HOMENews

ಎಸ್‌ಟಿಜಿ ಕಾಲೇಜಿನ ವಿದ್ಯಾರ್ಥಿನಿ 507 ಅಂಕಗಳೊಂದಿಗೆ ಕಂಪಲಾಪುರದ ತೃಪ್ತಿ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಯ ಹಾದಿ

ವರದಿ: ರವಿಚಂದ್ರ ಬೂದಿತಿಟ್ಟು

ಪಿರಿಯಾಪಟ್ಟಣ: 2026–27ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದ್ದು, ತಾಲೂಕಿನ ವಿದ್ಯಾರ್ಥಿನಿಯೊಬ್ಬಳು ಗಮನಾರ್ಹ ಸಾಧನೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾಳೆ.

ತಾಲೂಕಿನ ಕಂಪಲಾಪುರ ಗ್ರಾಮದ ಪತ್ರಿಕಾವರದಿಗಾರರಾದ ಪಿ.ಆರ್. ರಾಜೇಶ್ ಹಾಗೂ ಲತಾ ದಂಪತಿಗಳ ಪುತ್ರಿ ತೃಪ್ತಿ ಆರ್ ಅವರು ವಿಜ್ಞಾನ ವಿಭಾಗದಲ್ಲಿ ಶೇಕಡಾ 85ರಷ್ಟು ಅಂಕಗಳನ್ನು ಗಳಿಸುವ ಮೂಲಕ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ತಮ್ಮ ಪರಿಶ್ರಮ ಮತ್ತು ಏಕಾಗ್ರತೆಯಿಂದ ಅವರು ಈ ಸಾಧನೆ ಮಾಡಿದ್ದಾರೆ.

ತೃಪ್ತಿ ಅವರು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನುಕುರಳಿಯಲ್ಲಿ ಇರುವ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಅವರ ಒಡೆತನದ ಪ್ರತಿಷ್ಠಿತ ಎಸ್‌ಟಿಜಿ ವಿಜ್ಞಾನ ವಿಭಾಗದ ಪಿಯು ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಪ್ರಸ್ತುತ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ-1ರಲ್ಲಿ ಒಟ್ಟು 507 ಅಂಕಗಳನ್ನು ಪಡೆದು ಮೆಚ್ಚುಗೆ ಗಳಿಸಿದ್ದಾರೆ.

ವಿಷಯವಾರು ಅಂಕಗಳ ವಿವರ ಗಮನಿಸಿದರೆ, ಕನ್ನಡದಲ್ಲಿ 92, ಇಂಗ್ಲಿಷ್‌ನಲ್ಲಿ 72, ಭೌತಶಾಸ್ತ್ರದಲ್ಲಿ 83, ರಾಸಾಯನಶಾಸ್ತ್ರದಲ್ಲಿ 81, ಗಣಿತಶಾಸ್ತ್ರದಲ್ಲಿ ಅತ್ಯಧಿಕ 97 ಹಾಗೂ ಜೀವಶಾಸ್ತ್ರದಲ್ಲಿ 82 ಅಂಕಗಳನ್ನು ಪಡೆದಿದ್ದಾರೆ. ವಿಶೇಷವಾಗಿ ಗಣಿತಶಾಸ್ತ್ರದಲ್ಲಿ ಪಡೆದಿರುವ 97 ಅಂಕಗಳು ಅವರ ಪ್ರತಿಭೆಯನ್ನು ಇನ್ನಷ್ಟು ಹೈಲೈಟ್ ಮಾಡಿವೆ.

ತೃಪ್ತಿ ಅವರ ಸಾಧನೆಯ ಹಿಂದೆ ನಿರಂತರ ಅಧ್ಯಯನ, ಶಿಕ್ಷಕರ ಮಾರ್ಗದರ್ಶನ ಮತ್ತು ಪೋಷಕರ ಪ್ರೋತ್ಸಾಹ ಪ್ರಮುಖ ಪಾತ್ರವಹಿಸಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. “ನಿಯಮಿತ ಅಭ್ಯಾಸ, ಸಮಯದ ಸರಿಯಾದ ಬಳಕೆ ಮತ್ತು ಆತ್ಮವಿಶ್ವಾಸವೇ ನನ್ನ ಯಶಸ್ಸಿನ ಗುಟ್ಟು” ಎಂದು ತೃಪ್ತಿ ಅವರು ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.

ಈ ಸಾಧನೆಯಿಂದ ಕುಟುಂಬಸ್ಥರು, ಬಂಧು-ಬಳಗದವರು ಹಾಗೂ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದು, ವಿದ್ಯಾರ್ಥಿನಿಯ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ ಎಂದು ಹಾರೈಸಿದ್ದಾರೆ. ಶಿಕ್ಷಕರು ಕೂಡ ತೃಪ್ತಿ ಅವರ ಶ್ರಮವನ್ನು ಶ್ಲಾಘಿಸಿ, ಮುಂದಿನ ಮುಖ್ಯ ಪರೀಕ್ಷೆಯಲ್ಲೂ ಇನ್ನಷ್ಟು ಉತ್ತಮ ಸಾಧನೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗ್ರಾಮೀಣ ಭಾಗದಿಂದ ಬಂದ ವಿದ್ಯಾರ್ಥಿನಿಯೊಬ್ಬಳು ಈ ಮಟ್ಟದ ಸಾಧನೆ ಮಾಡಿರುವುದು ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ. ಪಿರಿಯಾಪಟ್ಟಣ ತಾಲೂಕಿನಿಂದ ಹೊರಹೊಮ್ಮುತ್ತಿರುವ ಪ್ರತಿಭೆಗಳು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲುಗಳನ್ನು ಸ್ಥಾಪಿಸುತ್ತಿರುವುದು ಗಮನಾರ್ಹವಾಗಿದೆ.

Leave a Reply