HOMENews

ದಲಿತ ಯುವಕ ಆನಂದ ಕುಮಾರನ ಸ್ಥಿತಿ ಚಿಂತಾಜನಕ : ದಸಂಸ ಕ್ರಮಕ್ಕೆ ಆಗ್ರಹ

ಮೈಸೂರು :- ಮೈಸೂರು ಜಿಲ್ಲೆ, ಸಾಲಿಗ್ರಾಮ ತಾಲ್ಲೂಕು ಚುಂಚನಕಟ್ಟೆ ಹೊಸೂರು ಗ್ರಾಮದ ದಲಿತ ಯುವಕ ಆನಂದ್ ಕುಮಾರನ(23 ವರ್ಷ)ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದು, ಈತನ ಈ ಸ್ಥಿತಿಗೆ ಕಾರಣರಾದ ಸುಜಾತ ಎಸ್ಟೇಟ್ನ ಮಾಲೀಕರಾದ ಮೋಹನ್ ದಾಸ್ ವಿರುದ್ಧ ಕ್ರಮಕ್ಕೆ ಮೈಸೂರು ಜಿಲ್ಲಾ ದಸಂಸ ಆಗ್ರಹಿಸುತ್ತದೆ.

ಈ ಸಂಬಂಧ ದಸಂಸ ದ ರಾಜ್ಯ ಸಂಘಟನಾ ಸಂಚಾಲಕರಾದ ನಿಂಗರಾಜ್ ಮಲ್ಲಾಡಿ ರವರು ದಿನಾಂಕ:26-02-2026ರ ಗುರುವಾರ ಚುಂಚನಕಟ್ಟೆ ಹೊಸೂರು ಗ್ರಾಮದ ದಲಿತ ಯುವಕ ಆನಂದಕುಮಾರನ ಮನೆಗೆ ಭೇಟಿ ನೀಡಿ ಆತನು ಚಿಂತಾಜನಕ ಸ್ಥಿತಿಯಲ್ಲಿರುವುದನ್ನು ನೋಡಿ ಮನನೊಂದು ಅವರಿಂದ ಮಾಹಿತಿ ಪಡೆದುಕೊಂಡು ಮಾತನಾಡಿ ಆನಂದಕುಮಾರನು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಎಂದಿನಂತೆ ಕೂಲಿ ಕೆಲಸಕ್ಕೆಂದು ಕೊಡಗು ಜಿಲ್ಲೆಯ, ಸುಂಟಿಕೊಪ್ಪ ಹೋಬಳಿಯ ಕಂಬೀಬಾಣೆಯ ಹತ್ತೂರು-ನಲ್ಲೂರು ಗ್ರಾಮದಲ್ಲಿರುವ ಸುಜಾತ ಎಸ್ಟೇಟ್ ನಲ್ಲಿ ದಿನಾಂಕ : 29-04-2022ರಂದು ಆನಂದಕುಮಾರ ಮತ್ತು ಇವರ ತಂದೆ ವಿಜಯ ಮೇಲೆ ಹೇಳಿದ ಎಸ್ಟೇಟ್ ನಲ್ಲಿರುವ ಮರಗಳನ್ನು ಕಡಿದು (ಕಪಾತ್ ಕೆಲಸ) ಸ್ವಚ್ಛವಾಗಿ ಇಡಲು ಕೂಲಿ ಕೆಲಸಕ್ಕೆ ಹೋಗಿದ್ದರು.

