HOMEJob News

ಎಸ್ಎಸ್ಎಲ್ ಸಿ ಯಲ್ಲಿ ಮಾಧುರಿ ಸಾಧನೆ: 624 ಅಂಕಗಳಿಗೆ ಎಲ್ಲರ ಮೆಚ್ಚುಗೆ : ಮಾಧುರಿಗೆ ಸ್ವಾಮೀಜಿಗಳ ಆಶೀರ್ವಾದ

ಮೈಸೂರು: ವಿದ್ಯಾಭ್ಯಾಸದಲ್ಲಿ ಅಪೂರ್ವ ಸಾಧನೆ ಮಾಡಿರುವ ವಿದ್ಯಾರ್ಥಿನಿಗೆ ಸಮಾಜದ ವಿವಿಧ ವಲಯಗಳಿಂದ ಅಭಿನಂದನೆಗಳ ಸುರಿಮಳೆ ಹರಿದುಬಂದ ಘಟನೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಗಮನಸೆಳೆದಿದೆ. ಇಲವಾಲದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ, ಕೂರ್ಗಳ್ಳಿ ಗ್ರಾಮದ ನಿವಾಸಿ ಸರಿತಾ ಅವರ ಪುತ್ರಿ ಕು|| ಮಾಧುರಿ ಅವರು 2025-26ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 624 ಅಂಕಗಳನ್ನು ಗಳಿಸಿ ರಾಜ್ಯ ಮಟ್ಟದ ಸಾಧನೆಗೆ ಸಮಾನವಾದ ಅದ್ಭುತ ಫಲಿತಾಂಶ ದಾಖಲಿಸಿದ್ದಾರೆ.

ಈ ಅದ್ಭುತ ಸಾಧನೆ ಹಿನ್ನೆಲೆಯಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿರವರು ಮಾಧುರಿಗೆ ಆಶೀರ್ವಾದ ನೀಡಿ, ಮುಂದಿನ ವಿದ್ಯಾಭ್ಯಾಸದಲ್ಲೂ ಇದೇ ರೀತಿಯ ಪರಿಶ್ರಮ ಮತ್ತು ಏಕಾಗ್ರತೆಯನ್ನು ಮುಂದುವರಿಸಬೇಕು ಎಂದು ಶುಭಹಾರೈಸಿದರು. “ಗ್ರಾಮೀಣ ಭಾಗದ ವಿದ್ಯಾರ್ಥಿನಿಯೊಬ್ಬಳು ಇಷ್ಟು ದೊಡ್ಡ ಸಾಧನೆ ಮಾಡಿರುವುದು ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ” ಎಂದು ಸ್ವಾಮೀಜಿಯವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಜಿ.ಟಿ. ದೇವೇಗೌಡರು ವಿದ್ಯಾರ್ಥಿನಿಯನ್ನು ಅಭಿನಂದಿಸಿ, “ಶ್ರಮ ಮತ್ತು ಸಂಕಲ್ಪ ಇದ್ದರೆ ಯಾವುದೇ ಗುರಿಯನ್ನೂ ಸಾಧಿಸಬಹುದು ಎಂಬುದಕ್ಕೆ ಮಾಧುರಿ ಜೀವಂತ ಉದಾಹರಣೆ. ಸರ್ಕಾರವು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಗತ್ಯವಾದ ಸಹಕಾರ ನೀಡುತ್ತದೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಿ.ಡಿ.ಪಿ.ಐ. ಉದಯ್ ಕುಮಾರ್, ಬಿ.ಇ.ಒ. ಪ್ರಕಾಶ್ ಸೇರಿದಂತೆ ಶಿಕ್ಷಣ ಇಲಾಖೆಯ ಹಲವಾರು ಅಧಿಕಾರಿಗಳು ಹಾಗೂ ಶಾಲಾ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದು, ವಿದ್ಯಾರ್ಥಿನಿಯ ಸಾಧನೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದರು. ಶಿಕ್ಷಕರು ಮತ್ತು ಪೋಷಕರ ಮಾರ್ಗದರ್ಶನ, ನಿಯಮಿತ ಅಭ್ಯಾಸ ಮತ್ತು ಶಿಸ್ತುಬದ್ಧ ಓದಿನ ಫಲವೇ ಈ ಸಾಧನೆಗೆ ಕಾರಣವಾಗಿದೆ ಎಂದು ಅವರು ಹೇಳಿದರು.

ಮಾಧುರಿ ತಮ್ಮ ಸಾಧನೆ ಕುರಿತು ಮಾತನಾಡಿ, “ತಾಯಿ-ತಂದೆ, ಗುರುಗಳ ಪ್ರೋತ್ಸಾಹವೇ ನನಗೆ ಶಕ್ತಿ ನೀಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಗುರಿಗಳನ್ನು ಸಾಧಿಸಲು ಪ್ರಯತ್ನಿಸುತ್ತೇನೆ” ಎಂದು ತಿಳಿಸಿದ್ದಾರೆ. ಈ ಸಾಧನೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಹೊಸ ದಾರಿ ತೋರಿಸುವಂತೆ ಪರಿಣಮಿಸಿದೆ.

Leave a Reply