
ಆದಾಯ ಮೀರಿದ ಆಸ್ತಿ ಆರೋಪ: ಮೈಸೂರಿನಲ್ಲಿ ಲೋಕಾಯುಕ್ತ ದಾಳಿ, ಅಧಿಕಾರಿಗಳ ಮನೆ–ಕಚೇರಿ ಶೋಧ
ಮೈಸೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆ ಮೈಸೂರು ಲೋಕಾಯುಕ್ತ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ನಗರ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಮೈಸೂರು ಮಹಾನಗರ ಪಾಲಿಕೆ ಹಾಗೂ ಟಿ. ನರಸೀಪುರ ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜೂನಿಯರ್ ಎಂಜಿನಿಯರ್ ಮತ್ತು ಡೆಪ್ಯೂಟಿ ಎಲೆಕ್ಟ್ರಿಕಲ್ ಎಂಜಿನಿಯರ್ ಸೇರಿ ಇಬ್ಬರು ಅಧಿಕಾರಿಗಳ ಮನೆ ಮತ್ತು ಕಚೇರಿಗಳನ್ನು ಗುರಿಯಾಗಿಸಿಕೊಂಡು ಒಟ್ಟು ಏಳು ಕಡೆಗಳಲ್ಲಿ ಶೋಧ ನಡೆಸಲಾಗಿದೆ.

ಲೋಕಾಯುಕ್ತ ಎಸ್ಪಿ ಉದ್ದೇಶ್ ಅವರ ನೇತೃತ್ವದಲ್ಲಿ ಹಲವು ಅಧಿಕಾರಿಗಳ ತಂಡ ಬೆಳಗಿನ ಜಾವದಿಂದಲೇ ಕಾರ್ಯಾಚರಣೆ ಆರಂಭಿಸಿ ದಾಖಲೆಗಳು, ನಗದು, ಆಭರಣ ಮತ್ತು ಇತರೆ ಆಸ್ತಿಗಳ ವಿವರಗಳನ್ನು ಪರಿಶೀಲಿಸಿತು. ದಾಳಿ ವೇಳೆ ಮಹತ್ವದ ದಾಖಲೆಗಳು ಮತ್ತು ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಗಳ ಮಾಹಿತಿ ಪತ್ತೆಯಾದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಿ. ನರಸೀಪುರ ಪುರಸಭೆಯಲ್ಲಿ ಜೂನಿಯರ್ ಎಂಜಿನಿಯರ್ ಜೆಇ ಚಂದ್ರಶೇಖರ್ ಮನೆಗಳಲ್ಲಿ ಶೋಧ
ಮೈಸೂರು ಮಹಾನಗರ ಪಾಲಿಕೆ ಹಾಗೂ ಟಿ. ನರಸೀಪುರ ಪುರಸಭೆಯಲ್ಲಿ ಜೂನಿಯರ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಕೆ.ಆರ್. ಚಂದ್ರಶೇಖರ್ ಅವರಿಗೆ ಸೇರಿದ ಮೈಸೂರಿನ ವಿಜಯನಗರದ ನಿವಾಸ, ಕೆಜಿ ಕೊಪ್ಪಲು ಮನೆ, ಟಿ. ನರಸೀಪುರ ಕಚೇರಿ ಸೇರಿದಂತೆ ನಾಲ್ಕು ಕಡೆಗಳಲ್ಲಿ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ವಿವಿಧ ದಾಖಲೆಗಳು ಹಾಗೂ ಆಸ್ತಿ ವಿವರಗಳನ್ನು ಪರಿಶೀಲಿಸಿದ ಅಧಿಕಾರಿಗಳು, ಅವರ ಬಳಿ ಗಣನೀಯ ಪ್ರಮಾಣದ ಸ್ಥಿರ ಹಾಗೂ ಚರ ಆಸ್ತಿ ಇರುವುದಾಗಿ ದಾಖಲಿಸಿದ್ದಾರೆ.