ಹೀಗಿರುವಾಗ ಎಂದಿನಂತೆ ದಿನಾಂಕ: 30-4-2022 ರಂದು  ಬೆಳಿಗ್ಗೆಯೇ ಕೂಲಿ ಕೆಲಸಕ್ಕೆಂದು ಸುಜಾತ ಎಸ್ಟೇಟ್ಗೆ ಬಂದಿದ್ದು, ಸುಜಾತ ಎಸ್ಟೇಟ್ನ ಮಾಲೀಕರಾದ ಮೋಹನ್ ದಾಸ್ ರವರು ಹತ್ತಿಮರವನ್ನು ಕಪಾತ್ ಮಾಡುವಂತೆ ಹೇಳಿ ಆನಂದ್ ಕುಮಾರ ಮತ್ತು ಇವರ ತಂದೆ ವಿಜಯ್ ರವರನ್ನು ತೋಟಕ್ಕೆ ಕಳುಹಿಸಿದಾಗ ಹತ್ತಿಮರ ಟೊಳ್ಳು ನಾನು ಈ ಮರಕ್ಕೆ ಹತ್ತುವುದಿಲ್ಲ ಎಂದು ಆನಂದಕುಮಾರ ನಿರಾಕರಿಸಿದಾಗ ಮೋಹನ್ ದಾಸ್ ರವರು ನಾನು ಹೇಳಿದಂತೆ ಕೇಳು. ಮರ ಹತ್ತಿ ಮರ ಕಪಾತ್ ಮಾಡು ಎಂದು ಬೆದರಿಸಿದಾಗ ವಿಧಿಯಿಲ್ಲದೆ ಕಪಾತ್ ಮಾಡುತ್ತಿರುವಾಗ  ಆನಂದಕುಮಾರನು 50ರಿಂದ 60 ಅಡಿಗಳ ಎತ್ತರದಿಂದ ಮರದ ಸಮೇತ ಕೆಳಗೆ ಬಿದ್ದಿದ್ದು,  ಅಷ್ಟು ಎತ್ತರದಿಂದ ಬಿದ್ದಿರುವುದರಿಂದ ವಿಪರೀತ ರಕ್ತಸ್ರಾವವಾಗಿ ದಲಿತ ಯುವಕನಾದ ಆನಂದಕುಮಾರನ ಕೈಕಾಲುಗಳ ಸ್ವಾಧೀನವನ್ನು ಸಹ ಕಳೆದುಕೊಂಡಿರುತ್ತಾನೆ. ಆ ತಕ್ಷಣವೇ ಜೊತೆಯಲ್ಲಿದ್ದ ತಂದೆ ವಿಜಯ  ತಕ್ಷಣವೇ ಮಗನನ್ನು ರಕ್ಷಣೆ ಮಾಡಿ ಚಿಕಿತ್ಸೆಗಾಗಿ ಸುಂಟಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಆನಂದಕುಮಾರನನ್ನು ಪರೀಕ್ಷಿಸಿದ ವೈದ್ಯರು ಹೆಚ್ಚಿನ ತುರ್ತು ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕಳುಹಿಸಿದರು. ನಂತರ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯ ವೈದ್ಯರು ಆನಂದಕುಮಾರನಿಗೆ ಪ್ರಥಮ ಚಿಕಿತ್ಸೆ ನೀಡಿ, ಅಂಬುಲೆನ್ಸ್ ಮುಖೇನ ಮೈಸೂರಿನ ಕೆ.ಆರ್ ಎಸ್ ಆಸ್ಪತ್ರೆಗೆ ಕಳುಹಿಸಿದ್ದು, ನಂತರ ಮೈಸೂರಿನ ಜೆ.ಎಸ್.ಎಸ್ ವೈದ್ಯಕೀಯ ಮಹಾಸಂಸ್ಥೆಗೆ ಶಸ್ತ್ರಚಿಕಿತ್ಸೆಗಾಗಿ ಕಳುಹಿಸಿದರು. ಒಂದು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದ ದಲಿತ ಯುವಕ ಆನಂದಕುಮಾರ ಚಿಕಿತ್ಸೆಗೆ ಹಣಕಾಸಿನ ತೊಂದರೆಯಾದ ಕಾರಣ ಇವರು ಹಣ ಕ್ರೋಢೀಕರಿಸಿಕೊಂಡು ಬೆಂಗಳೂರಿನ  ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜ್ ಹಾಸ್ಪಿಟಲ್ಗೆ ದಾಖಲಾಗಿ 3 ತಿಂಗಳು ಚಿಕಿತ್ಸೆ ಪಡೆದುಕೊಂಡು ಪಡೆದು ನಂತರ  ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸುಂಟಿಕೊಪ್ಪ ಠಾಣೆಯ ಪೊಲೀಸ್ ನವರು ಬಂದು ಎಸ್ಟೇಟ್ ಮಾಲೀಕನಾದ ಮೋಹನ್ ದಾಸ್ ಮೇಲೆ ದೂರು ಪಡೆದುಕೊಂಡು ಹೋಗಿರುತ್ತಾರೆ.  ದೂರು ಪಡೆದುಕೊಂಡು ಹೋದ ಪೊಲೀಸ್ ಅಧಿಕಾರಿಗಳು ಎಸ್ಟೇಟ್ ಮಾಲೀಕ ಮೋಹನ್ ದಾಸ್ನ ಹಣ ಮತ್ತು ರಾಜಕೀಯ ಪ್ರಭಾವಕ್ಕೆ ಒಳಗಾಗಿ ಆತನ ವಿರುದ್ಧ ಮೂರು ವರ್ಷಗಳೇ ಕಳೆದರೂ ಯಾವುದೇ  ಕಾನೂನು ಕ್ರಮ ಜರುಗಿಸಿಲ್ಲ.

