HOMENews

ತಂಬಾಕು ಬೆಲೆ ಕುಸಿತ: ಪ್ರತಿ ಕೆಜಿಗೆ ರೂ.300 ನಿಗದಿ ಮಾಡುವಂತೆ ರೈತ ಸಂಘ ಆಗ್ರಹ

ವರದಿ:ರವಿಚಂದ್ರ ಬೂದಿತಿಟ್ಟು

ಪಿರಿಯಾಪಟ್ಟಣ, ಏಪ್ರಿಲ್ 10: ತಂಬಾಕು ಬೆಳೆಗಾರರು ಎದುರಿಸುತ್ತಿರುವ ಬೆಲೆ ಕುಸಿತದ ಸಮಸ್ಯೆಯನ್ನು ತಕ್ಷಣ ಪರಿಹರಿಸಿ, ಪ್ರತಿ ಕೆಜಿಗೆ ಕನಿಷ್ಠ ರೂ.300 ನಿಗದಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು ಅಧ್ಯಕ್ಷ ಚಪ್ಪರದಹಳ್ಳಿ ಅಜಿತ್ ಒತ್ತಾಯಿಸಿದರು.

ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಂಬಾಕು ಮಾರುಕಟ್ಟೆ ಆರಂಭವಾದ ವೇಳೆ ಉತ್ತಮ ಗುಣಮಟ್ಟದ ತಂಬಾಕಿಗೆ ಪ್ರತಿ ಕೆಜಿಗೆ ರೂ.250 ರಿಂದ 320ರವರೆಗೆ ಬೆಲೆ ನೀಡಲಾಗುತ್ತಿತ್ತು. ಆದರೆ ಕೆಲವೇ ದಿನಗಳಲ್ಲಿ ಬೆಲೆ ಏಕಾಏಕಿ ಸುಮಾರು ರೂ.100ಕ್ಕಿಂತಲೂ ಕಡಿಮೆಗೆ ಇಳಿದಿದ್ದು, ರೈತರು ಭಾರೀ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.

ತಂಬಾಕು ಮಂಡಳಿ ಹಾಗೂ ಖರೀದಿದಾರ ಕಂಪನಿಗಳು ರೈತರಲ್ಲಿ ಭಿನ್ನಾಭಿಪ್ರಾಯ ಉಂಟುಮಾಡುವ ಉದ್ದೇಶದಿಂದ ಕೆಲ ರೈತರನ್ನು ಮಧ್ಯವರ್ತಿಗಳಂತೆ ಬಳಸಿಕೊಂಡು ಅವರಿಗೆ ಮಾತ್ರ ಉತ್ತಮ ಬೆಲೆ ನೀಡುತ್ತಿರುವ ಬಗ್ಗೆ ದೂರುಗಳು ಬಂದಿವೆ ಎಂದು ಅವರು ಆರೋಪಿಸಿದರು.

ಈ ಹಿನ್ನೆಲೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಹರಳಾಪುರ ಮಂಜೇಗೌಡರ ಮಾರ್ಗದರ್ಶನದಲ್ಲಿ ಕಗ್ಗುಂಡಿ ತಂಬಾಕು ಮಾರುಕಟ್ಟೆಗೆ ಭೇಟಿ ನೀಡಿ, ಮೇಲಾಧಿಕಾರಿಗಳು ಹಾಗೂ ಕಂಪನಿ ಪ್ರತಿನಿಧಿಗಳ ಸಮ್ಮುಖದಲ್ಲಿ ಸಭೆ ನಡೆಸುವಂತೆ ಪ್ರಾದೇಶಿಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಅಧಿಕಾರಿಗಳ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಈ ಧೋರಣೆ ಮುಂದುವರೆದರೆ ರೈತರ ಸಮ್ಮುಖದಲ್ಲಿ ಹರಾಜು ಮಾರುಕಟ್ಟೆ ಬಳಿ ಉಗ್ರ ಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದ ಅವರು, ತಕ್ಷಣವೇ ನ್ಯಾಯಸಮ್ಮತ ಬೆಲೆ ನಿಗದಿ ಮಾಡಿ ರೈತರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ರಾಮನಾಥತುಂಗಾ ಶ್ರೀನಿವಾಸ್, ಪ್ರಗತಿಪರ ಸಂಘಟನೆ ಮುಖಂಡರಾದ ಚಾಮರಾಯನಕೋಟೆ ಜಗದೀಶ್, ದೊಡ್ಡಯ್ಯ ಸೇರಿದಂತೆ ಸಂಘಟನೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply