
ಮುಖ್ಯಮಂತ್ರಿ ಭೇಟಿ ಮಾಡಿ ವಿಮಾನ ನಿಲ್ದಾಣ ಪ್ರಕ್ರಿಯೆ ತ್ವರಿತಗೊಳಿಸಲು ಅಗ್ರಹ : 551 ಮರಗಳನ್ನು ಮತ್ತು ಐತಿಹಾಸಿಕ ಘಟಕ ಸಂರಕ್ಷಿಸಲು ಒತ್ತಾಯ
ಮೈಸೂರು, ಫೆ. 25: ಸಾಂಸ್ಕೃತಿಕ ನಗರಿ ಮೈಸೂರು ಇಂದಿಗೂ ರೇಷ್ಮೆ ಸೀರೆಗಳಿಗೆ ಹೆಸರುವಾಸಿಯಾಗಿದೆ. ಟೀ. ನರಸೀಪುರದಲ್ಲಿರುವ ಕೆಎಸ್ಐಸಿ ರೇಷ್ಮೆ ಕಾರ್ಖಾನೆಯ ಘಟಕವು ನೂರಾರು ಕಾರ್ಮಿಕರಿಗೆ ಜೀವನಾಡಿಯಾಗಿದೆ. ಈ ನಿಟ್ಟಿನಲ್ಲಿ ಅದನ್ನು ಉಳಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳಿಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬುಧವಾರ ರಾತ್ರಿ ಭೇಟಿ ಮಾಡಿದ ಸಂಸದ ಯದುವೀರ್ ಒಡೆಯರ್ ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಕೆಎಸ್ಐಸಿ ಫಿಲೇಚರ್ ಕಾರ್ಖಾನೆಯ ಆವರಣದಲ್ಲಿರ ಕ್ರೀಡಾಂಗಣವನ್ನು ನಿರ್ಮಿಸಲು ಯುವಜನ ಮತ್ತು ಕ್ರೀಡಾ ಇಲಾಖೆಗೆ 6 ಎಕರೆ 8 ಗುಂಟೆ ಜಾಗವನ್ನು ಹಸ್ತಾಂತರಿಸಲಾಗಿದೆ. ಸ್ಟೇಡಿಯಂ ನಿರ್ಮಿಸಿದರೆ ಕಾರ್ಮಿಕರು ಮತ್ತು ರೈತರ ಬದುಕು ದುಸ್ತರವಾಗಲಿದೆ. ಈ ನಿಟ್ಟಿನಲ್ಲಿ ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ಕೆಎಸ್ಐಸಿ ಕಾರ್ಖಾನೆ ಆವರಣದಲ್ಲಿ ಐನೂರಕ್ಕೂ ಹೆಚ್ಚು ತೇಗ, ಶ್ರೀಗಂಧ ಮರಗಳಿವೆ. ಸ್ಟೇಡಿಯಂ ನಿರ್ಮಿಸಲು ಮುಂದಾದರೆ ಈ ಮರಗಳು ನಾಶವಾಗಲಿವೆ. ಐತಿಹಾಸಿಕ ಘಟಕವನ್ನು ಸಂರಕ್ಷಿಸಬೇಕಾದ ಅಗತ್ಯವಿದೆ ಎಂದು ಮನವರಿಕೆ ಮಾಡಿಕೊಡಲಾಗಿದೆ ಎಂದು ಸಂಸದರು ತಿಳಿಸಿದ್ದಾರೆ.
ಕರ್ನಾಟಕದ ಈ ನಿರ್ಧಾರವನ್ನು ಮರುಪರಿಶೀಲಿಸಬೇಕು ಮತ್ತು ಕ್ರೀಡಾಂಗಣಕ್ಕೆ ಪರ್ಯಾಯವಾಗಿ ಕೊರ್ಲಹಳ್ಳಿ ಅಥವಾ ಇತರೆ ಸರ್ಕಾರಿ ಜಾಗವನ್ನು ಗುರುತಿಸಿ ಬಳಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಮನವಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿಗಳು ಮನವಿ ಪತ್ರವನ್ನು ಸ್ವೀಕರಿಸಿದ್ದಾರೆ ಎಂದು ಸಂಸದ ಯದುವೀರ್ ಒಡೆಯರ್ ಮಾಹಿತಿ ನೀಡಿದ್ದಾರೆ.
ವಿಮಾನ ನಿಲ್ದಾಣ ಪ್ರಕ್ರಿಯೆಗೂ ಶೀಘ್ರ ಚಾಲನೆ
ಮೈಸೂರಿನಲ್ಲಿರುವ ವಿಮಾನ ನಿಲ್ದಾಣ ವಿಸ್ತರಣೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಹಾಗೂ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕ್ಷಿಪ್ರಗತಿಯಲ್ಲಿ ಪೂರ್ಣಗೊಳಿಸಲು ಮುಖ್ಯಮಂತ್ರಿಗಳಿಗೆ ವಿನಂತಿಸಲಾಗಿದೆ ಎಂದು ಸಂಸದ ಯದುವೀರ್ ಒಡೆಯರ್ ಸ್ಪಷ್ಟಪಡಿಸಿದ್ದಾರೆ.
ಭೂ ಸ್ವಾಧೀನ ಪ್ರಕ್ರಿಯೆ ಹಾಗೂ ಇತರೆ ಕೆಲಸಗಳು ಬಹುತೇಕ ಪೂರ್ಣಗೊಂಡಿದೆ ಎಂಬ ಭರವಸೆ ಇದೆ. ಇದರ ಬಗ್ಗೆ ಖಚಿತತೆ ದೊರೆತ ಕೂಡಲೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತೇನೆ ಎಂದು ಯದುವೀರ್ ಒಡೆಯರ್ ತಿಳಿಸಿದ್ದಾರೆ.
ಅದ್ದೂರಿ ಮೆರವಣಿಗೆಯಲ್ಲಿ ನಿಖಿಲ್ ಕುಮಾರಸ್ವಾಮಿ ಆಗಮನ: ಕೆ.ಆರ್.ನಗರದಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ





