
ಮೈಸೂರು: ಪಾಲಿಕೆ ಆಡಳಿತದ ವಿರುದ್ಧ ಜೆಡಿಎಸ್ ತೀವ್ರ ಟೀಕೆ – ಅಧಿಕಾರಿಗಳ ಬದಲಾವಣೆ ಆಗದಿರುವುದು ಪ್ರಶ್ನಾರ್ಹ
ಮೈಸೂರು, ಮಾ.16: ಮೈಸೂರು ಮಹಾನಗರ ಪಾಲಿಕೆಯಲ್ಲಿ ಹಲವು ವರ್ಷಗಳಿಂದ ಕೆಲ ಅಧಿಕಾರಿಗಳು ಅದೇ ಹುದ್ದೆಯಲ್ಲಿ ಮುಂದುವರಿಯುತ್ತಿರುವುದು ಅನುಮಾನಗಳಿಗೆ ಕಾರಣವಾಗಿದ್ದು, ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಮೈಸೂರು ನಗರಾಧ್ಯಕ್ಷ ಎಸ್.ಬಿ.ಎಂ. ಮಂಜು ಆಗ್ರಹಿಸಿದರು.
ನಗರದ ಪ್ರೆಸ್ ಕ್ಲಬ್‌ನಲ್ಲಿ ಸೋಮವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಮಹಾನಗರ ಪಾಲಿಕೆಯ ಅವಧಿ ಮುಗಿದು ಎರಡು ವರ್ಷ ಕಳೆದಿದ್ದರೂ ಆಡಳಿತ ವ್ಯವಸ್ಥೆಯಲ್ಲಿ ಯಾವುದೇ ಮಹತ್ವದ ಬದಲಾವಣೆ ಆಗಿಲ್ಲ ಎಂದು ಆರೋಪಿಸಿದರು.
“ನಾವು ಪಾಲಿಕೆ ಸದಸ್ಯರಾಗಿ ಇದ್ದ ಸಮಯದಲ್ಲಿ ಕೆಲಸ ಮಾಡುತ್ತಿದ್ದ ಹಲವರು ಇಂದಿಗೂ ಅದೇ ಹುದ್ದೆಯಲ್ಲಿ ಮುಂದುವರಿಯುತ್ತಿದ್ದಾರೆ. ಒಂದು ಹುದ್ದೆಯಲ್ಲಿ ಗರಿಷ್ಠ ಮೂರು ವರ್ಷ ಮಾತ್ರ ಕೆಲಸ ಮಾಡಬೇಕು ಎಂದು ಸರ್ಕಾರದ ಗೆಜೆಟ್ ಆದೇಶವಿದ್ದರೂ ಅದನ್ನು ಪಾಲಿಸಲಾಗುತ್ತಿಲ್ಲ. ಸಣ್ಣಪುಟ್ಟ ಅಧಿಕಾರಿಗಳನ್ನು ಮಾತ್ರ ಬದಲಾವಣೆ ಮಾಡಲಾಗಿದೆ. ಆದರೆ ಪ್ರಮುಖ ಅಧಿಕಾರಿಗಳು ಏಕೆ ಬದಲಾಗಿಲ್ಲ ಎಂಬುದು ಪ್ರಶ್ನೆಯಾಗಿದೆ” ಎಂದು ಹೇಳಿದರು.
ಅವರು ಮತ್ತಷ್ಟು ಮಾತನಾಡಿ, “ಅಧಿಕಾರಿಗಳು ಲಾಬಿ ಮೂಲಕ ಹುದ್ದೆಯಲ್ಲಿ ಉಳಿದುಕೊಂಡಿದ್ದಾರೋ ಅಥವಾ ಯಾರಾದರೂ ಒತ್ತಡದಿಂದ ಉಳಿಸಿಕೊಂಡಿದ್ದಾರೋ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ರಾಜ್ಯ ಸರ್ಕಾರದ ಆದೇಶ ಇದ್ದರೂ ಬದಲಾವಣೆ ಮಾಡದೇ ಇರುವುದರಿಂದ ಆಡಳಿತ ವ್ಯವಸ್ಥೆಯ ಮೇಲೆಯೇ ಅನುಮಾನ ಮೂಡುತ್ತಿದೆ” ಎಂದು ಆರೋಪಿಸಿದರು.

