HOMENews

ಹುಣಸೂರು ತಾಲೋಕಿನ ಬಿಳಿಗೆರೆ ವಿದ್ಯಾರ್ಥಿನಿ ಕೀರ್ತನ ಮಿಂಚು ಸಾಧನೆ: ಎಸ್‌ಎಸ್‌ಎಲ್‌ಸಿಯಲ್ಲಿ 609 ಅಂಕ ಪಡೆದು ಉನ್ನತ ಶ್ರೇಣಿ

ವರದಿ:ರವಿಚಂದ್ರ ಬೂದಿತಿಟ್ಟು.

ಹುಣಸೂರು: ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯೊಬ್ಬಳು ತನ್ನ ಪರಿಶ್ರಮದಿಂದ ಮಿಂಚಿದ ಸ್ಫೂರ್ತಿದಾಯಕ ಸಾಧನೆ ಬೆಳಕಿಗೆ ಬಂದಿದೆ. ತಾಲೂಕಿನ ಬಿಳಿಗೆರೆ ಗ್ರಾಮದ ಅನ್ವೇಷಣಾ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಕೀರ್ತನ.ಎಂ ಅವರು 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 609 ಅಂಕಗಳು (97.44%) ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಸಾಧನೆಯೊಂದಿಗೆ ಶಾಲೆಯ ಗೌರವ ಹೆಚ್ಚಿಸಿದ ಕೀರ್ತನ ಅವರಿಗೆ ಶಾಲೆಯ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು ಹಾಗೂ ಬೋಧಕ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಕೀರ್ತನ ಅವರ ಪರಿಶ್ರಮ, ಶಿಸ್ತಿನ ಓದು ಹಾಗೂ ಗುರುಗಳ ಮಾರ್ಗದರ್ಶನವೇ ಈ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ ಎಂದು ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಕೀರ್ತನ.ಎಂ ಅವರು ಹುಣಸೂರು ತಾಲೂಕಿನ ಕಂತೆಗೌಡನ ಕೊಪ್ಪಲು ಗ್ರಾಮದ ನಿವಾಸಿಯಾಗಿದ್ದು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಮಾಗಳಿ ಮಂಜುನಾಥ್ ಎಂ.ಎ. ಮತ್ತು ಕೆ.ಪಿ. ಆಶಾ ದಂಪತಿಯ ಪುತ್ರಿಯಾಗಿದ್ದಾರೆ. ಶಿಕ್ಷಕರ ಕುಟುಂಬದಲ್ಲಿ ಬೆಳೆದ ಕೀರ್ತನ ಅವರಿಗೆ ಬಾಲ್ಯದಿಂದಲೇ ವಿದ್ಯಾಭ್ಯಾಸದ ಮೇಲೆ ಹೆಚ್ಚಿನ ಒಲವು ಇದ್ದು, ದಿನನಿತ್ಯ ಕ್ರಮಬದ್ಧವಾಗಿ ಅಧ್ಯಯನ ಮಾಡುವ ಮೂಲಕ ಈ ಸಾಧನೆಯನ್ನು ಮಾಡಿದ್ದಾರೆ.

ತಮ್ಮ ಸಾಧನೆ ಕುರಿತು ಮಾತನಾಡಿದ ಕೀರ್ತನ, “ನನ್ನ ತಾಯಿ-ತಂದೆಯರ ಪ್ರೋತ್ಸಾಹ, ಶಿಕ್ಷಕರ ಮಾರ್ಗದರ್ಶನ ಮತ್ತು ಕಠಿಣ ಪರಿಶ್ರಮವೇ ನನಗೆ ಈ ಮಟ್ಟದ ಫಲಿತಾಂಶ ತಂದುಕೊಟ್ಟಿದೆ. ಮುಂದಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುವ ಆಶಯವಿದೆ” ಎಂದು ತಿಳಿಸಿದ್ದಾರೆ.

ಸ್ಥಳೀಯರು ಹಾಗೂ ಬಂಧುಬಳಗದವರು ಕೀರ್ತನ ಅವರ ಸಾಧನೆಯನ್ನು ಶ್ಲಾಘಿಸಿ, ಮುಂದಿನ ವಿದ್ಯಾಭ್ಯಾಸದಲ್ಲೂ ಇನ್ನಷ್ಟು ಯಶಸ್ಸು ಸಾಧಿಸಲಿ ಎಂದು ಹಾರೈಸಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಇದು ಒಂದು ಪ್ರೇರಣಾದಾಯಕ ಸಾಧನೆಯಾಗಿದೆ.

Leave a Reply