HOMENews

ಒಗ್ಗಟ್ಟು, ಸಂಸ್ಕೃತಿ, ಸ್ವದೇಶಿ ಚಿಂತನೆ: ಹಿಂದು ಸಮಾಜೋತ್ಸವದಲ್ಲಿ ನಾಯಕರ ಕರೆ

ಹಿಂದುಗಳ ಏಕತೆ ನಮ್ಮ ಕರ್ತವ್ಯ: ಲಕ್ಷ್ಮೀಪುರಂ ನಗರದಲ್ಲಿ ಹಿಂದು ಸಮಾಜೋತ್ಸವದ ಬೃಹತ್ ಮೆರವಣಿಗೆ

ಮೈಸೂರು:- ಹಿಂದು ಸಮಾಜದ ಏಕತೆ, ಸಾಂಸ್ಕೃತಿಕ ಜಾಗೃತಿ ಹಾಗೂ ಸಾಮಾಜಿಕ ಸಾಮರಸ್ಯವನ್ನು ಬಲಪಡಿಸುವ ಉದ್ದೇಶದಿಂದ ಲಕ್ಷ್ಮೀಪುರಂ ನಗರ ಘಟಕದ ವತಿಯಿಂದ ಹಿಂದು ಸಮಾಜೋತ್ಸವವನ್ನು ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು. ಈ ಅಂಗವಾಗಿ ನಗರದ ವಿವಿಧ ಭಾಗಗಳಲ್ಲಿ ಹಿಂದು ಸಮಾಜೋತ್ಸವದ ಬೃಹತ್ ಮೆರವಣಿಗೆ ಆಯೋಜಿಸಲಾಗಿದ್ದು, ನೂರಾರು ಸಂಖ್ಯೆಯಲ್ಲಿ ಹಿಂದು ಕಾರ್ಯಕರ್ತರು, ಮಹಿಳೆಯರು ಮತ್ತು ಯುವಕರು ಭಾಗವಹಿಸಿದ್ದರು.

ಮೆರವಣಿಗೆಯು ಜಯನಗರದ ರಾಮ ಮಂದಿರದಿಂದ ಆರಂಭಗೊಂಡಿದ್ದು, ಮಾಜಿ ನಗರಪಾಲಿಕೆ ಸದಸ್ಯರಾದ ಚನಪ್ಪ ಅವರು ಶ್ರೀರಾಮ ಮಂದಿರದಲ್ಲಿ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಅಧಿಕೃತವಾಗಿ ಮೆರವಣಿಗೆಗೆ ಚಾಲನೆ ನೀಡಿದರು. ಧಾರ್ಮಿಕ ಘೋಷಣೆಗಳು, ರಾಷ್ಟ್ರಭಕ್ತಿ ಗೀತಗಳು ಹಾಗೂ ಸಾಂಸ್ಕೃತಿಕ ಸಂದೇಶಗಳೊಂದಿಗೆ ಮೆರವಣಿಗೆ ನಗರದಲ್ಲಿ ಸಾಗಿದ ದೃಶ್ಯ ಸಾರ್ವಜನಿಕರ ಗಮನ ಸೆಳೆಯಿತು.

ಸಾಮಾಜಿಕ ಸಾಮರಸ್ಯಕ್ಕೆ ಒತ್ತು: ಹಿಂದು ಸಮಾಜೋತ್ಸವದಲ್ಲಿ ಗಣ್ಯರ ಅಭಿಪ್ರಾಯ

ನಂತರ ನಡೆದ ವೇದಿಕೆ ಕಾರ್ಯಕ್ರಮವನ್ನು ಇಮ್ಮುಡಿ ಗುರುಲಿಂಗ ಸ್ವಾಮಿಜಿ, ಮಾ. ವೆಂಕಟರಾಮ್ ಜೀ, ಮಣಿವಣ್ಣನ್ (ವನವಾಸಿ ಕಲ್ಯಾಣ), ವಿಶ್ವನಾಥ್ (ಸಂಘಚಾಲಕ) ಹಾಗೂ ರಾಮಚಂದ್ರ (ಕಾರ್ಯದರ್ಶಿ) ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದು, ಹಿಂದು ಸಮಾಜದ ಒಗ್ಗಟ್ಟು ಹಾಗೂ ಮೌಲ್ಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ವನವಾಸಿ ಕಲ್ಯಾಣದ ಮಣಿವಣ್ಣನ್ ಮಾತನಾಡಿ, “ಹಿಂದು ಸಮಾಜದಲ್ಲಿ ಹಿಂದುತ್ವ ಪ್ರಮುಖವಾಗಿದ್ದು, ಅದೇ ಸಮಯದಲ್ಲಿ ಎಲ್ಲಾ ಸಮಾಜದವರೊಂದಿಗೆ ಒಗ್ಗಟ್ಟಾಗಿ ಬದುಕುವುದು ಅತ್ಯಂತ ಅಗತ್ಯ. ನಮ್ಮ ದೈನಂದಿನ ವ್ಯವಹಾರಗಳು ನಮ್ಮ ಸಮಾಜದವರೊಂದಿಗೆ ಇರಬೇಕು. ಇಂದಿನ ದಿನಗಳಲ್ಲಿ ನಾವು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಾಲಿಸಬೇಕಾದ ಅಗತ್ಯವಿದೆ. ಧರ್ಮದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ಸ್ವದೇಶೀ ಚಿಂತನೆಗೆ ಹೆಚ್ಚಿನ ಮಹತ್ವ ನೀಡಬೇಕು” ಎಂದು ಹೇಳಿದರು.

