HOMENewsPolitical

ಕೇಂದ್ರ ಬಜೆಟ್ 2026–27: ದೊಡ್ಡ ಮಾತುಗಳು, ಕಡಿಮೆ ಹಣ; ಕರ್ನಾಟಕಕ್ಕೆ ಮತ್ತೆ ಅನ್ಯಾಯ ಎಂಬ ಆರೋಪ : ಸಿ.ಎಂ. ಸಿದ್ದರಾಮಯ್ಯ

 

ಕೇಂದ್ರ ಬಜೆಟ್ 2026–27: ಘೋಷಣೆಗಳು ಜಾಸ್ತಿ, ಕಾರ್ಯಗತಗೊಳಿಸುವಿಕೆ ಶೂನ್ಯ – ಕರ್ನಾಟಕಕ್ಕೆ ಅನ್ಯಾಯ ಮುಂದುವರಿದಿದೆ

ನವದೆಹಲಿ:- ಕೇಂದ್ರ ಸರ್ಕಾರ ಮಂಡಿಸಿರುವ 2026–27ರ ಕೇಂದ್ರ ಬಜೆಟ್ ಭವ್ಯ ಘೋಷಣೆಗಳು, ದೊಡ್ಡ ಪದಗಳು ಮತ್ತು ಭಾವನಾತ್ಮಕ ನುಡಿಗಳಿಂದ ತುಂಬಿಕೊಂಡಿದ್ದರೂ, ವಾಸ್ತವಿಕ ಕಾರ್ಯಯೋಜನೆ, ಹಣಕಾಸು ಬದ್ಧತೆ ಮತ್ತು ಜವಾಬ್ದಾರಿಯ ಸ್ಪಷ್ಟತೆ ಇಲ್ಲದ ನಿರಾಶಾಜನಕ ದಾಖಲೆ ಎಂದು ಪ್ರೆಸ್ ಮೀಟ್‌ನಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.

ವಿಕಸಿತ ಭಾರತ’, ‘ಕರ್ತವ್ಯ’ ಎಂಬಂತಹ ಆಕರ್ಷಕ ಘೋಷಣೆಗಳನ್ನು ಮುಂದಿಟ್ಟುಕೊಂಡಿರುವ ಬಜೆಟ್‌ನಲ್ಲಿ, ಅವುಗಳನ್ನು ಯಾವ ರೀತಿ, ಯಾವ ಅವಧಿಯಲ್ಲಿ, ಯಾರ ಜವಾಬ್ದಾರಿಯಲ್ಲಿ ಅನುಷ್ಠಾನಗೊಳಿಸಲಾಗುತ್ತದೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಉದ್ದೇಶ ಘೋಷಿಸಲಾಗಿದೆ, ಆದರೆ ಅನುಷ್ಠಾನವನ್ನು ಮುಂದೂಡಲಾಗಿದೆ ಎಂಬ ಭಾವನೆ ಈ ಬಜೆಟ್ ಮೂಡಿಸುತ್ತದೆ ಎಂದು ನಾಯಕರು ಅಭಿಪ್ರಾಯಪಟ್ಟರು.

ಪದಗಳ ಆಟ, ನೀತಿಯ ಕೊರತೆ

ಈ ಬಜೆಟ್ ಗಂಭೀರ ಹಣಕಾಸು ನೀತಿ ದಸ್ತಾವೇಜಾಗಿರಬೇಕಾದರೆ, ಅದು ಕೇವಲ ಮೇಲ್ಮಟ್ಟದ ಪದಗಳ ಸಂಗ್ರಹವಾಗಿಬಿಟ್ಟಿದೆ. ‘Enable’, ‘Encourage’, ‘Support’ ಎಂಬಂತಹ ಪದಗಳ ಮೂಲಕ ಜನರ ಗಮನವನ್ನು ತಪ್ಪಿಸುವ ಪ್ರಯತ್ನ ನಡೆಸಲಾಗಿದೆ. ಆದರೆ ಯಾವುದೇ ಯೋಜನೆಗೆ ನಿಖರ ಹಣಕಾಸು ಹಂಚಿಕೆ, ಕಾಲಮಿತಿ ಅಥವಾ ಕಾರ್ಯಕ್ಷಮತೆಯ ಮೌಲ್ಯಮಾಪನ ಇಲ್ಲ.

