ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತ್ತು ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಇವರ ವತಿಯಿಂದ ಆಯೋಜಿಸಲಾಗಿರುವ ಲೋಕನಾಯಕ ಲಿಂಗೈಕ್ಯ ಡಾ: ಭೀಮಣ್ಣ ಖಂಡ್ರೆಯವರ

ನುಡಿ ನಮನ ಕಾರ್ಯಕ್ರಮ . ಸನ್ಮಾನ್ಯ ಮುಖ್ಯಮಂತ್ರಿಯವರ ನುಡಿ ನಮನದ ನುಡಿಗಳು…
ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಸಚಿವ ಹಾಗೂ ಅಖಿತ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಗೌರವಾಧ್ಯಕ್ಷರಾಗಿದ್ದ ಲೋಕನಾಯಕ ಡಾ: ಭೀಮಣ್ಣ ಖಂಡ್ರೆ ಯವರ ‘ನುಡಿ ನಮನ’ ಕಾರ್ಯಕ್ರಮದಲ್ಲಿ ಭಾವಪೂರ್ಣವಾಗಿ ಪಾಲ್ಗೊಂಡಿದ್ದೇನೆ.

ಸರಳ ಸಜ್ಜನಿಕೆಯ ಮೂರ್ತರೂಪವಾಗಿದ್ದ ಭೀಮಣ್ಣ ಖಂಡ್ರೆಯವರು ಸಮಾಜದ ಏಳಿಗೆಗಾಗಿ ಅವಿರತವಾಗಿ ತಮ್ಮ ಬದುಕನ್ನು ಸವೆಸಿದ ಕಾಯಕಯೋಗಿ.
‘ಪರರ ಹಿತವೇ ಪರಮ ತಪ’ ಎಂದು ನಂಬಿ ಖಂಡ್ರೆಯವರು, ಜನಸೇವೆಯ ಸಂಕಲ್ಪವನ್ನು ತಮ್ಮ ಜೀವನದ ಧ್ಯೇಯವಾಗಿಸಿದ್ದರು.
ಬಸವಾದಿ ಶರಣರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, 102 ವರ್ಷಗಳ ಕಾಲ ಸಾಮಾಜಿಕ ಚಿಂತನೆಯೊAದಿಗೆ ಸಾರ್ಥಕ ಜೀವನ ನಡೆಸಿದರು.
ಜಾತಿ ವರ್ಗ ಹಾಗೂ ಮೇಲುಕೀಳೆಂಬ ಬೇಧಭಾವಗಳನ್ನು ಕಟುವಾಗಿ ಟೀಕಿಸುತ್ತಿದ್ದ ಅವರು, 60ರ ದಶಕದಲ್ಲಿಯೇ ಅಸ್ಪೃಶ್ಯತೆಯ ವಿರುದ್ಧ ಧ್ವನಿ ಎತ್ತಿದರು.
ಸಮಾನತೆ, ನ್ಯಾಯ ಮತ್ತು ಮಾನವೀಯ ಮೌಲ್ಯಗಳ ಆಧಾರದ ಮೇಲೆ ಸಮಾಜ ನಿರ್ಮಾಣ ಮಾಡುವ ಕನಸನ್ನು ಕಂಡಿದ್ದ ಖಂಡ್ರೆಯವರು, ಬಡವ ಬಲ್ಲಿದರು ಗೌರವದ ಬದುಕನ್ನು ಜೀವಿಸಬೇಕೆಂದು ಹಂಬಲಿಸಿದ್ದರು.
ಹಿರಿಯ ಕಾಂಗ್ರೆಸ್ ಧುರೀಣರಾಗಿದ್ದ ಭೀಮಣ್ಣ ಖಂಡ್ರೆಯವರು ಮಹಾತ್ಮಾ ಗಾಂಧಿಯವರಿAದ ಪ್ರಭಾವಿತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದಲ್ಲದೇ, ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.

ಹಿರಿಯರ ತ್ಯಾಗ-ಬಲಿದಾನಗಳಿಂದ ದೊರಕಿರುವ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ದಿಸೆಯಲ್ಲಿ ಹೋರಾಟ ನಡೆಸುವ ಅನಿವಾರ್ಯ ಎಂದು ಪ್ರತಿಪಾದಿಸಿದವರು.
ಹೈದ್ರಾಬಾದ್ ಕರ್ನಾಟಕ ವಿಮೋಚನೆ ಮತ್ತು ಏಕೀಕರಣದ ಚಳುವಳಿಯಲ್ಲಿ ಭಾಗವಹಿಸಿ, ಜನಪರ ಹೋರಾಟಗಾರರೆಂದೇ ಗುರುತಿಸಿಕೊಂಡಿದ್ದರು.