ಅಂದು ದಲಿತ ಯುವಕನ ಸ್ಪೈನಲ್ ಕಾರ್ಡ್ ಕೆಲಸ ನಿರ್ವಹಿಸದ ಕಾರಣ ಆತನು ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡು, ತಿರುಗಾಡಲು ಆಗದೇ ಒಂದೇ ಜಾಗದಲ್ಲಿ ಮಲಗಬೇಕಾದ ಪರಿಸ್ಥಿತಿ ಬಂದೊದಗಿದೆ. ಈತನ ನಿತ್ಯ ಕರ್ಮಗಳನ್ನು ದಿನನಿತ್ಯ ಮಾಡಲು ಪೋಷಕರಾದ ತಂದೆ ಮತ್ತು ತಾಯಿ ಸದಾ ಜೊತೆಯಲ್ಲಿರಬೇಕು. ಮುಂದುವರೆದು ದಲಿತ ಯುವಕ ಆನಂದಕುಮಾರನು ಸುಜಾತ ಎಸ್ಟೇಟ್ನ ಮಾಲೀಕರಾದ ಮೋಹನ್ದಾಸ್ ರವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳೀಯ ಸುಂಠಿಕೊಪ್ಪ ಠಾಣೆಗೆ ದೂರು ನೀಡಲು ಹೋದಾಗಲೆಲ್ಲಾ ಇವರನ್ನು ತಡೆದು ನೀನು ನಮ್ಮ ವಿರುದ್ಧ ದೂರು ನೀಡಬೇಡ. ನಿನಗೆ ತಗಲುವ ವೈದ್ಯಕೀಯ ವೆಚ್ಚ ಎಷ್ಟೇ ಆದರೂ ಸಂಪೂರ್ಣ  ವೆಚ್ಚವನ್ನು ನಾವು ಭರಿಸುತ್ತೇವೆ. ಯಾವುದೇ ಕಾರಣಕ್ಕೂ ನೀನು ದೂರು ನೀಡಬಾರದು ಎಂದು ಹೆದರಿಸುತ್ತಿದ್ದರು. ಮತ್ತು ಆಸೆ ಬರಿಸುವ ಮಾತುಗಳನ್ನು ಹೇಳುತ್ತಾ ದೂರು ಕೊಡದಂತೆ ತಡೆದು ವಾಪಸ್ಸು ಕಳುಹಿಸುತ್ತಿದ್ದರು.  ಆದರೆ ಇದುವರೆಗೂ ಯಾವುದೇ ರೀತಿಯ ಪರಿಹಾರವನ್ನು ಸಹ ನೀಡಲಿಲ್ಲ.

ಅವರ ಈ ಅಪಕೃತ್ಯದಿಂದ ದಲಿತ ಯುವಕ ಜೀವನವಿಡೀ ದುಡಿಯಲು ಅಶಕ್ತನಾಗಿರುತ್ತಾನೆ.  ಹಾಗೂ ಮಲಗಿದಲ್ಲೇ ಮೂತ್ರ ವಿಸರ್ಜನೆ ಮತ್ತು ಮಲ ವಿಸರ್ಜನೆ ಮಾಡುವ ಸ್ಥಿತಿ ಇದೆ. ದಿನಕ್ಕೆ ನಾಲ್ಕು ಬಾರಿ ಸಿ.ಟಿ.ಸಿ ಹಾಕಿಸಿಕೊಂಡು ಮೂತ್ರವನ್ನು ಹೊರತೆಗೆಬೇಕಾಗಿರುತ್ತದೆ. ಮಲಕ್ಕೆ ಪ್ಯಾಡ್ ಹಾಕಿಸಿಕೊಳ್ಳಬೇಕಾಗಿರುತ್ತದೆ. ಈತನ ಎಲ್ಲಾ ಮಲ ಮೂತ್ರ ವಿಸರ್ಜನೆಗಳನ್ನು ಅವರ ತಂದೆ ವಿಜಯ ತಾಯಿ ಲಕ್ಷ್ಮಿರವರೇ ದಿನನಿತ್ಯ ಶುಚಿತ್ವ  ಮಾಡಬೇಕಾಗಿರುತ್ತದೆ. ದುಡಿದು ಸಾಕಬೇಕಾದ ಆನಂದಕುಮಾರ ಜೀವಂತ ಶವವಾಗಿ ಮಲಗಿದ್ದಲ್ಲೇ ಮಲಗಿದ್ದಾನೆ. ವೈದ್ಯರ ಸಲಹೆಯಂತೆ ಪ್ರತಿದಿನ ಮಾತ್ರೆ ಔಷಧಿಗಳನ್ನು ತೆಗೆದುಕೊಳ್ಳಲೇಬೇಕಾಗಿರುತ್ತದೆ. ಇದಕ್ಕೆ ಪ್ರತಿ ತಿಂಗಳು 20 ಸಾವಿರ ತಗುಲುತ್ತದೆ.

