
ಕೊಪ್ಪಳ, ಮಾರ್ಚ್ 30: ಗಂಗಾವತಿ ನಗರದಲ್ಲಿ ವಿಚಿತ್ರ ಮತ್ತು ಆತಂಕಕಾರಿ ಕಳ್ಳತನ ಪ್ರಕರಣೊಂದು ಬೆಳಕಿಗೆ ಬಂದಿದೆ. ನಗರದ ಸಿಬಿಎಸ್ ಬಡಾವಣೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ರಾತ್ರಿ ವೇಳೆ ಮನೆಗಳ ಕಪೌಂಡ್ ಗೋಡೆಗಳನ್ನು ಹಾರಿ ಒಳನುಗ್ಗುತ್ತಿರುವ ಅಪರಿಚಿತ ವ್ಯಕ್ತಿ, ಮಹಿಳೆಯರ ಒಳ ಉಡುಪುಗಳನ್ನು ಮಾತ್ರ ಕಳ್ಳತನ ಮಾಡುತ್ತಿರುವ ಘಟನೆಗಳು ವರದಿಯಾಗಿವೆ.
ಸ್ಥಳೀಯರ ಮಾಹಿತಿ ಪ್ರಕಾರ, ಈತನ ಕೃತ್ಯಗಳು ನಿಯಮಿತವಾಗಿ ಮಧ್ಯರಾತ್ರಿ ನಂತರ ನಡೆಯುತ್ತಿವೆ. ಮನೆಯವರ ಗಮನಕ್ಕೆ ಬಾರದೆ ಚುರುಕಾಗಿ ಒಳನುಗ್ಗಿ, ಒಣಗಲು ಹಾಕಿದ್ದ ಅಥವಾ ಹೊರಗಡೆ ಇಟ್ಟಿದ್ದ ಮಹಿಳೆಯರ ಒಳ ಉಡುಪುಗಳನ್ನು ಮಾತ್ರ ತೆಗೆದುಕೊಂಡು ಪರಾರಿಯಾಗುತ್ತಿರುವುದು ಗಮನಾರ್ಹವಾಗಿದೆ. ಇತರ ಯಾವುದೇ ಬೆಲೆಬಾಳುವ ವಸ್ತುಗಳಿಗೆ ಸ್ಪರ್ಶ ಮಾಡದೇ ಇರುವುದರಿಂದ, ಈತನ ನಡೆಗೆ “ವಿಕೃತ ಮನೋಭಾವ” ಕಾರಣ ಇರಬಹುದೆಂಬ ಅನುಮಾನ ವ್ಯಕ್ತವಾಗುತ್ತಿದೆ.
ಈ ಘಟನೆಗೆ ಸಂಬಂಧಿಸಿದಂತೆ ಕೆಲವು ಮನೆಗಳ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸಂಶಯಾಸ್ಪದ ವ್ಯಕ್ತಿಯ ಚಲನವಲನಗಳು ಸೆರೆಯಾಗಿವೆ. ಮುಖವನ್ನು ಮುಚ್ಚಿಕೊಂಡಿರುವ ಈ ವ್ಯಕ್ತಿ, ಸುತ್ತಮುತ್ತಲಿನ ಪರಿಸ್ಥಿತಿಯನ್ನು ಗಮನಿಸಿ, ಯಾರು ಇಲ್ಲದ ವೇಳೆ ಮಾತ್ರ ಕಳ್ಳತನಕ್ಕೆ ಮುಂದಾಗುತ್ತಿರುವುದು ದೃಶ್ಯಗಳಲ್ಲಿ ಕಂಡುಬಂದಿದೆ.
ಈ ಬೆಳವಣಿಗೆಯಿಂದಾಗಿ ಸಿಬಿಎಸ್ ಬಡಾವಣೆಯ ಮಹಿಳೆಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ರಾತ್ರಿ ವೇಳೆ ಬಟ್ಟೆಗಳನ್ನು ಹೊರಗಡೆ ಒಣಗಲು ಹಾಕಲು ಸಹ ಹೆದರುತ್ತಿದ್ದಾರೆ. ಕೆಲವರು ಈತನಿಂದ ಮತ್ತಷ್ಟು ಗಂಭೀರ ಅಪರಾಧಗಳ ಸಂಭವವಿರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಗಂಗಾವತಿ ನಗರ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಆರೋಪಿಯನ್ನು ಪತ್ತೆಹಚ್ಚಲು ಬಲೆ ಬೀಸಿದ್ದಾರೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು, ಅಪರಿಚಿತ ವ್ಯಕ್ತಿಗಳ ಚಲನವಲನಗಳ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಈ ವಿಚಿತ್ರ ಕಳ್ಳತನ ಪ್ರಕರಣ ನಗರದಲ್ಲಿ ಆತಂಕದ ನೆರಳು ಬೀರುತ್ತಿದ್ದು, ಆರೋಪಿಯನ್ನು ಶೀಘ್ರ ಬಂಧಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.





