HOMENews

ಮೈಸೂರಿನಲ್ಲಿ ರಾಜ್ಯ ಮಟ್ಟದ ಅಂತರ್ ಕಾಲೇಜು ಉತ್ಸವ “ಗೀತಾ ಸಂಹಿತಾ–2026” ಮಾರ್ಚ್ 13ರಿಂದ

ಮೈಸೂರು, ಮಾ.11:- ಮೈಸೂರಿನ GSSS–ಸಿಂಹ ಸುಬ್ಬಮಹಾಲಕ್ಷ್ಮಿ ಫಸ್ಟ್ ಗ್ರೇಡ್ ಕಾಲೇಜು (GSSS–SSFGC) ವತಿಯಿಂದ ರಾಜ್ಯ ಮಟ್ಟದ ಮ್ಯಾನೇಜ್ಮೆಂಟ್, ಟೆಕ್ನೋ ಹಾಗೂ ಸಾಂಸ್ಕೃತಿಕ ಅಂತರ್ ಕಾಲೇಜು ಉತ್ಸವ “ಗೀತಾ ಸಂಹಿತಾ–2026” ಮಾರ್ಚ್ 13 ಮತ್ತು 14 ರಂದು ವಿಜೃಂಭಣೆಯಿಂದ ನಡೆಯಲಿದೆ. ರಾಜ್ಯದ ವಿವಿಧ ಕಾಲೇಜುಗಳ ಪದವಿ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಅವರ ಪ್ರತಿಭೆ, ನಿರ್ವಹಣಾ ಕೌಶಲ್ಯ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಲು ಈ ಉತ್ಸವವನ್ನು ಆಯೋಜಿಸಲಾಗಿದೆ.

ಉತ್ಸವದ ಉದ್ಘಾಟನಾ ಸಮಾರಂಭವು ಮಾರ್ಚ್ 13ರಂದು ಬೆಳಿಗ್ಗೆ 9.30ಕ್ಕೆ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದ್ದು, GSSS(R) ಮೈಸೂರು ಕಾರ್ಯದರ್ಶಿಗಳಾದ ಶ್ರೀಮತಿ ಅನುಪಮಾ ಬಿ. ಪಂಡಿತ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸ್ಥೆಯ ಸದಸ್ಯರು ಹಾಗೂ ಸಿಇಒ ಆಗಿರುವ ಶ್ರೀ ಭರತ್ ಆರ್. ಕೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಕೇಶ್ ಟಿ. ಎಸ್. ಅವರು ಉಪಸ್ಥಿತರಿದ್ದು, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ತಿಳಿಸಲಿದ್ದಾರೆ.

ಈ ಉತ್ಸವದ ಮುಖ್ಯ ಉದ್ದೇಶವು ರಾಜ್ಯದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ತಮ್ಮ ನಿರ್ವಹಣಾ ಸಾಮರ್ಥ್ಯ, ಹೊಸತನದ ಆಲೋಚನೆ, ನಾಯಕತ್ವ ಗುಣಗಳು ಹಾಗೂ ತಂಡದ ಕಾರ್ಯಪಟುತೆಯನ್ನು ಪ್ರದರ್ಶಿಸಲು ಸೂಕ್ತ ವೇದಿಕೆಯನ್ನು ಒದಗಿಸುವುದಾಗಿದೆ. ಎರಡು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಮ್ಯಾನೇಜ್ಮೆಂಟ್, ಟೆಕ್ನಿಕಲ್ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಿಗೆ ಸಂಬಂಧಿಸಿದ ವಿವಿಧ ಸ್ಪರ್ಧೆಗಳು ನಡೆಯಲಿದ್ದು, ವಿದ್ಯಾರ್ಥಿಗಳ ವಿಶ್ಲೇಷಣಾತ್ಮಕ ಚಿಂತನೆ, ಸಮಸ್ಯೆ ಪರಿಹಾರ ಕೌಶಲ್ಯ ಮತ್ತು ನಾಯಕತ್ವ ಗುಣಗಳನ್ನು ಪರೀಕ್ಷಿಸಲಾಗುತ್ತದೆ.

GSSS(R) ಮೈಸೂರು ಸಂಸ್ಥೆಯ ಆಡಳಿತ ಮಂಡಳಿಯ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಕಾಲೇಜಿನ ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣಾ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಕೃಷ್ಣ ಕೆ. ಎಸ್. ಹಾಗೂ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ನೇತ್ರಾ ಜಿ. ಅವರು ಸಿಬ್ಬಂದಿ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉತ್ಸವದ ಯಶಸ್ವಿ ಆಯೋಜನೆಗಾಗಿ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸಕ್ರೀಯವಾಗಿ ಸಿದ್ಧತೆ ನಡೆಸುತ್ತಿದ್ದಾರೆ.

ಉತ್ಸವದ ವಿಶೇಷ ಆಕರ್ಷಣೆಯಾಗಿ ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಅವರ ಸಂಗೀತ ರಂಜನೆ ಕಾರ್ಯಕ್ರಮವು ಮಾರ್ಚ್ 14ರಂದು ಸಂಜೆ 6 ಗಂಟೆಗೆ GSSSIETW ಕ್ಯಾಂಪಸ್‌ನ ರಂಗಮಂಟಪದಲ್ಲಿ ನಡೆಯಲಿದೆ. ಈ ಸಂಗೀತ ಕಾರ್ಯಕ್ರಮವು ವಿದ್ಯಾರ್ಥಿಗಳು ಹಾಗೂ ಸಂಗೀತಾಸಕ್ತರಿಗೆ ವಿಶಿಷ್ಟ ಮನರಂಜನೆಯನ್ನು ನೀಡಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.ರಾಜ್ಯದ ವಿವಿಧ ಕಾಲೇಜುಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಸ್ಪರ್ಧಾರ್ಥಿಗಳು ಈ ಉತ್ಸವದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿರೀಕ್ಷೆ ವ್ಯಕ್ತವಾಗಿದೆ. ಎರಡು ದಿನಗಳ ಈ ಉತ್ಸವವು ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಾಸ, ಅನುಭವಾತ್ಮಕ ಅಧ್ಯಯನ ಹಾಗೂ ಶೈಕ್ಷಣಿಕ ಉತ್ತುಂಗವನ್ನು ಉತ್ತೇಜಿಸುವ ಮಹತ್ವದ ವೇದಿಕೆಯಾಗಲಿದೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.

Leave a Reply