ಆದರೆ ಇಂದಿನವರೆಗೂ ಮೇಲ್ಕಂಡವರು ಒಂದು ನಯಾಪೈಸೆಯ ಸಹಾಯವನ್ನು ಸಹ ಮಾಡಲಿಲ್ಲ. ಈ ಯುವಕನ ವೈದ್ಯಕೀಯ ವೆಚ್ಚವು ಈ ದಿನದವರೆಗೆ ಸುಮಾರು 10,00,000/- ಲಕ್ಷಕ್ಕೂ ಹೆಚ್ಚು ಸಾಲ ಮಾಡಿ ಚಿಕಿತ್ಸೆ ಪಡೆದಿರುತ್ತಾನೆ. ಮುಂದೆಯೂ ಸಹ ದಲಿತ ಯುವಕ ಆನಂದಕುಮಾರ ವೈದ್ಯಕೀಯ ಖರ್ಚಿಗೆ ಅಪಾರ ಪ್ರಮಾಣದಲ್ಲಿ ಹಣ ಬೇಕಾಗಿರುತ್ತದೆ. ಅಮಾಯಕ ದಲಿತ ಯುವಕ ಆನಂದಕುಮಾರ ಮೇಲೆ ಹೇಳಿದ ಮೋಹನ್ ದಾಸ್ ರವರ ಮಾತಿನ ಸುಳ್ಳು ಭರವಸೆಗಳನ್ನು ನಂಬಿ ಇದುವರೆಗೂ ಅವರ ವಿರುದ್ಧ ದೂರು ನೀಡಿರಲಿಲ್ಲ.

