HOMENews

ಮದ್ಯಪ್ರಾಚ್ಯ ಯುದ್ಧದ ಹೊಡೆತ: ಮೈಸೂರಲ್ಲಿ LPG ಕೊರತೆ–ದರ ಏರಿಕೆ, ಆಟೋ ಚಾಲಕರ ಪರದಾಟ

ಮೈಸೂರು: ಜಾಗತಿಕ ರಾಜಕೀಯದ ಅಲೆಗಳು ಸ್ಥಳೀಯ ಬದುಕನ್ನೇ ಅಲುಗಾಡಿಸುತ್ತಿರುವ ಉದಾಹರಣೆಯಾಗಿ, ಮದ್ಯಪ್ರಾಚ್ಯ ಪ್ರದೇಶದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಇದೀಗ ಮೈಸೂರಿನ ಬೀದಿಗಳಲ್ಲೂ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಿದೆ. ನಗರದಲ್ಲಿ LPG (ಅನಿಲ) ಕೊರತೆ ತೀವ್ರಗೊಂಡಿದ್ದು, ದರ ಏರಿಕೆಯಿಂದ ಆಟೋ ಚಾಲಕರು ಸಂಕಷ್ಟದ ಗಾಳಿಯಲ್ಲಿ ತೂಗಾಡುತ್ತಿದ್ದಾರೆ.

ಮೊನ್ನೆಯವರೆಗೆ ಲೀಟರ್ಗೆ ₹75 ಇದ್ದ LPG ಗ್ಯಾಸ್ ದರ ಇಂದು ₹90ಕ್ಕೆ ಏರಿಕೆಯಾಗಿದೆ. ಕೇವಲ ಕೆಲವು ದಿನಗಳಲ್ಲಿ ಉಂಟಾದ ಈ ಏರಿಕೆ ಆಟೋ ಚಾಲಕರಿಗೆ ಆಘಾತ ತಂದಿದ್ದು, ದಿನನಿತ್ಯದ ಆದಾಯದ ಮೇಲೆಯೇ ದೊಡ್ಡ ಹೊರೆ ಬಿದ್ದಿದೆ.

ನಗರದ ವಿವಿಧ LPG ಬಂಕ್ಗಳ ಬಳಿ ಆಟೋಗಳು ಸಾಲು ಗಟ್ಟಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ. ಬೆಳಗ್ಗೆಯೇ ಬಂಕ್ಗಳ ಬಳಿ ತೆರಳಿದ ಚಾಲಕರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವೊಮ್ಮೆ ಗ್ಯಾಸ್ ಸಿಗದೇ ಖಾಲಿಹಸ್ತದಿಂದ ಮರಳಬೇಕಾದ ಸ್ಥಿತಿಯೂ ಉಂಟಾಗಿದೆ.

“ಒಂದು ದಿನ ಸಂಪಾದನೆಗಿಂತ ಅರ್ಧ ದಿನ ಸಾಲಿನಲ್ಲಿ ನಿಲ್ಲೋಕೆ ಹೋಗುತ್ತಿದೆ” ಎಂದು ಒಬ್ಬ ಆಟೋ ಚಾಲಕ ಬೇಸರ ವ್ಯಕ್ತಪಡಿಸಿದರು. ಮತ್ತೊಬ್ಬರು “ಗ್ಯಾಸ್ ಸಿಗೋದೇ ಇಲ್ಲ, ಸಿಕ್ಕರೂ ದರ ಜಾಸ್ತಿ… ಹೀಗೆ ಹೋದರೆ ಕುಟುಂಬ ಹೇಗೆ ನಡೆಸೋದು?” ಎಂದು ಪ್ರಶ್ನಿಸಿದರು.

ಮೈಸೂರಿನ ಸಾವಿರಾರು ಆಟೋ ಚಾಲಕರು LPG ಮೇಲೆ ಅವಲಂಬಿತರಾಗಿದ್ದಾರೆ. ಇಂಧನ ದರ ಏರಿಕೆ ನೇರವಾಗಿ ಅವರ ದಿನನಿತ್ಯದ ಆದಾಯವನ್ನು ಕಡಿಮೆ ಮಾಡುತ್ತಿದೆ. ಪ್ರಯಾಣ ದರ ಹೆಚ್ಚಿಸಲು ಸಾಧ್ಯವಾಗದ ಕಾರಣ, ತಮ್ಮ ಕೈಯಲ್ಲಿರುವ ಆದಾಯವೇ ಕುಗ್ಗುತ್ತಿದೆ ಎಂದು ಅವರು ಹೇಳುತ್ತಾರೆ.