ಅಂದಾಜು 1.37 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಆಸ್ತಿ ಪತ್ತೆಯಾಗಿದ್ದು, 55 ಲಕ್ಷ ಮೌಲ್ಯದ ಎರಡು ನಿವೇಶನಗಳು, 82 ಲಕ್ಷ ಮೌಲ್ಯದ ಮನೆ ಹಾಗೂ ಕೃಷಿ ಭೂಮಿ ಸೇರಿವೆ ಎಂದು ತಿಳಿಸಲಾಗಿದೆ. ಇವುಗಳ ಜೊತೆಗೆ ಚಲಿಸಬಲ್ಲ ಆಸ್ತಿಗಳ ಮೌಲ್ಯ ಸುಮಾರು 2.75 ಕೋಟಿ ರೂಪಾಯಿಗಳಷ್ಟಿದೆ ಎಂದು ಅಂದಾಜಿಸಲಾಗಿದೆ.
ಶೋಧದ ವೇಳೆಯಲ್ಲಿ 62 ಲಕ್ಷಕ್ಕೂ ಹೆಚ್ಚು ನಗದು, ಸುಮಾರು 2.02 ಕೋಟಿ ರೂಪಾಯಿ ಮೌಲ್ಯದ ಆಭರಣ, 10.7 ಲಕ್ಷ ಮೌಲ್ಯದ ವಾಹನ ಸೇರಿದಂತೆ ಒಟ್ಟು ಸುಮಾರು 2.54 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳು ಪತ್ತೆಯಾಗಿವೆ. ಈ ಪತ್ತೆಯಾದ ಆಸ್ತಿಗಳ ಮೂಲದ ಬಗ್ಗೆ ವಿಚಾರಣೆ ಮುಂದುವರೆದಿದ್ದು, ಸಂಬಂಧಿತ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.
ಡೆಪ್ಯೂಟಿ ಎಲೆಕ್ಟ್ರಿಕಲ್ ಇಂಜಿನಿಯರ್ ಅಲ್ತಾಫ್ ಹುಸೇನ್ ಜಕಾರ್ತಿ ಮನೆಗಳಲ್ಲೂ ದಾಳಿ

ಇದೇ ವೇಳೆ ಡೆಪ್ಯೂಟಿ ಎಲೆಕ್ಟ್ರಿಕಲ್ ಇಂಜಿನಿಯರ್ ಅಲ್ತಾಫ್ ಹುಸೇನ್ ಜಕಾರ್ತಿ ಅವರಿಗೆ ಸೇರಿದ ಎರಡು ಮನೆಗಳು ಹಾಗೂ ಕಚೇರಿಗಳಲ್ಲಿ ಕೂಡ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸಿದರು. ಈ ವೇಳೆ ಸುಮಾರು 2.34 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಆಸ್ತಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಇದರಲ್ಲಿ ನಾಲ್ಕು ನಿವೇಶನಗಳು ಹಾಗೂ ಮನೆ ಸೇರಿದ್ದು, ಅವುಗಳ ಒಟ್ಟು ಮೌಲ್ಯ 1.03 ಕೋಟಿ ಹಾಗೂ 1.31 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಚರ ಆಸ್ತಿಗಳ ಮೌಲ್ಯ ಸುಮಾರು 1.10 ಕೋಟಿ ರೂಪಾಯಿ ಎಂದು ಅಧಿಕಾರಿಗಳು ದಾಖಲಿಸಿದ್ದಾರೆ. ಶೋಧದ ವೇಳೆ 1.45 ಲಕ್ಷ ನಗದು, 75 ಲಕ್ಷಕ್ಕೂ ಹೆಚ್ಚು ಮೌಲ್ಯದ ಆಭರಣ, 19.55 ಲಕ್ಷ ಮೌಲ್ಯದ ವಾಹನ ಹಾಗೂ ಇತರೆ ವಸ್ತುಗಳು ಸೇರಿ ಒಟ್ಟು ಸುಮಾರು 2.41 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಆಸ್ತಿಗಳ ದಾಖಲೆಗಳನ್ನು ಪರಿಶೀಲನೆಗಾಗಿ ಪಡೆದುಕೊಳ್ಳಲಾಗಿದ್ದು ತನಿಖೆ ಮುಂದುವರೆದಿದೆ.
