
ಮೈಸೂರು, ಮಾ.05: ಮೈಸೂರು ವಕೀಲರ ಗೃಹ ನಿರ್ಮಾಣ ಸಹಕಾರ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಹಿರಿಯ ವಕೀಲ ಶಂಭುಗೌಡ ಅವರು ಐದನೇ ಬಾರಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಸೋಮನಾಯಕ.ಬಿ ಅವರು ಆಯ್ಕೆಯಾಗಿದ್ದಾರೆ. ಗುರುವಾರ ಮೈಸೂರಿನ ಸಂಘದ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಈ ಆಯ್ಕೆ ನಡೆದಿದ್ದು, ಸಂಘದ ಸದಸ್ಯರು ಹಾಗೂ ನಿರ್ದೇಶಕರುಗಳ ಸಮ್ಮುಖದಲ್ಲಿ ನೂತನ ಪದಾಧಿಕಾರಿಗಳನ್ನು ಘೋಷಿಸಲಾಯಿತು.
ಚುನಾವಣಾ ಪ್ರಕ್ರಿಯೆಯನ್ನು ಮೈಸೂರು ಸರ್ಕಾರಿ ಸಹಕಾರಿಗಳ ಮುಖ್ಯ ಚುನಾವಣಾಧಿಕಾರಿ ಮಂಜು ಅವರು ನಡೆಸಿಕೊಟ್ಟರು. ಬಳಿಕ ವಕೀಲರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೋಭಾ ಅವರು ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದರು.

ಐದನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಶಂಭುಗೌಡ ಅವರು, ತಮ್ಮ ಮೇಲೆ ವಿಶ್ವಾಸವಿಟ್ಟು ಮತ್ತೊಮ್ಮೆ ಅವಕಾಶ ನೀಡಿದ ಸಂಘದ ಎಲ್ಲಾ ನಿರ್ದೇಶಕರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದರು. “ನಿರ್ದೇಶಕರು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಸಂಘದ ಅಭಿವೃದ್ಧಿಗಾಗಿ ನಿಷ್ಠೆಯಿಂದ ಕೆಲಸ ಮಾಡುತ್ತೇನೆ. ವಕೀಲರ ವಸತಿ ಸಮಸ್ಯೆ ನಿವಾರಣೆಗೆ ಮತ್ತು ಸಂಘದ ಸೌಕರ್ಯಗಳ ವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ” ಎಂದು ಹೇಳಿದರು.
ಸಂಘದ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ರೂಪಿಸುವ ಜೊತೆಗೆ ಸದಸ್ಯರಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಒದಗಿಸಲು ಆಡಳಿತ ಮಂಡಳಿ ಸಮನ್ವಯದಿಂದ ಕಾರ್ಯನಿರ್ವಹಿಸಲಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಎಲ್. ಲಿಜಾ, ಜೆ. ಲೋಕೇಶ್ ಗೌಡ, ಜಿ.ಡಿ. ಸುಮಂತ್, ಪಿ.ಎಲ್. ಪಂಚಲಿಂಗೇಗೌಡ, ಪ್ರಸನ್ನಕುಮಾರ್ ಕೆ. (ಗಂಜಾಂ), ರಾಜು ಪಿ., ಎನ್. ಮಂಜುನಾಥ್, ಪಿ. ತೇಜಸ್ವಿ, ಸಿದ್ದಪ್ಪಾಜಿ ಚಾರಿ, ಗೋಪಾಲೇಗೌಡ ಎಸ್.ಆರ್., ಪ್ರಸಾದ್ ಕುಮಾರ್ ಎಸ್., ಸೋಮನಾಯಕ ಬಿ., ಬಿ.ಆರ್. ಅನುರಾಧ ಹಾಗೂ ಮಂಗಳ ಸಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಂಘದ ಆಡಳಿತ ಮಂಡಳಿಯ ನೂತನ ಪದಾಧಿಕಾರಿಗಳು ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಸಂಘದ ಕಾರ್ಯಚಟುವಟಿಕೆಗಳಿಗೆ ಹೊಸ ಚೈತನ್ಯ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.