ಪಾಲಿಕೆಯಲ್ಲಿ ಕಾರ್ಯಪಾಲಕ ಅಭಿಯಂತರ (ಪರಿಸರ) ಹುದ್ದೆಯನ್ನು ಆರೋಗ್ಯಾಧಿಕಾರಿಯಾಗಿ ನೇಮಕ ಮಾಡಿರುವುದೂ ಸರಿಯಲ್ಲ ಎಂದು ಅವರು ಟೀಕಿಸಿದರು. “ಬೃಹತ್ ಮೈಸೂರು ಮಾಡಲು ಸರ್ಕಾರ ಮುಂದಾಗಿದೆ. ಆದರೆ ಮೂಲಭೂತ ಆಡಳಿತ ವ್ಯವಸ್ಥೆಯ ಮೇಲೆಯೇ ಕಾಳಜಿ ವಹಿಸಲಾಗುತ್ತಿಲ್ಲ. ಟೌನ್ ಪ್ಲಾನಿಂಗ್ ಸಮಸ್ಯೆಗಳಿಗೆ ಯಾರೂ ಸ್ಪಂದಿಸುತ್ತಿಲ್ಲ. ವಲಯ ಕಚೇರಿಗಳಲ್ಲಿ ಹಿರಿಯ ನಾಗರಿಕರು ಕುಳಿತುಕೊಳ್ಳಲು ಸಹ ಸರಿಯಾದ ವ್ಯವಸ್ಥೆ ಇಲ್ಲ. ಖಾತೆ ಪರಿವರ್ತನೆ ಸೇರಿದಂತೆ ಅನೇಕ ಕಾರ್ಯಗಳು ಸಮಯಕ್ಕೆ ಆಗುತ್ತಿಲ್ಲ” ಎಂದು ಹೇಳಿದರು.
ನಗರದಲ್ಲಿ ರಸ್ತೆ, ನೀರು ಸಂಪರ್ಕ ಹಾಗೂ ಯುಜಿಡಿ ಸಂಪರ್ಕ ಕಾಮಗಾರಿಗಳ ಹೆಸರಿನಲ್ಲಿ ರಸ್ತೆಗಳು ತೋಡಲಾಗಿದ್ದು ಸರಿಯಾಗಿ ದುರಸ್ತಿ ಮಾಡದೇ ಬಿಟ್ಟು ಹೋಗಲಾಗಿದೆ ಎಂದು ಅವರು ಆರೋಪಿಸಿದರು. “ನಾವು ಪಾಲಿಕೆ ಸದಸ್ಯರಿದ್ದಾಗ ಇಂತಹ ವಿಷಯಗಳನ್ನು ಕೌನ್ಸಿಲ್ ಸಭೆಯಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳುತ್ತಿದ್ದೆವು. ಈಗ ಆ ವ್ಯವಸ್ಥೆಯೇ ಇಲ್ಲ. ಒಂದು ಟ್ರೇಡ್ ಲೈಸೆನ್ಸ್ ಪಡೆಯಲು 80 ಸಾವಿರ ರೂ.ವರೆಗೆ ಬೇಡಿಕೆ ಇಡಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಕೇಳಿದರೆ ‘ನಾವು ದುಡ್ಡು ಕೊಟ್ಟು ಬಂದಿದ್ದೇವೆ’ ಎಂದು ಅಧಿಕಾರಿಗಳು ಹೇಳುತ್ತಾರೆ ಎನ್ನುವ ಆರೋಪಗಳೂ ಕೇಳಿಬರುತ್ತಿವೆ” ಎಂದು ಹೇಳಿದರು.
ಮಾಜಿ ಮೇಯರ್ ಎಂ.ಜೆ. ರವಿಕುಮಾರ್ ಮಾತನಾಡಿ, ಪಾಲಿಕೆ ಆಯುಕ್ತರು ನಗರದಲ್ಲಿ ಎಷ್ಟು ಬಾರಿ ಫೀಲ್ಡ್‌ಗೆ ಭೇಟಿ ನೀಡಿದ್ದಾರೆ ಎಂಬುದೇ ಪ್ರಶ್ನೆಯಾಗಿದೆ ಎಂದು ಹೇಳಿದರು. “ಐಎಎಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ನಡುವೆ ಸಮನ್ವಯತೆಯ ಕೊರತೆ ಕಾಣಿಸುತ್ತಿದೆ. ನಗರದಾದ್ಯಂತ ಅವೈಜ್ಞಾನಿಕವಾಗಿ ಸಿಗ್ನಲ್ ಲೈಟ್‌ಗಳನ್ನು ಅಳವಡಿಸಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಅಥವಾ ಮಾಜಿ ಪಾಲಿಕೆ ಸದಸ್ಯರೊಂದಿಗೆ ಯಾವುದೇ ಸಭೆ ನಡೆಸಿಲ್ಲ” ಎಂದು ಆರೋಪಿಸಿದರು.
