
ಮನದ ಮಾತು: by Pooja raghunandan
ಹಾಯ್ ಫ್ರೆಂಡ್ಸ್, ಹೇಗಿದ್ದೀರಾ… ಇವತ್ತು ನಾವು ಪ್ರತಿಯೊಬ್ಬ ಹೆಣ್ಣಿನ ಮನಸ್ಸಿನ ಆಳದಲ್ಲಿರೋ ಒಂದು ಸೆನ್ಸಿಟಿವ್ ವಿಷಯದ ಬಗ್ಗೆ ಮಾತಾಡೋಣ. ಅದೇ “ತವರು ಮತ್ತು ಸಂಸಾರ” ಅನ್ನೋ ಎರಡು ಎಮೋಷನಲ್ ಬ್ಯಾಲೆನ್ಸಿಂಗ್ ಆಕ್ಟ್.
ಯಾವ ಮನೆಯ ಮಾಡಿನ ಕೆಳಗೆ, ಅಪ್ಪ-ಅಮ್ಮನ ನೆರಳಿನಲ್ಲಿ ನಾವು ನಿಶ್ಚಿಂತೆಯಾಗಿ ಬೆಳೆದೆವೋ, ಅದೇ ಮನೆಯಿಂದ ಒಂದು ದಿನ ಧಾರೆಯೆರೆದು ಕೊಟ್ಟಾಗ ನಮ್ಮ ಬದುಕಿನ ದಿಕ್ಕೇ ಬದಲಾಗಿಬಿಡುತ್ತದೆ. ಮದುವೆಯಾಗಿ ಹೊಸ ಮನೆ, ಹೊಸ ಜವಾಬ್ದಾರಿ, ಗಂಡ-ಮಕ್ಕಳ ಲೋಕದಲ್ಲಿ ನಾವು ಮಿಂದೆದ್ದಾಗಲೂ, ಯಾವುದೋ ಒಂದು ಕ್ಷಣದಲ್ಲಿ ನಮ್ಮನ್ನು ಅತಿಯಾಗಿ ಕಾಡುವುದು ನಮ್ಮ ತವರು ಮತ್ತು ಅಲ್ಲಿ ಮೌನವಾಗಿ ಕೂತ ವೃದ್ಧ ಪೋಷಕರು.

ಇದು ಕೇವಲ ಒಬ್ಬಿಬ್ಬರ ಕಥೆಯಲ್ಲ, ಇಂದಿನ ಅದೆಷ್ಟೋ ಹೆಣ್ಣುಮಕ್ಕಳ ತುಡಿತ. ತವರು ಎಲ್ಲೋ ದೂರದ ಊರಲ್ಲಿರುತ್ತದೆ. ಅತ್ತ ಹೋಗಿ ಅಪ್ಪ-ಅಮ್ಮನ ಮಡಿಲಲ್ಲಿ ತಲೆಯಿಟ್ಟು ಮಲಗಬೇಕೆಂದರೆ ಇಲ್ಲಿನ ಸಂಸಾರದ ಜವಾಬ್ದಾರಿಗಳು ಕಿರುಬೆರಳಿನಿಂದ ಹಿಡಿದು ನಿಲ್ಲಿಸುತ್ತವೆ. ಮಕ್ಕಳ ಶಾಲೆ, ಆಫೀಸ್ ಕೆಲಸದ ಪ್ರೆಶರ್, ಮನೆಯ ಮ್ಯಾನೇಜ್ಮೆಂಟ್ – ಇವೆಲ್ಲದರ ನಡುವೆ ಹೋಗಬೇಕೆಂಬ ಹಂಬಲವಿದ್ದರೂ ಮನಸ್ಸು ಹೆಲ್ಪ್ಲೆಸ್ ಆಗಿ ಅಸಹಾಯಕತೆಯ ಸುಳಿಗೆ ಸಿಲುಕುತ್ತದೆ.
