ಯುವಶಕ್ತಿಗೆ ಹೊಸ ದಿಕ್ಕು: “ಭಾರತಕ್ಕಾಗಿ ಯುವಜನತೆ” ಎನ್‌ಎಸ್‌ಎಸ್ ಶಿಬಿರಕ್ಕೆ ಚಾಲನೆ : ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಆರ್. ಸತ್ಯನಾರಾಯಣ

ಭಾರತಕ್ಕಾಗಿ ಯುವಜನತೆ” ಧ್ಯೇಯದೊಂದಿಗೆ ಎನ್‌ಎಸ್‌ಎಸ್ ಶಿಬಿರಕ್ಕೆ ಚಾಲನೆ
ಶ್ರೀರಂಗಪಟ್ಟಣ, ಮಾರ್ಚ್ 27:- ತಾಲೂಕಿನ ಚಿಕ್ಕಅಂಕನಹಳ್ಳಿ ಗ್ರಾಮದ ಉತ್ತೂರಮ್ಮ ದೇವಾಲಯದ ಆವರಣದಲ್ಲಿ ಮೈಸೂರಿನ ಶಾರದಾ ವಿಲಾಸ ಕಾಲೇಜು ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸೇವಾ ಯೋಜನೆ (NSS) ಶಿಬಿರಕ್ಕೆ ಭರ್ಜರಿ ಚಾಲನೆ ದೊರೆಯಿತು. “ಭಾರತಕ್ಕಾಗಿ ಯುವಜನತೆ” ಎಂಬ ಘೋಷವಾಕ್ಯದೊಂದಿಗೆ ಬುಧವಾರದಿಂದ ಆರಂಭವಾದ ಈ ಶಿಬಿರವನ್ನು ವಿಜಯವಾಣಿ ಮೈಸೂರು ಸ್ಥಾನಿಕ ಸಂಪಾದಕರಾದ ಎಂ.ಆರ್. ಸತ್ಯನಾರಾಯಣ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕ ವ್ಯವಸ್ಥೆಯಾಗಿ ಹೊರಹೊಮ್ಮುತ್ತಿರುವ ಹಿನ್ನೆಲೆಯಲ್ಲಿ ಯುವಶಕ್ತಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. ದೇಶದ ಅಭಿವೃದ್ಧಿ, ಭದ್ರತೆ ಮತ್ತು ಸಮೃದ್ಧಿಗಾಗಿ ಯುವಕರು ಸೃಜನಶೀಲತೆ, ಶಿಸ್ತು ಮತ್ತು ರಾಷ್ಟ್ರಭಕ್ತಿ ಮನೋಭಾವವನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂದು ಅವರು ಒತ್ತಿ ಹೇಳಿದರು.
ಈಗಿನ ಯುವಸಮೂಹ ಸಾಮಾಜಿಕ ಜಾಲತಾಣಗಳ ಪ್ರಭಾವಕ್ಕೆ ಒಳಗಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಆನ್‌ಲೈನ್ ಲೋಕದಲ್ಲಿ ಸಕಾರಾತ್ಮಕ ಹಾಗೂ ನಕಾರಾತ್ಮಕ ವಿಷಯಗಳ ಮಿಶ್ರಣವಿದ್ದು, ಯುವಕರು ಸರಿಯಾದ ದಾರಿಯನ್ನು ಆಯ್ಕೆ ಮಾಡಿಕೊಳ್ಳುವುದು ಬಹುಮುಖ್ಯ ಎಂದು ಸಲಹೆ ನೀಡಿದರು. ಆರೋಗ್ಯಕರ ಚಿಂತನೆಗಳು, ಸಮಾಜಮುಖಿ ಚಟುವಟಿಕೆಗಳು ಹಾಗೂ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾದ ವಿಷಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಯುವಕರು ತಮ್ಮ ಭವಿಷ್ಯವನ್ನು ನಿರ್ಮಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ ಶಾರದಾ ವಿಲಾಸ ಸಂಸ್ಥೆಯ ಗೌರವ ಕಾರ್ಯದರ್ಶಿ ಆರ್. ದಿನೇಶ್ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯಂತಹ ಶಿಬಿರಗಳು ವಿದ್ಯಾರ್ಥಿ ಜೀವನದಲ್ಲಿ ಅಪಾರ ಅನುಭವಗಳನ್ನು ನೀಡುತ್ತವೆ ಎಂದು ಹೇಳಿದರು. ಇವು ಕೇವಲ ಶಿಬಿರಗಳಲ್ಲ, ವ್ಯಕ್ತಿತ್ವ ರೂಪಿಸುವ ಪಾಠಶಾಲೆಗಳೆಂದು ಅವರು ವಿವರಿಸಿದರು. ಸಮಾಜದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು, ಅವುಗಳಿಗೆ ಪರಿಹಾರ ಕಂಡುಕೊಳ್ಳುವುದು ಹಾಗೂ ಸೇವಾ ಮನೋಭಾವ ಬೆಳೆಸಿಕೊಳ್ಳುವುದು ಇಂತಹ ಶಿಬಿರಗಳ ಪ್ರಮುಖ ಉದ್ದೇಶಗಳಾಗಿವೆ ಎಂದರು.