ಕರ್ನಾಟಕ ಏಕೀಕರಣ ಹೋರಾಟದಲ್ಲಿ ಸಕ್ರಿಯರಾಗಿದ್ದ ಭೀಮಣ್ಣ ಖಂಡ್ರೆಯವರು, ಕನ್ನಡ ಉಳಿವಿಗಾಗಿ ನಡೆಸಿದ ಹೋರಾಟ ಕಂಡು ಡಾ.ಚನ್ನಬಸವ ಪಟ್ಟದೇವರು ‘ಲೋಕನಾಯಕ’ ಎಂದು ಬಣ್ಣಿಸಿದ್ದರು. ಕಲ್ಯಾಣ ಕರ್ನಾಟಕ ಭಾಗದ ಜನರ ಪಾಲಿಗೆ ‘ಲೋಕನಾಯಕ’ರಾಗಿರುವ ಭೀಮಣ್ಣನವರ ಸಾಧನೆಗಳು ಅನೇಕ.
ಆಡು ಮುಟ್ಟದ ಸೊಪ್ಪಿಲ್ಲ’ ಎಂಬ ನಾಣ್ಣುಡಿಯಂತೆ ಕೃಷಿ, ಶಿಕ್ಷಣ, ಸಹಕಾರ, ಕಾನೂನು, ಸಮಾಜದ ಹಿಂದುಳಿದ ವರ್ಗಗಳ ಕಲ್ಯಾಣ, ಗ್ರಾಮೀಣ ಹಾಗೂ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಹೀಗೆ ಜನಸೇವೆಗೆ ಅವಕಾಶ ದೊರಕಬಹುದಾದ ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.
ಅನ್ನದಾತನ ಸಂಕಷ್ಟಗಳಿಗೆ ಧ್ವನಿಯಾಗಿದ್ದ ಖಂಡ್ರೆಯವರು, 1972ರಲ್ಲಿ ರೈತರ ಮೇಲೆರಿಗಿದ್ದ ಬರಗಾಲದ ಪರಿಸ್ಥಿಯಲ್ಲಿ ಬೀಜ ಚಳವಳಿ ಕೈಗೊಳ್ಳುವ ಮೂಲಕ ನೆರವಾಗಿದ್ದರು. ಕಿಸಾನ್ ರ್ಯಾಲಿಗಳನ್ನು ಆಯೋಜಿಸಿ, ರೈತರ ಸಮಸ್ಯೆಗಳನ್ನು ಕೇಂದ್ರದ ಗಮನಕ್ಕೆ ತಂದಿದ್ದರು.
ಬೀದರ್ ಜಿಲ್ಲೆಯನ್ನು ಕರ್ನಾಟಕದಲ್ಲೇ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಸಫಲರಾಗಿದ್ದ ಖಂಡ್ರೆಯವರು, ನಂತರ ಜಿಲ್ಲೆಯ ಸಮಗ್ರ ಪ್ರಗತಿಗೆ ಗಣನೀಯ ಕೊಡುಗೆ ನೀಡಿದರು.
ಶಾಸಕರಾಗಿ, ಸಚಿವರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಸಭಾನಾಯಕರಾಗಿ ರಾಜ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದರು. ಅವರು ಕೈಗೊಂಡ ಕಾರ್ಯಗಳು ಇಂದು ಸಹ ಜನರ ಮನಸ್ಸಿನಲ್ಲಿ ಉಳಿದಿವೆ.
ಶಿಕ್ಷಣದ ಮಹತ್ವವನ್ನು ಅರಿತು, ಶಾಂತಿವರ್ಧಕ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಭೀಮಣ್ಣ ಖಂಡ್ರೆ ಅವರ ಕೊಡುಗೆ ಅಪಾರವಾಗಿದೆ. ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ, ಹಿಂದುಳಿದ ಬೀದರ್ ಭಾಗದ ಯುವಜನರ ಇಂಜಿನಿಯರಿAಗ್ ಶಿಕ್ಷಣ ದೊರಕಿಸುವಲ್ಲಿ ಅವರ ಶ್ರಮ ಪ್ರಶಂಸಾರ್ಹವಾಗಿದೆ.
ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಸ್ಥಾಪಿಸುವ ಮೂಲಕ ರೈತರ ಏಳಿಗೆಗೆ ಶ್ರಮಿಸಿದರು, ಇವರನ್ನು ಸಹಕಾರ ರಂಗದ ಭೀಷ್ಮ ಎಂದು ಕರೆಯಲಾಗುತ್ತದೆ.
ನನಗೆ ವೈಯಕ್ತಿಕವಾಗಿ ಡಾ: ಭೀಮಣ್ಣ ಖಂಡ್ರೆಯವರೊAದಿಗೆ ಉತ್ತಮ ಒಡನಾಡವಿತ್ತು. ಅನುಭವಿ ರಾಜಕಾರಣಿಯಾಗಿ ಅವರು ನೀಡಿದ ಮಾರ್ಗದರ್ಶನ ಮತ್ತು ಸಲಹೆಗಳು ನನ್ನಂತಹ ಹಲವು ನಾಯಕರಿಗೆ ದಾರಿ ತೋರಿದ್ದವು.
ಹಿರಿಯರಾಗಿ ಸದಾ ಯುವಕರನ್ನು ಪ್ರೋತ್ಸಾಹಿಸುವ ಗುಣ ಹೊಂದಿದ್ದ ಖಂಡ್ರೆಯವರು ಪಕ್ಷಾತೀತವಾಗಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಅಜಾತಶತ್ರುವಾಗಿದ್ದರು.
