
ಅನೈತಿಕ ಸಂಬಂಧದ ನೆರಳು… ಅರ್ಚಕನ ಹತ್ಯೆ ಪ್ರಕರಣ ಬಯಲು: ಪತ್ನಿ ಸೇರಿ ನಾಲ್ವರ ಬಂಧ
ಮಂಡ್ಯ, ಮಾ.11:-ಮಂಡ್ಯ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದ ಅರ್ಚಕನ ನಿಗೂಢ ಕೊಲೆ ಪ್ರಕರಣವನ್ನು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಅರ್ಚಕನ ಪತ್ನಿ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಅನೈತಿಕ ಸಂಬಂಧವೇ ಈ ಕೊಲೆಗೆ ಕಾರಣವಾಗಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮಂಡ್ಯ ಜಿಲ್ಲೆಯ ಮರಳಗಾಲ ಗ್ರಾಮದ ಬಳಿ ಮಾ.6 ರಂದು ಅರ್ಚಕ ಸಿದ್ದಲಿಂಗಪ್ಪ ಅವರ ಮೃತದೇಹ ಪತ್ತೆಯಾಗಿದ್ದು, ಆರಂಭದಲ್ಲಿ ಇದನ್ನು ಅಪಘಾತ ಎಂದು ಊಹಿಸಲಾಗಿತ್ತು. ಆದರೆ ಪ್ರಕರಣದ ಹಿನ್ನೆಲೆ ಅನುಮಾನಾಸ್ಪದವಾಗಿದ್ದ ಕಾರಣ ಪೊಲೀಸರು ಸವಿಸ್ತಾರ ತನಿಖೆ ಆರಂಭಿಸಿದ್ದರು. ತನಿಖೆಯ ವೇಳೆ ಸಿದ್ದಲಿಂಗಪ್ಪ ಅವರ ಪತ್ನಿ ಶಾಲಿನಿ ಮತ್ತು ಆಕೆಯ ಪ್ರಿಯಕರ ಟಿಪ್ಪರ್ ಚಾಲಕ ಹರೀಶ ಅವರ ನಡುವಿನ ಅನೈತಿಕ ಸಂಬಂಧವೇ ಕೊಲೆಯ ಮೂಲ ಕಾರಣ ಎಂದು ಪತ್ತೆಯಾಗಿದೆ.
ಮೃತ ಸಿದ್ದಲಿಂಗಪ್ಪ ಅವರು ತನ್ನ ಅಕ್ಕನ ಮಗಳನ್ನು ವಿವಾಹವಾಗಿದ್ದು, ದಂಪತಿಗಳು ಮರಳಗಾಲ ಗ್ರಾಮದಲ್ಲೇ ವಾಸವಾಗಿದ್ದರು. ಕೆಲ ತಿಂಗಳುಗಳಿಂದ ಶಾಲಿನಿ ಮತ್ತು ಅದೇ ಗ್ರಾಮದ ನಿವಾಸಿ ಹರೀಶ ನಡುವಿನ ಸಂಬಂಧದ ಬಗ್ಗೆ ಗ್ರಾಮದಲ್ಲಿ ಗುಸುಗುಸು ಮಾತುಗಳು ಕೇಳಿಬರುತ್ತಿದ್ದವು. ಒಂದು ವೇಳೆ ಇಬ್ಬರೂ ಮನೆಯಲ್ಲಿ ಒಟ್ಟಿಗೆ ಇದ್ದ ವೇಳೆ ಸಿದ್ದಲಿಂಗಪ್ಪ ಅವರಿಗೆ ವಿಷಯ ತಿಳಿದುಬಂದಿದ್ದು, ಬಳಿಕ ದಂಪತಿಗಳ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಪತಿಯ ವಿರೋಧದಿಂದ ಬೇಸತ್ತ ಶಾಲಿನಿ, ತನ್ನ ಪ್ರಿಯಕರ ಹರೀಶ ಜೊತೆ ಸೇರಿ ಪತಿಯನ್ನು ಕೊಲ್ಲುವ ಸಂಚು ರೂಪಿಸಿದ್ದಳು ಎನ್ನಲಾಗಿದೆ. ಯೋಜನೆಯಂತೆ ಮಾ.6 ರಂದು ಹರೀಶ ತನ್ನ ಇಬ್ಬರು ಸ್ನೇಹಿತರೊಂದಿಗೆ ಸೇರಿ ಸಿದ್ದಲಿಂಗಪ್ಪ ಅವರನ್ನು ಕರೆದೊಯ್ದು ಕ್ರೂರವಾಗಿ ಹತ್ಯೆ ಮಾಡಿದ್ದಾನೆ. ಬಳಿಕ ಅಪಘಾತ ನಡೆದಂತೆ ತೋರಿಸಲು ಶವವನ್ನು ಸಮೀಪದ ನಾಲೆಗೆ ಎಸೆದು ನಾಟಕವಾಡಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆ ನಡೆದ ನಂತರ ಆರೋಪಿಗಳು ಯಾವುದೇ ಅನುಮಾನ ಮೂಡದಂತೆ ನಡೆದುಕೊಂಡಿದ್ದು, ಹರೀಶ ಸ್ವತಃ ಮೃತನ ಅಂತ್ಯಕ್ರಿಯೆಯಲ್ಲೂ ಭಾಗವಹಿಸಿದ್ದ ಎನ್ನುವುದು ತನಿಖೆಯಲ್ಲಿ ತಿಳಿದುಬಂದ ಮತ್ತೊಂದು ಅಚ್ಚರಿಯ ಸಂಗತಿ.
ಪೊಲೀಸರು ಮೊಬೈಲ್ ಕರೆ ವಿವರಗಳು ಹಾಗೂ ಸ್ಥಳೀಯರ ಮಾಹಿತಿ ಆಧರಿಸಿ ತನಿಖೆ ಮುಂದುವರೆಸಿದಾಗ ಪ್ರಕರಣದ ಅಸಲಿ ಚಿತ್ರ ಹೊರಬಂದಿದೆ. ಬಳಿಕ ಸಿದ್ದಲಿಂಗಪ್ಪ ಪತ್ನಿ ಶಾಲಿನಿ, ಆಕೆಯ ಪ್ರಿಯಕರ ಹರೀಶ ಹಾಗೂ ಹರೀಶನ ಇಬ್ಬರು ಸಹಚರರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಘಟನೆ ಗ್ರಾಮದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಅನೈತಿಕ ಸಂಬಂಧದ ಕಾರಣದಿಂದ ನಡೆದ ಈ ದುರಂತಕ್ಕೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಮುಂದುವರೆಸಿದ್ದಾರೆ.