ಈಗಿನ ಯುವಕರಲ್ಲಿ ಕೆಲವು ದುಶ್ಚಟಗಳು ಮತ್ತು ವ್ಯಸನಗಳ ಪ್ರಭಾವ ಹೆಚ್ಚುತ್ತಿರುವುದು ದುಃಖಕರ ಸಂಗತಿ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಇಂತಹ ಅಡ್ಡಪಥಗಳಿಗೆ ತುತ್ತಾಗದೆ, ಸಮಾಜಕ್ಕೆ ಆದರ್ಶವಾಗುವ ದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಜೊತೆಗೆ, ಈಗಾಗಲೇ ವ್ಯಸನಗಳಿಗೆ ಒಳಗಾದವರನ್ನು ಕೂಡ ಸರಿಯಾದ ದಾರಿಗೆ ತರುವ ಜವಾಬ್ದಾರಿ ಯುವಕರ ಮೇಲಿದೆ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲೆ ಹಾಗೂ ಎನ್‌ಎಸ್‌ಎಸ್ ನಿರ್ದೇಶಕಿ ಡಾ. ಎಂ. ದೇವಿಕಾ ಮಾತನಾಡಿ, ಎನ್‌ಎಸ್‌ಎಸ್ ಶಿಬಿರಗಳು ವಿದ್ಯಾರ್ಥಿಗಳಿಗೆ ಸಮಾಜದ ನಿಜವಾದ ಮುಖವನ್ನು ಪರಿಚಯಿಸುತ್ತವೆ ಎಂದರು. ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಇಂತಹ ಶಿಬಿರಗಳ ಮೂಲಕ ವಿದ್ಯಾರ್ಥಿಗಳು ಸ್ವಚ್ಚತೆ, ಆರೋಗ್ಯ ಮತ್ತು ಶಿಕ್ಷಣದ ಮಹತ್ವವನ್ನು ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. “ನಾವು ನಮಗಾಗಿ ಅಲ್ಲ, ನಿಮಗೋಸ್ಕರ” ಎಂಬ ಸೇವಾ ಧ್ಯೇಯವನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳು ಸಮಾಜದ ಬೆಳವಣಿಗೆಗೆ ಕೈಜೋಡಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಅವರು ಮುಂದುವರೆದು, ಮಹಾತ್ಮ ಗಾಂಧೀಜಿಯವರ ಕನಸಾದ ಸ್ವಚ್ಚ ಮತ್ತು ಸ್ವಾವಲಂಬಿ ಗ್ರಾಮಗಳ ನಿರ್ಮಾಣಕ್ಕೆ ಎನ್‌ಎಸ್‌ಎಸ್ ಶಿಬಿರಗಳು ಮಹತ್ವದ ಪಾತ್ರವಹಿಸುತ್ತಿವೆ ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ಕೇವಲ ಪಾಠ ಪುಸ್ತಕಗಳಿಗೆ ಸೀಮಿತವಾಗದೆ, ಸಮಾಜದೊಂದಿಗೆ ಬೆರೆತು ನಿಜ ಜೀವನದ ಪಾಠಗಳನ್ನು ಕಲಿಯಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಂತ್ಯದಲ್ಲಿ, ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ತಮ್ಮ ಕರ್ತವ್ಯ ಮತ್ತು ಬದ್ದತೆಗಳನ್ನು ನಿಷ್ಠೆಯಿಂದ ಪಾಲಿಸುವುದಾಗಿ ಪ್ರತಿಜ್ಞೆ ಕೈಗೊಂಡರು.
ಈ ಸಂದರ್ಭದಲ್ಲಿ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಮಲ್ಲಿಕಾರ್ಜುನ್, ಕನ್ನಡ ವಿಭಾಗದ ಪ್ರಾಧ್ಯಾಪಕ ಹಾಗೂ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಮಹೇಂದ್ರ, ಸಹಾಯಕ ಅಧಿಕಾರಿ ಎಂ.ಎ. ಸೌಮ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಗ್ರಾಮೀಣ ವಾತಾವರಣದಲ್ಲಿ ನಡೆಯುತ್ತಿರುವ ಈ ಶಿಬಿರವು ಯುವಕರಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದ್ದು, “ಯುವಶಕ್ತಿ ದೇಶದ ಶಕ್ತಿ” ಎಂಬ ಮಾತನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.





