
ಚಿತ್ರದುರ್ಗ:- ಕಡಿಮೆ ಬಡ್ಡಿದರದಲ್ಲಿ ಕೋಟಿಗಟ್ಟಲೆ ಸಾಲ ನೀಡುವುದಾಗಿ ನಂಬಿಸಿ ಉದ್ಯಮಿಯಿಂದ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿದ ಪ್ರಕರಣದಲ್ಲಿ ಚಿತ್ರದುರ್ಗ ನಗರಸಭೆಯ ಮಾಜಿ ಸದಸ್ಯನನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ಪುಣೆ ಮೂಲದ ಉದ್ಯಮಿ ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಚಿತ್ರದುರ್ಗ ನಗರದ ಮಾಜಿ ನಗರಸಭೆ ಸದಸ್ಯ ಚಂದ್ರಶೇಖರ್ ಅಲಿಯಾಸ್ “ಖೋಟಾ ನೋಟು ಚಂದ್ರ” ಹಾಗೂ ಮಂಗಳೂರು ಮೂಲದ ರೋಷನ್ ಸಾಲ್ಡಾನ ಎಂದು ಗುರುತಿಸಲಾಗಿದೆ. ಆರೋಪಿಗಳ ಬ್ಯಾಂಕ್ ಖಾತೆಯಲ್ಲಿ ಇರುವ ಸುಮಾರು 50 ಲಕ್ಷ ರೂಪಾಯಿ ಹಣವನ್ನು ಪೊಲೀಸರು ಫ್ರೀಜ್ ಮಾಡಿದ್ದು, ವಂಚನೆ ಜಾಲವನ್ನು ಬಯಲಿಗೆಳೆದಿದ್ದಾರೆ.
ಪೊಲೀಸರ ತನಿಖೆ ಪ್ರಕಾರ, ಚಂದ್ರಶೇಖರ್ ಹಲವು ವರ್ಷಗಳಿಂದ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಖೋಟಾ ನೋಟು, ಹಣ ಡಬ್ಲಿಂಗ್ ಸೇರಿದಂತೆ ಹಲವು ಕೃತ್ಯಗಳಲ್ಲಿ ಆರೋಪಿಯಾಗಿ ಈಗಾಗಲೇ ಜೈಲು ಸೇರಿದ್ದರೂ ತನ್ನ ಚಟವನ್ನು ಬಿಡದೆ ಮತ್ತೆ ಇದೇ ದಂಧೆಯಲ್ಲಿ ತೊಡಗಿದ್ದಾನೆ ಎನ್ನಲಾಗಿದೆ. ಇತ್ತೀಚೆಗೆ ಹೊಸ ರೀತಿಯ ಮೋಸಕ್ಕೆ ಕೈಹಾಕಿದ್ದ ಆತ, ಕಡಿಮೆ ಬಡ್ಡಿದರದಲ್ಲಿ ದೊಡ್ಡ ಮೊತ್ತದ ಸಾಲ ನೀಡುವುದಾಗಿ ಹೇಳಿ ಉದ್ಯಮಿಗಳನ್ನು ಗುರಿಯಾಗಿಸಿಕೊಂಡಿದ್ದ.
ಈ ಕಾರ್ಯಕ್ಕೆ ಏಜೆಂಟ್‌ಗಳನ್ನು ನೇಮಿಸಿಕೊಂಡಿದ್ದ ಆರೋಪಿಗಳು, ವರ್ಷಕ್ಕೆ ಕೇವಲ 3 ಶೇಕಡಾ ಬಡ್ಡಿದರದಲ್ಲಿ 50 ಕೋಟಿ ರಿಂದ 100 ಕೋಟಿ ರೂಪಾಯಿ ತನಕ ಸಾಲ ನೀಡುವುದಾಗಿ ಭರವಸೆ ನೀಡಿ ವಿಶ್ವಾಸ ಗಳಿಸುತ್ತಿದ್ದರು. ಇದೇ ರೀತಿಯಲ್ಲಿ ಪುಣೆ ಮೂಲದ ಉದ್ಯಮಿ ಗುರುರಾಜ್ ಚರಂತಿಮಠ ಅವರನ್ನು ಸಂಪರ್ಕಿಸಿದ ರೋಷನ್ ಸಾಲ್ಡಾನ, 52 ಕೋಟಿ ರೂ. ಫೈನಾನ್ಸ್ ಒದಗಿಸುವುದಾಗಿ ಹೇಳಿ, ಪ್ರಕ್ರಿಯೆ ಹಾಗೂ ಭದ್ರತೆ ಹೆಸರಿನಲ್ಲಿ 75 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದ.
ಇದಕ್ಕೆ ಒಪ್ಪಿಕೊಂಡ ಉದ್ಯಮಿ ಮೊದಲ ಹಂತವಾಗಿ 50 ಲಕ್ಷ ರೂಪಾಯಿಯನ್ನು RTGS ಮೂಲಕ ಕಳುಹಿಸಿದ್ದರು. ಬಳಿಕ ಉಳಿದ 25 ಲಕ್ಷ ರೂಪಾಯಿ ನಗದು ನೀಡಲು ಚಿತ್ರದುರ್ಗಕ್ಕೆ ಬಂದಾಗ, ಅವರನ್ನು ಕೋಟೆ ರಸ್ತೆಯಲ್ಲಿರುವ ಚಂದ್ರಶೇಖರ್ ನಿವಾಸಕ್ಕೆ ಕರೆಸಿಕೊಳ್ಳಲಾಗಿತ್ತು. ಅಲ್ಲಿ ಆರೋಪಿಗಳು ಚಾಕು ತೋರಿಸಿ ಬೆದರಿಸಿ ಹಣ ಕಿತ್ತುಕೊಂಡು ಕಳುಹಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಘಟನೆ 2023ರ ಮೇ 26ರಂದು ನಡೆದಿದ್ದರೂ, ಪೀಡಿತ ಉದ್ಯಮಿ ಇತ್ತೀಚೆಗೆ ಅಂದರೆ 2026ರ ಏಪ್ರಿಲ್ 07ರಂದು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ಗಂಭೀರತೆಯನ್ನು ಗಮನಿಸಿದ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ರಾಜ್ಯ ಹಾಗೂ ಹೊರರಾಜ್ಯದ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದ ವಂಚನಾ ಜಾಲವನ್ನು ಪೊಲೀಸರು ಭೇದಿಸಿರುವುದಾಗಿ ತಿಳಿದುಬಂದಿದೆ. ಮುಂದಿನ ತನಿಖೆ ಮುಂದುವರಿದಿದ್ದು, ಇನ್ನೂ ಹೆಚ್ಚಿನ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ.





