HOMENews

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ವಿಧಾನಗಳ ಕುರಿತು ಮೂರು ದಿನಗಳ ಕಾರ್ಯಾಗಾರಕ್ಕೆ ಚಾಲನೆ

ಮೈಸೂರು, ಮಾ.11:- ಸಂಶೋಧನಾ ವಿದ್ಯಾರ್ಥಿಗಳಲ್ಲಿ ಅಧ್ಯಯನ ಕೌಶಲ್ಯ ಹಾಗೂ ವೈಜ್ಞಾನಿಕ ಸಂಶೋಧನಾ ವಿಧಾನಗಳ ಕುರಿತು ಅರಿವು ಹೆಚ್ಚಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಮೂರು ದಿನಗಳ ಕಾರ್ಯಾಗಾರಕ್ಕೆ ಬುಧವಾರ ಚಾಲನೆ ನೀಡಲಾಯಿತು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಡಾ. ಬಾಬು ಜಗಜೀವನ ರಾಮ್ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಹಾಗೂ ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಡಾ. ಬಾಬು ಜಗಜೀವನ ರಾಮ್ ಸಂಶೋಧನಾ ಸಂಸ್ಥೆ, ಬೆಂಗಳೂರು ಇವರ ಸಹಯೋಗದಲ್ಲಿ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು, ಮಾರ್ಚ್ 11 ರಿಂದ ಮಾರ್ಚ್ 13 ರವರೆಗೆ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮಕ್ಕೆ ವಿಶ್ವವಿದ್ಯಾನಿಲಯದ ಮಾನ್ಯ ಕುಲಪತಿಗಳಾದ ಪ್ರೊ. ಶರಣಪ್ಪ ವಿ. ಹಲಸೆ ಅವರು ಅಧ್ಯಕ್ಷತೆ ವಹಿಸಿ ಕಾರ್ಯಾಗಾರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಶೋಧನಾ ವಿದ್ಯಾರ್ಥಿಗಳು ಸಮಗ್ರ ಅಧ್ಯಯನ ಹಾಗೂ ನಿಖರವಾದ ಮಾಹಿತಿಗಳ ಆಧಾರದಲ್ಲಿ ಸಂಶೋಧನೆ ನಡೆಸುವುದು ಅತ್ಯಂತ ಮುಖ್ಯವಾಗಿದ್ದು, ಇಂತಹ ಕಾರ್ಯಾಗಾರಗಳು ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ಒದಗಿಸುತ್ತವೆ ಎಂದು ತಿಳಿಸಿದರು. ಸಂಶೋಧನೆ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ದಿಕ್ಕಿನಲ್ಲಿ ಸಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಕೇಂದ್ರದ ನಿರ್ದೇಶಕರಾದ ಡಾ. ಆರ್. ಶರಣಮ್ಮ ಅವರು ಪ್ರಾಸ್ತಾವಿಕ ನುಡಿ ಮತ್ತು ಸ್ವಾಗತ ಭಾಷಣ ಮಾಡಿದರು. ಸಂಶೋಧನಾ ವಿದ್ಯಾರ್ಥಿಗಳಿಗೆ ಸಂಶೋಧನಾ ವಿಧಾನಗಳ ಬಗ್ಗೆ ಸಮಗ್ರ ತಿಳುವಳಿಕೆ ನೀಡುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಭಾಗವಹಿಸಿದ್ದ ಮೈಸೂರು ವಿಶ್ವವಿದ್ಯಾನಿಲಯದ ಬಹದ್ದೂರ್ ನಿರ್ವಹಣಾ ಸಂಸ್ಥೆಯ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಆರ್. ಮಹೇಶ್ ಅವರು ಸಂಶೋಧನಾ ವಿಧಾನಗಳ ಕುರಿತು ಉಪನ್ಯಾಸ ನೀಡಿ, ಸಂಶೋಧನೆಯ ಮೂಲಭೂತ ತತ್ವಗಳು, ಡೇಟಾ ಸಂಗ್ರಹಣೆ, ವಿಶ್ಲೇಷಣೆ ಮತ್ತು ವರದಿ ರಚನೆ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು.

ಇದೇ ವೇಳೆ ವಿಶ್ವವಿದ್ಯಾನಿಲಯದ ಡೀನ್ (ಶೈಕ್ಷಣಿಕ) ಪ್ರೊ. ರಾಮಾನಾಥಂ ನಾಯ್ಡು ಅವರು ಕಾರ್ಯಾಗಾರದ ಮಹತ್ವ ಹಾಗೂ ಸಂಶೋಧನಾ ವಿಧಾನಗಳ ಕುರಿತು ಮಾತನಾಡಿ, ಇಂತಹ ಶೈಕ್ಷಣಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಅಧ್ಯಯನ ಸಾಮರ್ಥ್ಯವನ್ನು ವೃದ್ಧಿಸುವಲ್ಲಿ ಸಹಾಯಕವಾಗುತ್ತವೆ ಎಂದು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರಿಂದ “Research Methodology” ಕುರಿತ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಸಚಿವರು (ಪರೀಕ್ಷಾಂಗ) ಡಾ. ಸಿ. ಎಸ್. ಆನಂದ್ ಕುಮಾರ್, ಡೀನ್ (ಅಧ್ಯಯನ ಕೇಂದ್ರ) ಡಾ. ಎನ್. ಆರ್. ಚಂದ್ರೇಗೌಡ ಹಾಗೂ ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿಗಳಾದ ಪ್ರೊ. ನಿರಂಜನ್ ರಾಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ವಂದನಾರ್ಪಣೆಯನ್ನು ಪರಿಸರ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಜೆ. ಎಸ್. ಚಂದ್ರಶೇಖರ್ ಅವರು ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮಾಹಿತಿ ತಂತ್ರಜ್ಞಾನ ವಿಭಾಗದ ಶ್ರೀಮತಿ ಶೃಂಗಾ ಅವರು ನಿರ್ವಹಿಸಿದರು.

ಈ ಕಾರ್ಯಾಗಾರದಲ್ಲಿ ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಮಾಧ್ಯಮ ಪ್ರತಿನಿಧಿಗಳು ಭಾಗವಹಿಸಿದ್ದರು. ಮೂರು ದಿನಗಳ ಕಾರ್ಯಾಗಾರದಲ್ಲಿ ಸಂಶೋಧನಾ ವಿಧಾನಗಳ ವಿವಿಧ ಆಯಾಮಗಳ ಕುರಿತು ಪರಿಣಿತರಿಂದ ಉಪನ್ಯಾಸಗಳು ಹಾಗೂ ಚರ್ಚೆಗಳು ನಡೆಯಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.

Leave a Reply