“ನಾವು ಆಟೋವನ್ನೇ ನಂಬಿಕೊಂಡು ಬದುಕುವವರು. ದಿನದ ಖರ್ಚು, ಮನೆ ಬಾಡಿಗೆ, ಮಕ್ಕಳ ಶಿಕ್ಷಣಎಲ್ಲವೂ ಇದನ್ನು ಅವಲಂಬಿಸಿರುತ್ತದೆ. ಈಗ ಗ್ಯಾಸ್ ಇಲ್ಲ, ದರ ಜಾಸ್ತಿ. ಬದುಕೋದೇ ಕಷ್ಟ ಆಗಿದೆ” ಎಂದು ಚಾಲಕರು ಅಳಲು ತೋಡಿಕೊಂಡರು.

ಸಂಕಷ್ಟದಿಂದ ಬೇಸತ್ತ ಆಟೋ ಚಾಲಕರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸಾಮಾನ್ಯ ಜನರ ಸಂಕಷ್ಟ ಯಾರಿಗೂ ಕಾಣುತ್ತಿಲ್ಲ. ದರ ಏರಿಕೆ ನಿಯಂತ್ರಣಕ್ಕೆ ತರುವುದಕ್ಕೂ, ಗ್ಯಾಸ್ ಸರಬರಾಜು ಸುಧಾರಿಸುವುದಕ್ಕೂ ಸರ್ಕಾರಗಳು ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.

ಕೆಲವರು “ಇದೇ ಪರಿಸ್ಥಿತಿ ಮುಂದುವರಿದರೆ ಪ್ರತಿಭಟನೆ ನಡೆಸುವ ಅನಿವಾರ್ಯತೆ ಎದುರಾಗಬಹುದು” ಎಂದು ಎಚ್ಚರಿಕೆ ನೀಡಿದ್ದಾರೆ. ಸರ್ಕಾರದ ನಿರ್ಲಕ್ಷ್ಯವೇ ಇಂತಹ ಪರಿಸ್ಥಿತಿಗೆ ಕಾರಣ ಎಂದು ಆರೋಪಿಸಿರುವ ಅವರು, ತಕ್ಷಣ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಮದ್ಯಪ್ರಾಚ್ಯ ಯುದ್ಧದ ಪರಿಣಾಮ ಕೇವಲ ಇಂಧನ ದರಗಳಷ್ಟೇ ಅಲ್ಲ, ಸಾಮಾನ್ಯ ಜನರ ಜೀವನದ ಮೇಲೂ ಪರಿಣಾಮ ಬೀರುತ್ತಿದೆ. LPG ಕೊರತೆ ಮುಂದುವರಿದರೆ, ಇದು ಆಟೋ ಚಾಲಕರಷ್ಟೇ ಅಲ್ಲದೆ, ಹೋಟೆಲ್ಗಳು, ಸಣ್ಣ ಉದ್ಯಮಗಳು ಸೇರಿದಂತೆ ಹಲವಾರು ಕ್ಷೇತ್ರಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಮೈಸೂರಿನಲ್ಲಿ ಉಂಟಾದ ಈ LPG ಸಂಕಷ್ಟವು ಜನಸಾಮಾನ್ಯರ ಬದುಕಿಗೆ ಹೊಡೆತ ನೀಡಿದ್ದು, ತಕ್ಷಣ ಸರ್ಕಾರದ ಹಸ್ತಕ್ಷೇಪ ಅಗತ್ಯವಾಗಿದೆ. ದರ ನಿಯಂತ್ರಣ, ಸರಬರಾಜು ಸುಧಾರಣೆ ಮತ್ತು ಪರ್ಯಾಯ ವ್ಯವಸ್ಥೆಗಳ ಮೂಲಕ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ.

ಮೈಸೂರು ನಗರದ ಬೀದಿಗಳಲ್ಲಿ ನಿಂತಿರುವ ಆಟೋಗಳ ಸಾಲುಗಳು, ಕೇವಲ ವಾಹನಗಳ ಸಾಲಲ್ಲ… ಅದು ಬದುಕಿನ ಹೋರಾಟ ಸಾಲು.