪ್ರದಾಯಿಕ, ಸಭ್ಯ ಉಡುಗೆ ಪಾಲಿಸುವುದು
ಗರ್ಭಗುಡಿಯ ಸುತ್ತಮುತ್ತ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದು
ಈ ನಿಯಮಗಳನ್ನು ಪಾಲಿಸದಿದ್ದರೆ ಇಂತಹ ಅನಾಹುತಗಳು ಸಂಭವಿಸುವ ಸಾಧ್ಯತೆ ಹೆಚ್ಚಿದೆ.
ಸಕಲೇಶಪುರ ಪೊಲೀಸರು ತನಿಖೆ ಮುಂದುವರಿಸುತ್ತಿದ್ದಾರೆ
ಸದ್ಯ ಸಕಲೇಶಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹಲ್ಲೆ ನಡೆಸಿದವರ ಗುರುತು ಪತ್ತೆಹಚ್ಚಲು ಮುಂದಾಗಿದ್ದಾರೆ. ಸಿಸಿಟಿವಿ ಹಾಗೂ ಮೊಬೈಲ್ ವಿಡಿಯೋಗಳ ಆಧಾರದಲ್ಲಿ ತನಿಖೆ ತೀವ್ರಗೊಳಿಸಲಾಗಿದೆ.
ಪ್ರಕೃತಿ ಸೌಂದರ್ಯ ಮತ್ತು ಭಕ್ತಿ ಕೇಂದ್ರಗಳ ನಡುವಿನ ಸೂಕ್ಷ್ಮ ಗಡಿ ಎಲ್ಲಿ ಎಳೆಯಬೇಕು ಎಂಬ ಪ್ರಶ್ನೆಯನ್ನು ಈ ಘಟನೆ ಮತ್ತೆ ಎತ್ತಿಹಿಡಿದಿದೆ. ಶ್ರದ್ಧೆ ಮತ್ತು ಸ್ವಾತಂತ್ರ್ಯ ಎರಡನ್ನೂ ಸಮತೋಲನದಲ್ಲಿ ಕಾಪಾಡಿಕೊಳ್ಳುವುದು ಈಗ ಅಗತ್ಯವಾಗಿದೆ.