ಮೈಸೂರಿನಲ್ಲಿ ಲೋಕಾಯುಕ್ತರಿಂದ ಸಮಗ್ರ ತನಿಖೆ ಹಣ,ವಡವೆ ಪತ್ತೆ

ಈ ದಾಳಿಯು ಪೂರ್ವನಿಗದಿತ ಮಾಹಿತಿ ಆಧರಿಸಿ ಕೈಗೊಳ್ಳಲಾಗಿದ್ದು, ಅಧಿಕಾರಿಗಳ ಆದಾಯ ಮೂಲ ಹಾಗೂ ಆಸ್ತಿ ಗಳಿಕೆಯ ನಡುವಿನ ವ್ಯತ್ಯಾಸವನ್ನು ಪರಿಶೀಲಿಸಲಾಗುತ್ತಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ. ಪತ್ತೆಯಾದ ದಾಖಲೆಗಳು ಮತ್ತು ಆಸ್ತಿಗಳ ವಿವರಗಳನ್ನು ವಿಶ್ಲೇಷಣೆ ಮಾಡಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಲೋಕಾಯುಕ್ತ ತಂಡವು ಹಲವು ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿ ಬ್ಯಾಂಕ್ ಖಾತೆ ವಿವರಗಳು, ಆಸ್ತಿ ದಾಖಲೆಗಳು ಹಾಗೂ ಇತರೆ ದಾಖಲೆಗಳನ್ನು ಪರಿಶೀಲಿಸಿತು. ಸ್ಥಳೀಯ ಜನರಲ್ಲಿ ಈ ದಾಳಿ ಗಮನ ಸೆಳೆದಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಯಿತು.
ಸರ್ಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ಕಣ್ಣು: ಮೈಸೂರಲ್ಲಿ ಭರ್ಜರಿ ದಾಳಿಲೋಕಾಯುಕ್ತ ಬಲೆ: ಜೆಇಗಳ ಮನೆಗಳಲ್ಲಿ ನಗದು, ಆಭರಣ ಪತ್ತೆ
ಕೆ.ಆರ್. ಚಂದ್ರಶೇಖರ್ ಅವರು ಆರಂಭದಲ್ಲಿ ಗುಲ್ಬರ್ಗದಲ್ಲಿ ಜೂನಿಯರ್ ಎಂಜಿನಿಯರ್ ಆಗಿ ನೇಮಕಗೊಂಡಿದ್ದರು. ನಂತರ ಪಾಂಡವಪುರ ತಾಲ್ಲೂಕಿನಲ್ಲಿ ಸೇವೆ ಸಲ್ಲಿಸಿ, ಬಳಿಕ ಮೈಸೂರು ಮಹಾನಗರ ಪಾಲಿಕೆಯಲ್ಲಿ ಜೂನಿಯರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸಿದರು. 2021ರಲ್ಲಿ ಮಹಿಳೆಯೊಬ್ಬರಿಂದ ಐದು ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿರುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದ ಆರೋಪವೂ ಇವರ ಮೇಲೆ ಇದೆ.
ಆ ಬಳಿಕ ಅವರನ್ನು ಕೆ.ಆರ್.ನಗರಕ್ಕೆ ವರ್ಗಾವಣೆ ಮಾಡಲಾಗಿದ್ದು, ನಂತರ ಮತ್ತೆ ಮೈಸೂರು ಮಹಾನಗರ ಪಾಲಿಕೆಯ ವಲಯ ಕಚೇರಿ 6 ಹಾಗೂ ಟಿ. ನರಸೀಪುರ ತಾಲ್ಲೂಕಿನಲ್ಲಿ ಜೂನಿಯರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಇವರ ಕುಟುಂಬ ಸದಸ್ಯರಾದ ಮಗ ಹಾಗೂ ಸೊಸೆಯೂ ಜೂನಿಯರ್ ಎಂಜಿನಿಯರ್ ಆಗಿದ್ದು, ಪ್ರಸ್ತುತ ನಡೆಯುತ್ತಿರುವ ಲೋಕಾಯುಕ್ತ ಶೋಧ ಕಾರ್ಯಾಚರಣೆಗೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಟ್ಟಿದ್ದಾರೆ ಎಂದು ತಿಳಿದುಬಂದಿದೆ.