ಯೂನಿಯನ್ ಬಜೆಟ್ ಜನರಿಗೆ ಭರವಸೆ ನೀಡಬೇಕು, ವಿಶ್ವಾಸ ಮೂಡಿಸಬೇಕು. ಆದರೆ ಈ ಬಜೆಟ್ ಪದಗಳ ಮೂಲಕ ನಿರೀಕ್ಷೆ ನಿರ್ಮಿಸಿ, ಕಾರ್ಯದ ಮೂಲಕ ಹೊಣೆಗಾರಿಕೆಯನ್ನು ತಪ್ಪಿಸುವ ಪ್ರಯತ್ನವಾಗಿದೆ ಎಂದು ಆರೋಪಿಸಲಾಯಿತು.

ರಾಜ್ಯಗಳ ಪಾಲಿಗೆ ಅನ್ಯಾಯ

ರಾಜ್ಯಗಳ ಹಣಕಾಸು ಹಕ್ಕುಗಳ ವಿಚಾರದಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷ್ಯ ತೋರಿದೆ. ತೆರಿಗೆ ಹಂಚಿಕೆಯನ್ನು 41 ಶೇಕಡದಲ್ಲೇ ಉಳಿಸಿರುವುದರಿಂದ, ರಾಜ್ಯಗಳ ಮೇಲೆ ಹೆಚ್ಚುತ್ತಿರುವ ಆರ್ಥಿಕ ಹೊರೆಗಳನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸಿದೆ. ಸೆಸ್ ಮತ್ತು ಸರ್ಚಾರ್ಜ್ ಮೂಲಕ ಸಂಗ್ರಹವಾಗುವ ಆದಾಯ ರಾಜ್ಯಗಳಿಗೆ ಹಂಚಿಕೆಯಾಗದೆ ಉಳಿಯುತ್ತಿರುವುದರಿಂದ, ರಾಜ್ಯಗಳ ಹಣಕಾಸು ಸ್ವಾಯತ್ತತೆ ಕುಂಠಿತವಾಗುತ್ತಿದೆ.

ಈ ಹಿನ್ನೆಲೆಯಲ್ಲಿ ರಾಜ್ಯಗಳ ಪಾಲನ್ನು ಕನಿಷ್ಠ 50 ಶೇಕಡಕ್ಕೆ ಹೆಚ್ಚಿಸಬೇಕೆಂಬ ನಿರೀಕ್ಷೆ ಇತ್ತು. ಆದರೆ ಈ ಬೇಡಿಕೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಇದು ಕೇವಲ ಅಂಕಿ-ಅಂಶಗಳ ಪ್ರಶ್ನೆಯಲ್ಲ, ಸಂವಿಧಾನಾತ್ಮಕ ಗೌರವ ಮತ್ತು ಸಹಕಾರಿ ಫೆಡರಲಿಸಂಗೆ ಧಕ್ಕೆ ಎನ್ನಲಾಗಿದೆ.

ಕರ್ನಾಟಕಕ್ಕೆ ಭಾರೀ ನಷ್ಟ

15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಕರ್ನಾಟಕದ ತೆರಿಗೆ ಪಾಲು 4.71 ಶೇಕಡದಿಂದ 4.131 ಶೇಕಡಕ್ಕೆ ಇಳಿದಿದೆ. ಇದರ ಪರಿಣಾಮವಾಗಿ ರಾಜ್ಯಕ್ಕೆ ವರ್ಷಕ್ಕೆ ಸುಮಾರು ₹10,000 ರಿಂದ ₹15,000 ಕೋಟಿ ರೂ. ಆದಾಯ ನಷ್ಟವಾಗಲಿದೆ. ಇದು ಕಲ್ಯಾಣ ಯೋಜನೆಗಳು, ಮೂಲಸೌಕರ್ಯ, ನೀರಾವರಿ ಮತ್ತು ಅಭಿವೃದ್ಧಿ ಕಾರ್ಯಗಳ ಮೇಲೆ ನೇರ ಪರಿಣಾಮ ಬೀರುತ್ತದೆ.

ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುತ್ತಿರುವ ಕರ್ನಾಟಕಕ್ಕೆ ನಿರಂತರವಾಗಿ ಹಣಕಾಸು ಶಿಕ್ಷೆ ನೀಡುತ್ತಿರುವುದು ಗಂಭೀರ ವಿಚಾರ ಎಂದು ಹೇಳಲಾಯಿತು.

ಹಣಕಾಸು ಶಿಸ್ತು ಎಂಬ ಭ್ರಮೆ

2025–26ರ ಹಣಕಾಸು ಕೊರತೆಯನ್ನು GDPನ 4.4%ಕ್ಕೆ ನಿಯಂತ್ರಿಸಲಾಗಿದೆ ಎಂಬ ಕೇಂದ್ರದ ಹೇಳಿಕೆಗೆ ಸಹ ಪ್ರಶ್ನೆ ಎತ್ತಲಾಗಿದೆ. ಇದು ಉತ್ತಮ ನಿರ್ವಹಣೆಯಿಂದ ಸಾಧ್ಯವಾಗಿಲ್ಲ, ಬದಲಾಗಿ ಹಿಂದಿನ ಬಜೆಟ್‌ನಲ್ಲಿ ಘೋಷಿಸಿದ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸದೇ ಉಳಿಸಿದ್ದರಿಂದ ಸಾಧ್ಯವಾಗಿದೆ.

ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ₹5.41 ಲಕ್ಷ ಕೋಟಿ ವೆಚ್ಚ ಅಂದಾಜಿಸಲಾಗಿದ್ದರೆ, ತಿದ್ದುಪಡಿ ಅಂದಾಜಿನಲ್ಲಿ ಕೇವಲ ₹4.20 ಲಕ್ಷ ಕೋಟಿ ಮಾತ್ರ ಖರ್ಚಾಗಿದೆ. ಇದರಿಂದ ಹಣಕಾಸು ಶಿಸ್ತು ಎನ್ನುವುದು ಕೇವಲ ವಾಗ್ದಾನಗಳನ್ನು ಮುಂದೂಡುವ ತಂತ್ರವಾಗಿಬಿಟ್ಟಿದೆ ಎಂದು ಟೀಕಿಸಲಾಯಿತು.

ಹೈಸ್ಪೀಡ್ ರೈಲು ಯೋಜನೆ ಕರ್ನಾಟಕಕ್ಕೆ ಹಾನಿ

ಹೈದರಾಬಾದ್–ಬೆಂಗಳೂರು ಮತ್ತು ಚೆನ್ನೈ–ಬೆಂಗಳೂರು ಹೈಸ್ಪೀಡ್ ರೈಲು ಮಾರ್ಗಗಳು ಕರ್ನಾಟಕಕ್ಕಿಂತ ಬೇರೆ ರಾಜ್ಯಗಳಿಗೆ ಹೆಚ್ಚು ಲಾಭ ನೀಡುತ್ತವೆ. ಇದರಿಂದ ಬೆಂಗಳೂರಿನ ಆರ್ಥಿಕ ಪರಿಸರಕ್ಕೆ ಹೊರರಾಜ್ಯಗಳ ಜನರಿಗೆ ಸುಲಭ ಪ್ರವೇಶ ಸಿಗುತ್ತದೆ, ಆದರೆ ಕರ್ನಾಟಕದ ಜನರಿಗೆ ಸಮಾನ ಅವಕಾಶಗಳು ಸೃಷ್ಟಿಯಾಗುವುದಿಲ್ಲ. ಬದಲಾಗಿ ಬೆಂಗಳೂರು–ಮುಂಬೈ ಅಥವಾ ಬೆಂಗಳೂರು–ಪುಣೆ ಹೈಸ್ಪೀಡ್ ಕಾರಿಡಾರ್ ಅಗತ್ಯವಿತ್ತು ಎಂದು ತಿಳಿಸಲಾಯಿತು.

