
ಮೈಸೂರು, ಫೆ.26:- “ಜೀವಜಲ” ವಾಗಿರುವ ನೀರನ್ನು ಬೆಳೆಗಳಿಗೆ ಸಂದಿಗ್ದ ಹಂತಗಳಲ್ಲಿ ಮಿತವಾಗಿ ಸೂಕ್ಷ್ಮ ನೀರಾವರಿ ಪದ್ಧತಿ ಅಳವಡಿಕೆಯಿಂದ ನೀರಿನ ಸದ್ಬಳಕೆ ಮಾಡಬಹುದು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಕೃಷಿ ಅಧಿಕಾರಿ ಗೌರಮ್ಮ ಅವರು ತಿಳಿಸಿದರು.
ಹೆಚ್.ಡಿ.ಕೋಟೆ ತಾಲ್ಲೂಕಿನ ಹಂಪಾಪುರ ಹೋಬಳಿಯ ಚಿಕ್ಕಕೆರೆಯೂರು ಗ್ರಾಮದ ಚಂದ್ರಮೌಳೇಶ್ವರ ಮಹಿಳಾ ರೈತ ಉತ್ಪಾದಕರ ಸಂಸ್ಥೆಯಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ, ನಾಗನಹಳ್ಳಿ, ವತಿಯಿಂದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಇಂದು ಆಯೋಜಿಸಿದ್ದ “ಕೃಷಿ ಮತ್ತು ತೋಟಗಾರಿಕೆ ಬೆಳೆಯಲ್ಲಿ ಹನಿ / ತಂತುರು ನೀರಾವರಿ ಹಾಗೂ ರಸಾವರಿ ಪದ್ದತಿಗಳ ಅಳವಡಿಕೆ” ಕುರಿತು ಒಂದು ದಿನದ ಹೊರಾಂಗಣ ತರಬೇತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಮೈಸೂರಿನ ಪ್ರಿಮಿಯರ್ ಇರಿಗೇಷನ್ ಅಡ್ರಿಟೆಕ್ ಸಂಸ್ಥೆಯ ಸುರೇಶ್ ಕುಮಾರ್ ಸ್ವಾಮಿ ಅವರು ಮಾತನಾಡಿ ವಿವಿಧ ಬೆಳೆಗಳಿಗೆ ಪ್ರತಿದಿನಕ್ಕೆ ಬರತಕ್ಕಂತ ನೀರಿನ ಪ್ರಮಾಣ ಹಾಗೂ ಹನಿ ನೀರಾವರಿ ಘಟಕಗಳ ನಿರ್ವಹಣೆಯಲ್ಲಿ ಮಾಡುವಂತಹ ವಾಲ್ವುಗಳ ಅಳವಡಿಕೆ ಮತ್ತು ಅವುಗಳ ನಿರ್ವಹಣೆ ಬಗ್ಗೆ ಹಾಗೂ ನೀರಿನ ಪಿಹೆಚ್ ಬ್ಯಾಲೆನ್ಸ್ ಮಾಡುವುದರ ಬಗ್ಗೆ ಮತ್ತು ಸ್ವಚ್ಛತೆ ಬಗ್ಗೆ ತಿಳಿಸಿದರು.
ಚಂದ್ರಮೌಳೇಶ್ವರ ಮಹಿಳಾ ರೈತ ಉತ್ಪಾದಕರ ಸಂಸ್ಥೆಯ ಸಿಇಒ ಲಾವಣ್ಯ ಅವರು ಮಾತನಾಡಿ ನರ್ಸರಿಯಲ್ಲಿ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಘಟಕಗಳ ಉಪಯೋಗ ಮತ್ತು ಅವುಗಳ ನಿರ್ವಹಣೆ ಬಗ್ಗೆ ತಿಳಿಸಿದರು.
ಇಂಡಿಯಾ ಅಗ್ರಿಟೆಕ್ ಸಂಸ್ಥೆಯ ರತೀಶ್ ಅವರು ನ್ಯಾನೋ ಟೆಕ್ನಾಲಜಿ ಬಳಸಿ ಸಾವಯವ ರಸಗೊಬ್ಬರಗಳನ್ನು ತುಂತುರು ಹನಿ ನೀರಾವರಿಯಲ್ಲಿ ಕೊಡುವುದರ ಬಗ್ಗೆ ಮಾಹಿತಿಯನ್ನು ನೀಡಿದರು. ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರಾದ ಮುಕುಂದ ಎಸ್. ಅವರು ಕೃಷಿ ಇಲಾಖೆಯಲ್ಲಿ ದೊರೆಯುವ ಎಲ್ಲ ಯೋಜನೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ತಿಳಿಸಿದರು.
ತರಬೇತಿ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಕೆಂಡಗಣ್ಣ ಸ್ವಾಮಿಯವರು ಮತ್ತು ಚಂದ್ರಮೌಳೇಶ್ವರ ಸಂಸ್ಥೆಯ ಅಧ್ಯಕ್ಷರಾದ ವೀಣಾ, ಉಪಾಧ್ಯಕ್ಷರಾದ ಸುಧಾಮಣಿ ಅವರು ಉಪಸ್ಥಿತರಿದ್ದರು ಹಾಗೂ ರೈತರು ಮತ್ತು ರೈತ ಮಹಿಳೆಯರು ಭಾಗವಹಿಸಿದ್ದರು.