ಎಸ್ಟೇಟ್ ಮಾಲೀಕನಾದ ಮೋಹನ್ ದಾಸ್ ರವರ ಸುಳ್ಳು ಭರವಸೆಯಿಂದ ಕೃತ್ಯ ನಡೆದು ಮೂರು ವರ್ಷಗಳದರೂ ಅವರು ಪರಿಹಾರ ಕೊಡುತ್ತಾರೆಂದು ನಂಬಿಕೊಂಡು ಮಡಿಕೇರಿಎಯಲ್ಲಿರುವ ಅವರ ವಾಸದ ಮನೆಗೆ ಮೂರು ವರ್ಷಗಳ ಕಾಲ ಸಹಾಯ ಮಾಡುವಂತೆ ಇವರ ಊರಿನಿಂದ ಮಡಿಕೇರಿಗೆ ಬಾಡಿಗೆ ವಾಹನ ಮಾಡಿಕೊಂಡು ಹೋಗಿ ಪರಿಪರಿಯಾಗಿ ಸ್ವಾಮಿ, ದಲಿತ ಕೂಲಿ ಕಾರ್ಮಿಕನಾಗಿ ನಿಮ್ಮ ತೋಟಕ್ಕೆ ಬಂದು ಶಾಶ್ವತ ಅಂಗವೈಕಲ್ಯನಾಗಿರುತ್ತೇನೆ. ನಿಮ್ಮಿಂದ ನನ್ನ ಜೀವನವೇ ಹಾಳಾಗಿದೆ. ತಾವುಕೊಟ್ಟ ಭರವಸೆಯಂತೆ ಆಸ್ಪತ್ರೆಯ ಚಿಕಿತ್ಸೆಗೂ ನೀವು ಸಹಾಯ ಮಾಡಲಿಲ್ಲ. ಸಾಲ ಸೋಲ ಮಾಡಿ ನಾನು ಮತ್ತು ನನ್ನ ತಂದೆ 10 ಲಕ್ಷಗಳವರೆಗೆ ಆಸ್ಪತ್ರೆ ಖರ್ಚನ್ನು ಮಾಡಿದ್ದೇವೆ. ನನಗೆ ಪರಿಹಾರ ಕೊಡಿ ಸ್ವಾಮಿ ಎಂದು ಕೇಳಿಕೊಂಡರೂ ಮಾಲೀಕರಾದ ಮೋಹನ್ ದಾಸ್ ರವರು ನೀನು ಯಾವ ದಲಿತನಾದರೆ ಏನು. ನನ್ನನ್ನು ಏನೂ ಮಾಡಿಕೊಳ್ಳಲು ಆಗುವುದಿಲ್ಲ. ನೀನು ಯಾರು ಎಂದೇ ನನಗೆ ಗೊತ್ತಿಲ್ಲ. ನಾನೇಕೆ ನಿನಗೆ ಪರಿಹಾರ ಕೊಡಬೇಕು. ಮೊದಲು ನಮ್ಮ ಮನೆ ಬಿಟ್ಟು ತೊಲಗು. ಇಲ್ಲದಿದ್ದರೆ ನಿಮ್ಮಿಬ್ಬರನ್ನೂ ಬಂಧೂಕಿನಿಂದ ಮುಗಿಸಿಬಿಡುತ್ತೇನೆ. ಇತ್ತಲಾಗಿ ತಿರುಗಿಯೂ ನೋಡಬೇಡಿ ಎಂದು  ಕೊಲೆ ಬೆದರಿಕೆ ಹಾಕಿರುತ್ತಾರೆ.

ಸುಜಾತ ಎಸ್ಟೇಟ್ ಮಾಲೀಕರಾದ ಮೋಹನ್ ದಾಸ್ ರವರ ಮನುಷ್ಯತ್ಯವಿಲ್ಲದ ಮೃಗೀಯ ಸ್ವಭಾವದ, ರಾಕ್ಷಸ ಪ್ರವೃತ್ತಿಯನ್ನು ದಸಂಸ ವು ತೀವ್ರವಾಗಿ ಖಂಡಿಸುತ್ತದೆ. ಕೂಡಲೇ ಇವರ ವಿರುದ್ಧ ದಲಿತರ ಮೇಲಿನ ದೌರ್ಜನ್ಯ ಪ್ರಕರಣವನ್ನು ದಾಖಲಿಸಿ ಕ್ರಮ ಜರುಗಿಸಿ ಶಾಶ್ವತ ಅಂಗವೈಕಲ್ಯನಾಗಿರುವ ದಲಿತ ಕೂಲಿಕಾರ್ಮಿಕ ಆನಂದಕುಮಾರನಿಗೆ ರಕ್ಷಣೆ ಮತ್ತು ನ್ಯಾಯ ಕೊಡಿಸಿಕೊಡುವಂತೆ ಮೈಸೂರು ಜಿಲ್ಲಾ ದಸಂಸವು ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ ಗೃಹಸಚಿವರಿಗೆ, ಸಮಾಜ ಕಲ್ಯಾಣ ಸಚಿವರಿಗೆ, ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ, ಮೈಸೂರಿನ ಪೊಲೀಸ್ ಮಹಾ ನಿರ್ದೇಶಕರು ದಕ್ಷಿಣ ವಲಯ, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ(ಡಿ.ಸಿ.ಆರ್ಇ) ಮುಂತಾದ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳಿಗೂ ದಸಂಸ ವು ನೊಂದ ದಲಿತ ಯುವಕ ಆನಂದಕುಮಾರನಿಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಸಲ್ಲಿಸಿರುತ್ತೇವೆ. ಮುಂದಿನ ದಿನಗಳಲ್ಲಿ ದಲಿತ ಆನಂದಕುಮಾರನಿಗೆ ನ್ಯಾಯ ದೊರಕದೆ ಇದ್ದಲ್ಲಿ ದಸಂಸವು ಹೋರಾಟವನ್ನು ರೂಪಿಸುತ್ತದೆ ಎಂದು ಹೇಳಿದರು.

Leave a Reply