“ಪಾಲಿಕೆ ಆಯುಕ್ತರು ಹಾಗೂ ಪೊಲೀಸ್ ಆಯುಕ್ತರು ಸೇರಿಕೊಂಡು 100 ಮೀಟರ್ ಅಂತರಕ್ಕೆ ಒಂದು ಸಿಗ್ನಲ್ ಹಾಕುವ ರೀತಿಯಲ್ಲಿ ಯೋಜನೆ ರೂಪಿಸುತ್ತಿದ್ದಾರೆ. ಸುಮಾರು 15 ಲಕ್ಷ ಜನಸಂಖ್ಯೆಯ ಮೈಸೂರಿಗೆ ಇಷ್ಟು ಪ್ರಮಾಣದ ಸಿಗ್ನಲ್ ಅವಶ್ಯಕತೆಯೇ ಎಂಬುದು ಪ್ರಶ್ನೆಯಾಗಿದೆ. ಇದರ ಪರಿಣಾಮವಾಗಿ ಶಾಲಾ ಮಕ್ಕಳು ಸಹ ಮುಂಚಿತವಾಗಿ ಮನೆ ಬಿಟ್ಟು ಹೊರಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಹೇಳಿದರು.
ನರಸಿಂಹರಾಜ ಕ್ಷೇತ್ರವನ್ನು ದುಬೈ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಯೋಜನೆಗೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ನಗರದ ಇತರ ಭಾಗಗಳನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಅವರು ಟೀಕಿಸಿದರು. “ಸ್ವಚ್ಚ ಮೈಸೂರು ಎಂಬ ಹೆಸರಿನಲ್ಲಿ ವಾರಕ್ಕೊಮ್ಮೆ ಮ್ಯಾರಥಾನ್, ನಡಿಗೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಆದರೆ ಪೌರಕಾರ್ಮಿಕರಿಗೆ ಸಮಯಕ್ಕೆ ಸಂಬಳ ನೀಡುವುದಿಲ್ಲ. ಅವರಿಗೆ ಸೂಕ್ತ ಆಹಾರ ವ್ಯವಸ್ಥೆಯೂ ಇಲ್ಲ. ದೊಡ್ಡ ದೊಡ್ಡ ಕಾರ್ಯಕ್ರಮಗಳಿಂದ ಏನು ಪ್ರಯೋಜನ?” ಎಂದು ಪ್ರಶ್ನಿಸಿದರು.
ನಗರದ ಟೌನ್ ಹಾಲ್ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಬಯಲು ರಂಗಮಂದಿರ ಕಾಮಗಾರಿಯೂ ಅರ್ಧದಲ್ಲೇ ನಿಂತಿದ್ದು ಅದನ್ನು ಪೂರ್ಣಗೊಳಿಸುವತ್ತ ಗಮನ ಹರಿಸಲಾಗಿಲ್ಲ ಎಂದು ಅವರು ಹೇಳಿದರು.
ಪ್ರೇಮ ಶಂಕರೇಗೌಡ ಮಾತನಾಡಿ, ಪಾಲಿಕೆ ಆಯುಕ್ತರು ಜನಪ್ರತಿನಿಧಿಗಳ ಫೋನ್‌ಗೂ ಸ್ಪಂದಿಸುವುದಿಲ್ಲ ಎಂದು ಆರೋಪಿಸಿದರು. “ಜನಪ್ರತಿನಿಧಿಗಳ ಕರೆಗಳನ್ನೇ ಸ್ವೀಕರಿಸದಿದ್ದರೆ ಸಾಮಾನ್ಯ ಜನರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸುತ್ತಾರೆ? ವಾರ್ಡ್‌ಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸುವ ಕೆಲಸವೂ ಆಗುತ್ತಿಲ್ಲ” ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸುಬ್ಬಯ್ಯ (ಮಾಜಿ ನಗರಪಾಲಿಕೆ ಸದಸ್ಯರು, ವಿಜಯನಗರ), ಮಾಜಿ ಮೇಯರ್ ಎಂ.ಜೆ. ರವಿಕುಮಾರ್, ಪ್ರೇಮ ಶಂಕರೇಗೌಡ, ಪ್ರಕಾಶ್, ರಂಗಸ್ವಾಮಿ ಹಾಗೂ ಶ್ರೀನಿವಾಸ್ ಉಪಸ್ಥಿತರಿದ್ದರು.