ಇಂದಿನ ಟೆಕ್ನಾಲಜಿ ಯುಗದಲ್ಲಿ ವಿಡಿಯೋ ಕಾಲ್ ಅಥವಾ ಫೋನ್ ಕರೆಗಳು ಈಸಿ ಎನಿಸಬಹುದು. ಆದರೆ, ಇಲ್ಲಿನ ಗಡಿಬಿಡಿಯಲ್ಲಿ ಒಮ್ಮೊಮ್ಮೆ ಆ ಒಂದು ಕರೆ ಮಾಡಲೂ ಪುರುಸೊತ್ತಿಲ್ಲದಂತೆ ನಾವು ಬ್ಯುಸಿಯಾಗಿಬಿಡುತ್ತೇವೆ. ಕರೆ ಮಾಡದ ಆ ದಿನದ ಕೊನೆಯಲ್ಲಿ ಕಾಡುವ ಗಿಲ್ಟಿ ಫೀಲಿಂಗ್ ಇದೆಯಲ್ಲ, ಅದು ವರ್ಣನಾತೀತ. ಹೆಣ್ಣು ಅಕ್ಷರಶಃ ಎರಡು ದೋಣಿಯ ಮೇಲೆ ಕಾಲಿಟ್ಟ ಪಯಣಿಗ. ಇಲ್ಲಿ ಯಾರನ್ನೂ ಬ್ಲೇಮ್ ಮಾಡೋಕೆ ಸಾಧ್ಯವಿಲ್ಲ. ಕಾಲಚಕ್ರ ಉರುಳಿದಂತೆ ಲೈಫ್ ಬದಲಾಗುತ್ತಿದೆ ಅಷ್ಟೆ. ಒಂದು ಕಡೆ ತಾಯಿಯಾಗಿ, ಪತ್ನಿಯಾಗಿ ನಿಭಾಯಿಸಬೇಕಾದ ಕರ್ತವ್ಯಗಳ ರೆಸ್ಪಾನ್ಸಿಬಿಲಿಟಿ, ಇನ್ನೊಂದು ಕಡೆ ಮಗಳಾಗಿ ಸಲ್ಲಿಸಬೇಕಾದ ಪ್ರೀತಿಯ ಸೇವೆ. ಆದರೂ ನಮ್ಮ ಪ್ರತಿ ಪ್ರಾರ್ಥನೆಯಲ್ಲಿ ಅಪ್ಪ-ಅಮ್ಮ ಸದಾ ಇರುತ್ತಾರೆ. ಇಂಥ ಅನೇಕ ವಿಚಾರಗಳ ನಡುವೆಯೂ ಎಲ್ಲವನ್ನೂ ನಿಭಾಯಿಸುವ ಶಕ್ತಿ ಹೊಂದಿರುವವಳೇ ಮಹಿಳೆ.ಆ ಎಲ್ಲ ಅದ್ಭುತ ಮಹಿಳೆಯರಿಗೂ ‘ವಿಶ್ವ ಮಹಿಳಾ ದಿನಾಚರಣೆ’ಯ ಹಾರ್ದಿಕ ಶುಭಾಶಯಗಳು.
ಹೆಣ್ಣು ಎಂದರೆ ಕತ್ತಲ ಮನೆಯ ಬೆಳಗುವ ಹಣತೆಯಲ್ಲ,
ಬದಲಿಗೆ ಎರಡು ದೋಣಿಗಳ ನಡುವೆ ತನ್ನನ್ನೇ ಸೇತುವೆಯಾಗಿಸಿಕೊಂಡು
ಎರಡೂ ದಡಗಳನ್ನು ಬೆಸೆಯಲು ಹವಣಿಸುವ ಒಂದು ಮೌನ ಸಂಕಟ. ಸ್ಟೇ ಸ್ಟ್ರಾಂಗ್, ಸ್ಟೇ ಎಮೋಷನಲ್….
ಮಗಳಾಗಿ ಸಣ್ಣ ಟಿಪ್ಸ್
ಕನೆಕ್ಷನ್ ಇರಲಿ: ಎಷ್ಟೇ ಬ್ಯುಸಿ ಇದ್ದರೂ ದಿನಕ್ಕೆ ಒಂದು ‘ಸ್ಮಾಲ್ ಕಾಲ್’ ಮಾಡಿ. ನಿಮ್ಮ ವಾಯ್ಸ್ ಕೇಳಿದರೆ ಅವರಿಗೆ ಅದೇ ದೊಡ್ಡ ಟಾನಿಕ್
ಮೆಮೊರೀಸ್ ಹಂಚಿಕೊಳ್ಳಿ: ಹಳೆಯ ಫೋಟೋ ಅಥವಾ ಮಕ್ಕಳು ಆಡೋ ಪುಟ್ಟ ವಿಡಿಯೋಗಳನ್ನು ಆಗಾಗ ಕಳುಹಿಸುತ್ತಿರಿ. ಅವರು ಲೋನ್ಲಿ ಅನ್ನೋ ಫೀಲಿಂಗ್ನಿಂದ ಹೊರಬರಲು ಇದು ಬೆಸ್ಟ್ ಐಡಿಯಾ.
ಧೈರ್ಯವಾಗಿರಿ: ನೀವು ಸಂಸಾರವನ್ನು ಚೆನ್ನಾಗಿ ನಿಭಾಯಿಸುವುದನ್ನು ಕಂಡು ಅವರಿಗೆ ಹೆಮ್ಮೆಯೇ ಇರುತ್ತದೆ. ಸುಖಾಸುಮ್ಮನೆ ಕೊರಗಬೇಡಿ.





