ಮಾತೃಮಂಡಲಿ ಶಾಲೆಗೆ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ 55ರಲ್ಲಿ 55 ವಿದ್ಯಾರ್ಥಿಗಳು ಉತ್ತೀರ್ಣ: 8 ವಿದ್ಯಾರ್ಥಿಗಳಿಗೆ ಅತ್ಯುನ್ನತ ಶ್ರೇಣಿ ಭರ್ಜರಿ ಸಾಧನೆ

ಮೈಸೂರು: ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಂದು ಮೆಚ್ಚುವಂತಹ ಸಾಧನೆ ದಾಖಲಿಸಿರುವ ಮೈಸೂರಿನ ವಿ.ವಿ.ಮೊಹಲ್ಲಾದ ಮಾತೃಮಂಡಲಿ ಪ್ರೌಢಶಾಲೆ, 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಸಾಧಿಸಿ ಗಮನಸೆಳೆದಿದೆ. ಪರೀಕ್ಷೆಗೆ ಹಾಜರಾದ ಒಟ್ಟು 55 ವಿದ್ಯಾರ್ಥಿಗಳಲ್ಲಿ 55 ಜನರೂ ಉತ್ತೀರ್ಣರಾಗಿರುವುದು ಶಾಲೆಯ ಶೈಕ್ಷಣಿಕ ಶಿಸ್ತಿನ ಜೊತೆಗೆ ಶಿಕ್ಷಕರ ಸಮರ್ಪಣೆಯನ್ನು ಹೊಳೆಯುವಂತೆ ಮಾಡಿದೆ.
ಫಲಿತಾಂಶದ ವಿವರಗಳು ನೋಡಿದರೆ, 8 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, 39 ಮಂದಿ ಪ್ರಥಮ ದರ್ಜೆ, 5 ಮಂದಿ ದ್ವಿತೀಯ ದರ್ಜೆ ಹಾಗೂ 3 ಮಂದಿ ತೃತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಇದು ಶಾಲೆಯ ಸಮಗ್ರ ಸಾಧನೆಯ ಚಿತ್ರವನ್ನು ಬಿಡಿಸುತ್ತಿದೆ.
ವೈಯಕ್ತಿಕ ಸಾಧನೆಗಳಲ್ಲಿಯೂ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ . ರಂಜಿನಿ ಎಂ 598 ಅಂಕಗಳೊಂದಿಗೆ ಶಾಲೆಗೆ ಅಗ್ರಸ್ಥಾನ ತಂದುಕೊಟ್ಟಿದ್ದು, ಸಂಯಜ್ಞ ಎಸ್.ಜಿ 589 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ರಾಧ ಆರ್. 588 ಅಂಕ, ಕಾವ್ಯಶ್ರೀ ಸಿ.ಎಸ್ 569 ಅಂಕ, ಅನುಪಮ 568 ಅಂಕ ಹಾಗೂ ಅರ್ಚಕ್ ಪ್ರಜ್ಞ 567 ಅಂಕಗಳನ್ನು ಗಳಿಸಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಈ ಸಾಧನೆಯ ಹಿನ್ನೆಲೆಯಲ್ಲಿ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸದಸ್ಯರು ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ. “ಶಿಕ್ಷಕರ ಪರಿಶ್ರಮ, ವಿದ್ಯಾರ್ಥಿಗಳ ನಿಯಮಿತ ಅಧ್ಯಯನ ಹಾಗೂ ಪೋಷಕರ ಸಹಕಾರವೇ ಈ ಶತಪ್ರತಿಶತ ಫಲಿತಾಂಶದ ಮೂಲ” ಎಂದು ಆಡಳಿತ ಮಂಡಳಿ ತಿಳಿಸಿದೆ.
ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳ ಸಾಧನೆಗೆ ಸಂತೋಷ ವ್ಯಕ್ತಪಡಿಸಿ, ಮುಂದಿನ ವಿದ್ಯಾಭ್ಯಾಸದಲ್ಲಿಯೂ ಇದೇ ಉತ್ಸಾಹವನ್ನು ಮುಂದುವರಿಸಬೇಕೆಂದು ಪ್ರೋತ್ಸಾಹಿಸಿದರು. ಈ ಫಲಿತಾಂಶ ಮೈಸೂರು ನಗರದ ಶಿಕ್ಷಣ ವಲಯದಲ್ಲಿ ಮಾತೃಮಂಡಲಿ ಪ್ರೌಢಶಾಲೆಯ ಗೌರವವನ್ನು ಮತ್ತಷ್ಟು ಎತ್ತಿಹಿಡಿದಿದೆ.





