
ಮೈಸೂರು, ಮಾ.28:- ಸಮಾಜದ ನೈತಿಕ ಬೆಳವಣಿಗೆಗೆ ಮಹನೀಯರ ಆದರ್ಶಗಳೇ ದಾರಿ ದೀಪ ಎಂದು ವಿಧಾನ ಪರಿಷತ್ ಶಾಸಕರಾದ ಸಿ.ಎನ್. ಮಂಜೇಗೌಡ ಅವರು ಹೇಳಿದರು.
ಇಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಶ್ರೀ ಅಗ್ನಿ ಬನ್ನಿರಾಯ ಜಯಂತೋತ್ಸವ ಸಮಿತಿಯ ಸಂಯುಕ್ತಾಶ್ರಯದಲ್ಲಿ, ಕರ್ನಾಟಕ ಕಲಾಮಂದಿರದ ಆವರಣದ ಕಿರು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಶ್ರೀ ಅಗ್ನಿ ಬನ್ನಿರಾಯ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.ಅಗ್ನಿ ಬನ್ನಿ ದೇವರಾಯರು ಕ್ಷತ್ರಿಯರ ಆರಾಧ್ಯದೈವ ಮಾತ್ರವಲ್ಲದೆ, ಶ್ರಮಜೀವಿಗಳ ಸಂಕೇತವೂ ಹೌದು. ಜೀವನದಲ್ಲಿ ಯಶಸ್ವಿಯಾಗಲು ಶ್ರಮ ಅತಿ ಮುಖ್ಯ ಎಂದರು.

ಒಬ್ಬ ವ್ಯಕ್ತಿ ತನ್ನ ಪರಿಶ್ರಮದ ಮೂಲಕ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಪ್ರಗತಿ ಸಾಧಿಸಬಹುದು ಎಂಬುದಕ್ಕೆ ಅಗ್ನಿ ಬನ್ನಿ ದೇವರಾಯರ ಜೀವನವೇ ಸಾಕ್ಷಿ.
ಅವರ ಆದರ್ಶಗಳನ್ನು, ನುಡಿಗಳನ್ನು ಹಾಗೂ ಅವರು ತೋರಿದ ಮಾರ್ಗವನ್ನು ನಾವು ಪಾಲಿಸದಿದ್ದರೆ ನಮ್ಮ ಜೀವನ ಅಸ್ತವ್ಯಸ್ತವಾಗುತ್ತದೆ ಎಂದು ತಿಳಿಸಿದರು.
ಮಹನೀಯರ ಆದರ್ಶ, ಅವರು ನಡೆದ ಬಂದ ಹಾದಿ, ವಚನಗಳು ಹಾಗೂ ಸಮಾಜಕ್ಕೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸುವ ಮತ್ತು ಪ್ರಸ್ತುತ ಪೀಳಿಗೆಗೆ ಅವುಗಳನ್ನು ಪರಿಚಯಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಇಂತಹ ಜಯಂತಿಗಳನ್ನು ಆಚರಿಸುತ್ತಿದೆ ಎಂದರು.
ವಿಶ್ವವಿದ್ಯಾನಿಲಯ ಸಂಜೆ ಕಾಲೇಜಿನ ಅಧ್ಯಾಪಕರಾದ ಡಾ. ಎಚ್. ಎನ್. ರಮೇಶ್ ಅವರು ಮಾತನಾಡಿ, ಅಗ್ನಿಬನ್ನಿರಾಯರು ತಿಗಳ ಜನಾಂಗಕ್ಕೆ ಸೇರಿದವರಾಗಿದ್ದು “ತಿಗಳ ಜನಾಂಗವು ದ್ರಾವಿಡ ಸಂಸ್ಕೃತಿಯನ್ನು ಅಳವಡಿಸಿಕೊಂಡು ಬಂದ ಸಮುದಾಯವಾಗಿದೆ. ‘ತಿಗಳ’ ಎಂಬುದು ಅಗ್ನಿಯ ಸಂಕೇತವಾಗಿದೆ,” ಎಂದು ವಿವರಿಸಿದರು.

“ಕರ್ನಾಟಕ ಅಗ್ನಿವಂಶ ಕ್ಷತ್ರಿಯರು” ಮತ್ತು “ಭಾರತದ ತಿಗಳ ಕ್ಷತ್ರಿಯ ವಂಶ” ಎಂಬ ಪುಸ್ತಕಗಳಲ್ಲಿ ಈ ಸಮುದಾಯಕ್ಕೆ ಸೇರಿದ ರಾಜಮನೆತನಗಳ ಇತಿಹಾಸವಿದೆ. ಶಿಲಾಯುಗದಿಂದಲೂ ಈ ಸಂಸ್ಕೃತಿಯ ಬೇರುಗಳನ್ನು ಗುರುತಿಸಬಹುದು. ಕರ್ನಾಟಕದ ಸುಮಾರು 30 ಸಾವಿರಕ್ಕೂ ಹೆಚ್ಚು ಶಾಸನಗಳಲ್ಲಿ ಕೆಲವು ಶಾಸನಗಳು ತಿಗಳ ಸಮುದಾಯದ ಕುರಿತು ಮಾಹಿತಿ ನೀಡುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಗ್ನಿಬನ್ನಿ ರಾಯ ಜಯಂತೋತ್ಸವ ಸಮಿತಿಯ ಪದಾಧಿಕಾರಿಗಳಾದ ಶಿವಣ್ಣ, ಶಾಂತೇಗೌಡ, ರಾಮೇಗೌಡ, ಹುಚ್ಚೇಗೌಡ, ವೆಂಕಟೇಶ್, ಲತಾ ರಂಗಸ್ವಾಮಿ, ವೀಣಾ ಸಿದ್ದೇಶ್, ಮಲ್ಲೇಶ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಂ. ಡಿ. ಸುದರ್ಶನ್ ಉಪಸ್ಥಿತರಿದ್ದರು.





