
ಮೈಸೂರು,ಫೆ.27: ಜನರಿಗೆ ಹತ್ತಿರದಲ್ಲಿದ್ದುಕೊಂಡು ಅವರ ಬದುಕನ್ನು ಸುಧಾರಿಸುವ ಇಲಾಖೆ ಆರ್.ಡಿ.ಪಿ.ಆರ್ ಆಗಿದ್ದು, ಈ ಹಿನ್ನಲೆಯಲ್ಲಿ ಅಧಿಕಾರಿಗಳು ಜನಸ್ನೇಹಿಯಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಾದ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಮತ್ತು ನೌಕರರ ವೃಂದ ಸಂಘಗಳು ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಶುಕ್ರವಾರ ಕಲಾಮಂದಿರದಲ್ಲಿ ಆಯೋಜಿಸಿದ್ದ “ಮೈಸೂರು ಜಿಲ್ಲಾ ಆರ್.ಡಿ.ಪಿ.ಆರ್ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ನನ್ನ ಸೇವಾವಧಿಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಆಗಿ ಕೆಲಸ ಮಾಡಿದ್ದು ನನಗೆ ನಿಜವಾಗಿಯೂ ಹೆಚ್ಚು ತೃಪ್ತಿ ತಂದಿದೆ. ಈಗಿನ ಸಿಇಒ ಅವರ ನೇತೃತ್ವದಲ್ಲಿ ಆರ್.ಡಿ.ಪಿ.ಆರ್ ಇಲಾಖೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯದಲ್ಲಿ ಉತ್ತಮ ಐಎಎಸ್ ಅಧಿಕಾರಿಯಾಗಿ ಯುಕೇಶ್ ಕುಮಾರ್ ಅವರು ಗುರಿತಿಸಿಕೊಂಡಿದ್ದಾರೆ ಎಂದರು.
ಇಲಾಖೆಯ ನೌಕಕರಿಗೆ ಎರಡು ದಿನಗಳ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿಲಾಗಿದೆ. ಪೌರಾಣಿಕ ನಾಟಕ, ನೃತ್ಯ, ಜನಪದ ಗೀತೆ ಸೇರಿದಂತೆ ಅನೇಕ ಬಗೆಯ ಕಲಾ ಪ್ರದರ್ಶನ ಅತ್ಯುತ್ತಮವಾಗಿತ್ತು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಿಇಒ ಎಸ್.ಯುಕೇಶ್ ಕುಮಾರ್ ಅವರು ಮಾತನಾಡಿ, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಯ ನೌಕರರು ಉತ್ಸಾಹದಿಂದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಸಾಕಷ್ಟು ಶ್ರಮಪಟ್ಟು ನೌಕರರು ತಮ್ಮ ಕಲಾ ಪ್ರತಿಭೆಯನ್ನು ಉತ್ತಮವಾಗಿ ಅನಾವರಣ ಮಾಡಿದ್ದಾರೆ. ಇದೇ ರೀತಿಯಲ್ಲಿ ಕೆಲಸದ ನಡುವೆ ಸಮಯ ಸಿಕ್ಕಾಗ ಅಭ್ಯಾಸವನ್ನು ಮುಂದುವರೆಸಿ ಎಂದು ಸಲಹೆ ನೀಡಿದರು.

ಇಷ್ಟೇ ಉತ್ಸಾಹದಿಂದ ಎಲ್ಲಾ ನೌಕಕರು ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ನಮ್ಮ ಕಾರ್ಯವ್ಯಾಪ್ತಿಯಲ್ಲಿ ನಮಗಿರುವ ಜವಬ್ದಾರಿಯನ್ನು ಉತ್ತಮವಾಗಿ ಪೂರೈಸಬೇಕು. ನಿಗಧಿತ ಸಮಯದಲ್ಲಿ ನಮಗೆ ವಹಿಸಿದ ಕೆಲಸವನ್ನು ಹೆಚ್ಚಿನ ಕಾರ್ಯಕ್ಷಮತೆಯಿಂದ ಮಾಡುವ ಮೂಲಕ ರಾಜ್ಯಕ್ಕೆ ಮಾದರಿ ಜಿಲ್ಲೆಯಾಗಿ ಮಾಡೋಣ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಯಗಳಿಸಿದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳಾದ ಬಿ.ಎಂ.ಸವಿತ, ಭೀಮಪ್ಪ ಕೆ.ಲಾಳಿ, ಮುಖ್ಯ ಯೋಜನಾಧಿಕಾರಿ ಕೆ.ಪ್ರಭುಸ್ವಾಮಿ, ಮುಖ್ಯ ಲೆಕ್ಕಾಧಿಕಾರಿ ಸಿದ್ದಗಂಗಮ್ಮ, ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಸ್.ಪಿ.ಧರಣೇಶ್, ಸಿ.ಕೃಷ್ಣ, ಪ್ರೇಮ್ ಕುಮಾರ್, ವಿ.ಪಿ.ಕುಲದೀಪ್, ಎ.ಎನ್.ರವಿ, ಕೆ.ಹೊಂಗಯ್ಯ, ಸುನೀಲ್ ಕುಮಾರ್, ಕೆ.ರಂಗಸ್ವಾಮಿ, ಪಿಡಿಒ ಸಂಘಧ ಜಿಲ್ಲಾಧ್ಯಕ್ಷ ಕೆ.ರುಕ್ಮಾಂಗದ, ಪ್ರಕಾಶ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಘಟಕದ ಆರ್.ಡಿ.ಪಿ.ಆರ್ ಅಧಿಕಾರಿಗಳು ಮತ್ತು ನೌಕರರ ವೃಂದ ಸಂಘಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಪಿಡಿಒ. ಕಾರ್ಯದರ್ಶಿಗಳು, ಎಸ್‌ಡಿಎಎ, ಡಿಇಒ, ನರೇಗಾ ಸಿಬ್ಬಂದಿ ಇದ್ದರು.





