ಬೆಂಗಳೂರಿನಲ್ಲಿ RCB vs CSK ಹೈವೋಲ್ಟೇಜ್ ಕದನ : ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ 2,300 ಪೊಲೀಸರಿಂದ ಕಠಿಣ ಭದ್ರತೆ

ಬೆಂಗಳೂರು, ಏಪ್ರಿಲ್ 5: ಐಪಿಎಲ್ ನಲ್ಲಿ ಅತ್ಯಂತ ಜನಪ್ರಿಯ ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಬಹು ನಿರೀಕ್ಷಿತ ಪಂದ್ಯ ಇಂದು ನಗರದಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ನಲ್ಲಿ ನಡೆಯಲಿದೆ. ಈ ಹೈವೋಲ್ಟೇಜ್ ಪಂದ್ಯವನ್ನು ಲಕ್ಷಾಂತರ ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿರುವ ಹಿನ್ನೆಲೆಯಲ್ಲಿ, ನಗರ ಪೊಲೀಸರು ಭದ್ರತೆಯನ್ನು ಕಟ್ಟು ನಿಟ್ಟಾಗಿ ಬಿಗಿಗೊಳಿಸಿದ್ದಾರೆ.
ಇಂದಿನ ಪಂದ್ಯಕ್ಕೆ ಸಂಬಂಧಿಸಿದಂತೆ ಸುಮಾರು ಸ್ಟೇಡಿಯಂ ಸುತ್ತಾ 2,300 ಪೊಲೀಸ್ ಸಿಬ್ಬಂದಿಯನ್ನು ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ಸ್ಟೇಡಿಯಂ ಒಳಭಾಗ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಹುಪದರದ ಭದ್ರತಾ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಕಳೆದ ಬಾರಿ ನಡೆದ ಪಂದ್ಯದಲ್ಲಿ ಕಂಡುಬಂದ ಸಣ್ಣಪುಟ್ಟ ಲೋಪಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಈ ಬಾರಿ ಹೆಚ್ಚುವರಿ ಮುನ್ನೆಚ್ಚರಿಕಾ ಕ್ರಮಗಳನ್ನುಪೋಲಿಸ್ ಇಲಾಖೆ ಕೈಗೊಳ್ಳಲಾಗಿದೆ.
ಇಂದು ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ ಪಂದ್ಯದಲ್ಲಿ ಪ್ರೇಕ್ಷಕರ ಅನುಕೂಲಕ್ಕಾಗಿ ಹೆಚ್ಚುವರಿ ಬ್ಯಾಗೇಜ್ ಕೌಂಟರ್ಗಳನ್ನು ಸ್ಥಾಪಿಸಲಾಗಿದ್ದು, ಪ್ರವೇಶ ದ್ವಾರಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಯಲಿದೆ. ಹಿಂದಿನ ಪಂದ್ಯದಲ್ಲಿ 70ಕ್ಕೂ ಹೆಚ್ಚು ಮೊಬೈಲ್ ಕಳ್ಳತನವಾದ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆ, ಈ ಬಾರಿ ಕಳ್ಳತನ ತಡೆಗಟ್ಟಲು ವಿಶೇಷ ಗಮನ ಹರಿಸಲಾಗಿದೆ. ಸ್ಟೇಡಿಯಂ ಆವರಣದಲ್ಲಿ ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾಗಳು ಅಳವಡಿಸಲಾಗಿದ್ದು, ಶಂಕಾಸ್ಪದ ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಿನ ನಿಗಾವಹಿಸಲಾಗುತ್ತಿದೆ.
ಇಂದು ಬೆಂಗಳೂರುನಲ್ಲಿ ನಡೆಯುವ ಐಪಿಎಲ್ ಕ್ರಿಕೆಟ್ ಪ್ರಿಯರಿಗೆ ಪೊಲೀಸರು ಕೆಲವು ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ. ಅಮೂಲ್ಯ ವಸ್ತುಗಳನ್ನು ಜಾಗ್ರತೆಯಿಂದ ಕಾಪಾಡಿಕೊಳ್ಳಬೇಕು, ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ತಕ್ಷಣ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಜೊತೆಗೆ, ಸ್ಟೇಡಿಯಂ ಒಳಗೆ ಹಾಗೂ ಹೊರಭಾಗದಲ್ಲಿ ಸೈನ್ಬೋರ್ಡ್ಗಳು ಮತ್ತು ಮೈಕ್ ಮೂಲಕ ನಿರಂತರ ಅನೌನ್ಸ್ಮೆಂಟ್ಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ಕ್ರೀಕೆಟ್ ನೋಡಲು ಬರುವ ಭಾರಿ ಜನಸಂದಣಿಯನ್ನು ನಿಯಂತ್ರಿಸುವ ಉದ್ದೇಶದಿಂದ ಬಿಎಂಟಿಸಿ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಮೆಟ್ರೋ ಸಂಚಾರ ಸಮಯವೂ ವಿಸ್ತರಿಸಲಾಗಿದ್ದು, ಅಭಿಮಾನಿಗಳು ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಸಲಹೆ ನೀಡಲಾಗಿದೆ. ಪಾರ್ಕಿಂಗ್ ವ್ಯವಸ್ಥೆ ಕೂಡ ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ಲಭ್ಯವಿರುತ್ತದೆ.
ಟಿಕೆಟ್ ಇಲ್ಲದವರಿಗೆ ಸ್ಟೇಡಿಯಂ ಪ್ರವೇಶ ಸಂಪೂರ್ಣ ನಿರ್ಬಂಧಿಸಲಾಗಿದೆ. ನಕಲಿ ಟಿಕೆಟ್ ಮಾರಾಟ ಮತ್ತು ಇತರ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಸಿಸಿಬಿ ಅಧಿಕಾರಿಗಳು ವಿಶೇಷ ನಿಗಾವಹಿಸಿದ್ದಾರೆ.
ಅಭಿಮಾನಿಗಳ ಸುರಕ್ಷತೆ ಮತ್ತು ಪಂದ್ಯವು ಯಾವುದೇ ಅಡಚಣೆಗಳಿಲ್ಲದೆ ನಡೆಯಲು ನಗರ ಪೊಲೀಸರು ಸಮಗ್ರ ಸಿದ್ಧತೆ ಮಾಡಿಕೊಂಡಿದ್ದಾರೆ. ಇಂದು ನಡೆಯಲಿರುವ ಈ ಕದನ ಕೇವಲ ಪಂದ್ಯವಲ್ಲ ಇದು ಅಭಿಮಾನಿಗಳ ಉತ್ಸಾಹ, ಭಾವನೆ ಮತ್ತು ಕ್ರಿಕೆಟ್ ಹಬ್ಬದ ಸೊಬಗು!





