
ಹಾಸನ: ದಕ್ಷಿಣ ಭಾರತದ ಜೈನ ಧಾರ್ಮಿಕ ಕೇಂದ್ರಗಳಲ್ಲಿ ಅಗ್ರಸ್ಥಾನದಲ್ಲಿರುವ ಶ್ರವಣಬೆಳಗೊಳ ನಲ್ಲಿ ಮಿನಿ ಗೊಮ್ಮಟೇಶ್ವರನಿಗೆ ಪ್ರಥಮ ವರ್ಷದ ಮಹಾಮಸ್ತಕಾಭಿಷೇಕ ಅತ್ಯಂತ ವೈಭವ ಹಾಗೂ ಭಕ್ತಿಭಾವದ ನಡುವೆ ನೆರವೇರಿತು. ಧಾರ್ಮಿಕ ಸಂಭ್ರಮ, ಮಂಗಳ ವಾದ್ಯಗಳ ನಾದ ಮತ್ತು ಭಕ್ತರ ಜೈಕಾರಗಳ ನಡುವೆ ನಡೆದ ಈ ಕಾರ್ಯಕ್ರಮ ಕ್ಷೇತ್ರದ ವೈಭವವನ್ನು ಮತ್ತೊಮ್ಮೆ ಮೆರೆಯಿಸಿತು.
ಭಗವಾನ್ ನೇಮಿನಾಥ ತೀರ್ಥಂಕರರ ವಾರ್ಷಿಕ ಪಂಚಕಲ್ಯಾಣ ಮಹಾರಥೋತ್ಸವದ ಅಂಗವಾಗಿ ಭಂಡಾರ ಬಸದಿ ಪ್ರಾಂಗಣದಲ್ಲಿ ಪ್ರತಿಷ್ಠಾಪಿತವಾಗಿರುವ ಚಿಕ್ಕ ಬಾಹುಬಲಿಗೆ ಈ ವಿಶೇಷ ಮಸ್ತಕಾಭಿಷೇಕ ನಡೆಯಿತು. ಕ್ಷೇತ್ರದ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಭಿಷೇಕ ನೆರವೇರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ 108 ಕಲಶ, ಚತುಷ್ಕೋನ ಕಲಶ ಹಾಗೂ ಶಾಂತಿಧಾರಾ ಕಲಶಗಳನ್ನು ಪ್ರತಿಷ್ಠಾಪಿಸಿ, ಮೊದಲ ಅಭಿಷೇಕವನ್ನು ಸ್ವಾಮೀಜಿಯವರು ನೆರವೇರಿಸಿ ಚಾಲನೆ ನೀಡಿದರು. ಬಳಿಕ ಕಬ್ಬಿನ ಹಾಲು, ಸಕ್ಕರೆ, ಬೆಲ್ಲ, ಹಾಲು, ಮೊಸರು, ಅಕ್ಕಿಹಿಟ್ಟು, ಅರಿಶಿಣ ಹಾಗೂ ವಿವಿಧ ಸರ್ವೌಷಧಿಗಳಿಂದ ಅಭಿಷೇಕಗಳು ನಡೆದವು. ಜಲಾಭಿಷೇಕದ ನಂತರ ಎಳನೀರು, ಕಾಯಿತುರಿ ಹಾಗೂ ಮಾವು, ದಾಳಿಂಬೆ, ಮೋಸಂಬಿ, ಕಿತ್ತಳೆ ಹಣ್ಣುಗಳ ರಸದಿಂದ ಅಭಿಷೇಕ ಮಾಡುವ ದೃಶ್ಯ ಭಕ್ತರಲ್ಲಿ ಭಕ್ತಿ ಭಾವನೆಗಳನ್ನು ಉಕ್ಕುವಂತೆ ಮಾಡಿತು.
ಚಂದನ, ಅಷ್ಟಗಂಧ, ಬಿಳಿಗಂಧ ಮತ್ತು ಕೇಸರಿ ಅಭಿಷೇಕಗಳ ಸಮಯದಲ್ಲಿ ಭಕ್ತರು ಆ ಸುಂದರ ಕ್ಷಣಗಳನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿಯುತ್ತಿದ್ದರು. ವಿವಿಧ ರಾಜ್ಯಗಳಿಂದ ತರಲಾದ ಪುಷ್ಪಗಳಿಂದ ಪುಷ್ಪವೃಷ್ಟಿ ನಡೆಸಲಾಗಿದ್ದು, ಲೋಕಶಾಂತಿಗಾಗಿ ಶಾಂತಿಧಾರಾ ವೇಳೆ ಆಚಾರ್ಯ ಅನೇಕಾಂತ ಸಾಗರ ಮಹಾರಾಜರು ಶಾಂತಿ ಮಂತ್ರಗಳನ್ನು ಪಠಿಸಿದರು.
ಸುಮಾರು 11 ಅಡಿ ಎತ್ತರದ ಈ ಮಿನಿ ಬಾಹುಬಲಿಯನ್ನು 2025ರಲ್ಲಿ ಪ್ರತಿಷ್ಠಾಪಿಸಲಾಗಿದ್ದು, ವಯೋವೃದ್ಧರು ಬೆಟ್ಟ ಹತ್ತಲು ಸಾಧ್ಯವಾಗದ ಕಾರಣ ಅವರಿಗೆ ದರ್ಶನ ಸಿಗಲೆಂಬ ಉದ್ದೇಶದಿಂದ ಈ ಪ್ರತಿಷ್ಠಾಪನೆ ಮಾಡಲಾಗಿದೆ. ಇದೀಗ ಪ್ರತಿ ವರ್ಷ ನಡೆಯುವ ಮಿನಿ ಮಸ್ತಕಾಭಿಷೇಕ ಭಕ್ತರಿಗೆ ಹೊಸ ಅವಕಾಶ ಒದಗಿಸಿದೆ.
ಸುಮಾರು 1045 ವರ್ಷಗಳ ಇತಿಹಾಸ ಹೊಂದಿರುವ ಗೊಮ್ಮಟೇಶ್ವರ ಬಾಹುಬಲಿ ಮೂರ್ತಿ ಇರುವ ಈ ಕ್ಷೇತ್ರದಲ್ಲಿ ಸುಮಾರು 49 ಪವಿತ್ರ ಸ್ಥಳಗಳಿದ್ದು, ಸಂಪೂರ್ಣವಾಗಿ ವೀಕ್ಷಿಸಲು
ಹಲವಾರು ದಿನಗಳು ಬೇಕಾಗುತ್ತದೆ. ಇದೀಗ ದೊಡ್ಡ ಗೊಮ್ಮಟನ ಜೊತೆಗೆ ಮಿನಿ ಬಾಹುಬಲಿಯ ಸೇರ್ಪಡೆ ಶ್ರವಣಬೆಳಗೊಳದ ಧಾರ್ಮಿಕ ಮಹತ್ವವನ್ನು ಇನ್ನಷ್ಟು ಹೆಚ್ಚಿಸಿದೆ.
ಈ ಸಂದರ್ಭದಲ್ಲಿ ವಿವಿಧ ಜೈನ ಮಠಗಳ ಸ್ವಾಮೀಜಿಗಳು, ಆಚಾರ್ಯರು, ಆರ್ಯಿಕೆಯರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.