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭೆಯ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಸಮುದಾಯದ ಶಿಕ್ಷಣ, ಸಂಘಟನೆ ಮತ್ತು ಆಧ್ಯಾತ್ಮಿಕ ಮೌಲ್ಯಗಳ ವೃದ್ಧಿಗೆ ಶ್ರಮಿಸಿದರು.
ಸಂಘಟನೆಯ ಶಕ್ತಿಯನ್ನ ನಂಬಿದ್ದ ಖಂಡ್ರೆಯವರು ಸಮಾಜದಲ್ಲಿ ಐಕ್ಯತೆ ಮತ್ತು ಮಾನವೀಯ ಮೌಲ್ಯಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಭ್ರಷ್ಠಾಚಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಸರ್ಕಾರದ ಆಡಳಿತದಲ್ಲಿ ನೈತಿಕತೆ ಮತ್ತು ಹೊಣೆಗಾರಿಕೆಗೆ ಒತ್ತು ನೀಡಿದ್ದರು. ಅವರ ನಿರ್ಣಯಗಳಲ್ಲಿ ಸಾರ್ವಜನಿಕ ಹಿತಾಸಕ್ತಿಯೇ ಪ್ರಮುಖವಾಗಿರುತ್ತಿತ್ತು.
ಮಾನವೀಯತೆಯ ಉನ್ನತ ಸಂದೇಶವನ್ನು ನೀಡುವ ಶರಣರ ಸಾಹಿತ್ಯವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ. ಈ ಮಾನವೀಯ ಮೌಲ್ಯಗಳೊಂದಿಗೆ ಬಲಪಡಿಸಿ, ಸಮಾಜದ ಹಿತಕ್ಕಾಗಿ ಕೆಲಸ ಮಾಡುವ ಸಂಕಲ್ಪವನ್ನು ನಾವೆಲ್ಲರೂ ಮಾಡಬೇಕಿದೆ.
ಭೀಮಣ್ಣ ಖಂಡ್ರೆ ಅವರ ಜೀವನ ಮತ್ತು ಆದರ್ಶಗಳು ನಮಗೆ ಮತ್ತು ಯುವಪೀಳಿಗೆಗೆ ಆದರ್ಶಪ್ರಾಯವಾಗಿದೆ. ಅಚಲ ಬದ್ಧತೆ, ನ್ಯಾಯಪರತೆ, ಬಡವರ ಪರ ಕಾಳಜಿಯ ಗುಣಗಳನ್ನು ಹೊಂದಿದ್ದ ಭೀಮಣ್ಣ ಖಂಡ್ರೆಯವರು ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ.
ಇವರ ಪುತ್ರ ಈಶ್ವರ ಖಂಡ್ರೆಯವರು ಪ್ರಸ್ತುತ ಅರಣ್ಯ ಸಚಿವರಾಗಿ, ಮೊಮ್ಮಗ ಸಾಗರ್ ಖಂಡ್ರೆಯವರು ಬೀದರ್ ಲೋಕಸಭಾ ಕ್ಷೇತ್ರದ ಸಂಸದರಾಗಿ, ರಾಜ್ಯದ ಅಭಿವೃದ್ಧಿಗೆ ಅಮೂಲ್ಯ ಸೇವೆ ಸಲ್ಲಿಸುತ್ತಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ನಿಷ್ಠೆ, ಮಾನವೀಯತೆ ಹಾಗೂ ಸೇವಾಭಾವವಿದ್ದರೆ ಮಾತ್ರ ನಿಜವಾದ ನಾಯಕತ್ವ ಸಾಧ್ಯವೆಂದು ನಿರೂಪಿಸಿ, ಅದರಂತೆ ಬದುಕಿದ ಧೀಮಂತ ನಾಯಕ ಭೀಮ್ಣಣ ಖಂಡ್ರೆಯವರ ನಿಧನವು ನಾಡಿಗೆ ತುಂಬಲಾರದ ನಷ್ಟವಾಗಿದೆ.
ಡಾ: ಭೀಮಣ್ಣ ಖಂಡ್ರೆ ಅವರ ಅಗಲಿಕೆಯಿಂದ ಉಂಟಾದ ದುಃಖದಲ್ಲಿ ಅವರ ಕುಟುಂಬ ಸದಸ್ಯರಿಗೆ ಮತ್ತು ಅಪಾರ ಅಭಿಮಾನಿಗಳಿಗೆ ನನ್ನ ಸಂತಾಪವನ್ನು ಸೂಚಿಸುತ್ತಾ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
ಡಾ.ಭೀಮಣ್ಣ ಖಂಡ್ರೆಯವರ ನಿಸ್ವಾರ್ಥ ಬದುಕು, ಆದರ್ಶ, ದಕ್ಷತೆ, ಜನರ ಒಳಿತಿನೆಡೆಗೆ ಇರುವ ನಿಷ್ಠೆಯ ಗುಣಗಳು ಯುವ ನಾಯಕರಿಗೆ ದಾರಿದೀಪವಾಗಲಿ ಎಂದು ಹಾರೈಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ.