ರೈತರಿಗೆ ನಿರಾಶೆ

ಈ ಬಜೆಟ್ ರೈತರು ಮತ್ತು ಗ್ರಾಮೀಣ ಆರ್ಥಿಕತೆಗೆ ಸಂಪೂರ್ಣ ನಿರಾಶೆ ತಂದಿದೆ. ಕಬ್ಬು, ತೊಗರಿ, ಬೇಳೆ ಹಾಗೂ ಆಹಾರ ಧಾನ್ಯ ಬೆಳೆಗಾರರ ಸಮಸ್ಯೆಗಳ ಬಗ್ಗೆ ಯಾವುದೇ ಸ್ಪಷ್ಟ ಪರಿಹಾರ ಇಲ್ಲ. ಹಿಂದಿನ ಬಜೆಟ್ ಘೋಷಣೆಗಳಿಗೂ ಜವಾಬ್ದಾರಿ ನಿಗದಿಯಾಗಿಲ್ಲ.

ಬೆಳೆ ನಷ್ಟ ಪರಿಹಾರ, ಮಾರುಕಟ್ಟೆ ಸಂಪರ್ಕ, ಬೆಲೆ ಸ್ಥಿರತೆ ಕುರಿತಾಗಿ ಯಾವುದೇ ನಿಖರ ಕ್ರಮಗಳಿಲ್ಲ ಎಂದು ಅಸಮಾಧಾನ ವ್ಯಕ್ತವಾಯಿತು.

ನೀರಾವರಿ ಮತ್ತು ಕುಡಿಯುವ ನೀರಿನ ಕಡೆಗಣನೆ

ಮೇಕೆದಾಟು, ಮೇಲ್ಭದ್ರ, ಮೇಲ್ಕೃಷ್ಣ, ಮಹಾದಾಯಿ ಯೋಜನೆಗಳಿಗೆ ಅನುಮೋದನೆ ಅಥವಾ ಹಣ ಬಿಡುಗಡೆ ಆಗಿಲ್ಲ. ಜಲಜೀವನ್ ಮಿಷನ್‌ಗೆ ₹67,000 ಕೋಟಿ ಅಂದಾಜಿಸಿದ್ದರೆ, ತಿದ್ದುಪಡಿ ಅಂದಾಜಿನಲ್ಲಿ ಕೇವಲ ₹17,000 ಕೋಟಿ ಮಾತ್ರ ವೆಚ್ಚವಾಗಿದೆ. ಇದರಲ್ಲಿ ಕರ್ನಾಟಕಕ್ಕೆ ಕೇಂದ್ರ ನೀಡಬೇಕಾದ ₹13,004 ಕೋಟಿ ಇನ್ನೂ ಬಾಕಿಯಿದೆ.

ರೆರ್ ಎರ್ಥ್ ಕಾರಿಡಾರ್‌ನಿಂದ ಕರ್ನಾಟಕ ಹೊರಗುಳಿಕೆ

ಚಾಮರಾಜನಗರ ಸೇರಿದಂತೆ ಕರ್ನಾಟಕದಲ್ಲಿ ರೇರ್ ಎರ್ಥ್ ಖನಿಜ ಸಂಪತ್ತು ಇದ್ದರೂ, ರಾಜ್ಯವನ್ನು ರೇರ್ ಎರ್ಥ್ ಕಾರಿಡಾರ್ ಯೋಜನೆಯಿಂದ ಹೊರಗಿಟ್ಟಿರುವುದು ಗಂಭೀರ ನಿರ್ಲಕ್ಷ್ಯ ಎಂದು ಆರೋಪಿಸಲಾಯಿತು. ಈ ಬಜೆಟ್ ಘೋಷಣೆಗಳ ದಾಖಲೆ ಮಾತ್ರವಾಗಿದ್ದು, ಕಾರ್ಯಕ್ಷಮತೆ, ನ್ಯಾಯ ಮತ್ತು ಸಹಕಾರಿ ಫೆಡರಲಿಸಂಗೆ ಧಕ್ಕೆ ತಂದಿದೆ. ಕರ್ನಾಟಕದ ಜನರ ಮೇಲಿನ ಈ ನಿರಂತರ ಅನ್ಯಾಯವನ್ನು ರಾಜ್ಯ ಸರ್ಕಾರ ಮತ್ತು ಜನರು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಪ್ರೆಸ್ ಮೀಟ್‌ನಲ್ಲಿ ಸ್ಪಷ್ಟ ಸಂದೇಶ ನೀಡಲಾಯಿತು.