ಹಿಂದು ಸಮಾಜದ ಏಕತೆಗೆ ಕರೆ: ಲಕ್ಷ್ಮೀಪುರಂ ನಗರದಲ್ಲಿ ಹಿಂದು ಸಮಾಜೋತ್ಸವದ ಬೃಹತ್ ಮೆರವಣಿಗೆ

ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಸಂಘ ಸೂಚಿಸಿರುವ ‘ಪಂಚ ಪರಿವರ್ತನೆ’ಗಳನ್ನು ಅಳವಡಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು. ಪರಿಸರ ಸಂರಕ್ಷಣೆ, ಸಾಮಾಜಿಕ ಸಾಮರಸ್ಯ, ಸ್ವದೇಶಿ ಚಿಂತನೆ, ಕುಟುಂಬ ಪ್ರಬೋಧನ ಹಾಗೂ ನಾಗರಿಕ ಶಿಷ್ಟಾಚಾರ ಇವುಗಳನ್ನು ಜೀವನದಲ್ಲಿ ಅನುಸರಿಸುವುದರಿಂದ ಸಮಾಜ ಬಲವಾಗುತ್ತದೆ ಎಂದು ಹೇಳಿದರು.

ಇಮ್ಮುಡಿ ಗುರುಲಿಂಗ ಸ್ವಾಮಿಜಿ ಆಶೀರ್ವಚನ ನೀಡುತ್ತಾ, “ರಾಷ್ಟ್ರೀಯ ಸ್ವಯಂಸೇವಕ ಸಂಘ ಸಮಾಜಕ್ಕಾಗಿ ಮಾಡುವ ಕೆಲಸ ಶ್ರೇಷ್ಠವಾದುದು. ಖಾವಿ ಧರಿಸಿ ಮಾತ್ರವಲ್ಲ, ತಮ್ಮ ಕರ್ಮ ಮತ್ತು ಸೇವೆಯ ಮೂಲಕ ಸಮಾಜವನ್ನು ಒಗ್ಗೂಡಿಸುವ ಕೆಲಸವನ್ನು ಸಂಘ ಮಾಡುತ್ತಿದೆ. ನಾವು ಎಲ್ಲರೂ ಹಿಂದುಗಳಾಗಿ ಒಂದಾಗಿ ಸಮಾಜ ಹಿತಕ್ಕಾಗಿ ಕೆಲಸ ಮಾಡಬೇಕು” ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಟಿ.ಎಸ್. ಶ್ರೀವತ್ಸ, ನಗರ ಬಿಜೆಪಿ ಅಧ್ಯಕ್ಷ ಎಲ್. ನಾಗೇಂದ್ರ, ನಗರ ಉಪಾಧ್ಯಕ್ಷ ವಿಶ್ವಣ್ಣ, ಜೋಗಿಮಂಜು, ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಗೌಡ, ಶೈಲೇಂದ್ರ, ನಿಶಾಂತ್ ಕೃಷ್ಣನಾಯಕ್, ಅಜಯ್ ಶಾಸ್ತ್ರಿ, ದೇವರಾಜ, ಕೃಷ್ಣ ಪ್ರದೀಪ್, ಕಿಶೋರ್ ಸೇರಿದಂತೆ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

ಹಿಂದು ಸಮಾಜೋತ್ಸವದ ಮೂಲಕ ಸಮಾಜದಲ್ಲಿ ಏಕತೆ, ಸಂಸ್ಕೃತಿ ಮತ್ತು ಮೌಲ್ಯಗಳ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಯಶಸ್ವಿಯಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ

Leave a Response