HOMENews

ಆದಿವಾಸಿಗಳು ಪುರಾತನ ಸಂಸ್ಕೃತಿ, ಜ್ಞಾನದ ವಾರಸುದಾರರು : ಎಂ.ಆರ್. ಗಂಗಾಧರ್

ಮೈಸೂರು, ಫೆ.23:- ಆದಿವಾಸಿಗಾಳು ಪ್ರಪಂಚದ ಅತ್ಯಂತ ಪುರಾತನ ಸಂಸ್ಕೃತಿ ಮತ್ತು ಜ್ಞಾನದ ವಾರಸುದಾರರು ಎಂದು ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಪತಿ ಎಂ.ಆರ್. ಗಂಗಾಧರ್ ತಿಳಿಸಿದರು.

ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಹಾಗೂ ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಸೋಮವಾರ ನಡೆದ ಬುಡಕಟ್ಟು ಜನರ ಆರೋಗ್ಯ ಮತ್ತು ಆರೋಗ್ಯ ರಕ್ಷಣಾ ಪದ್ಧತಿಗಳ ಮೇಲೆ ಜಾಗತೀಕರಣ ಮತ್ತು ಸಾಂಸ್ಕೃತಿಕ ನಂಬಿಕೆಗಳ ಪ್ರಭಾವ ಕುರಿತು ನಡೆದ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಆರೋಗ್ಯ ಎಂದರೆ ಕೇವಲ ಔಷಧ ಮತ್ತು ಆಸ್ಪತ್ರೆಯಲ್ಲ ಅದು ಪೌಷ್ಠಿಕತೆ. ನಂಬಿಕೆ, ಪಾರಂಪರಿಕತೆ ಮತ್ತು ಅಸ್ಮಿತೆಯನ್ನು ಒಳಗೊಂಡಿದೆ. ಆದಿವಾಸಿಗಳ ವಿಶೇಷವಾದ ಜ್ಞಾನ ಜಾಗತೀಕರಣದಲ್ಲಿ ಸ್ಥಾನ ಪಲ್ಲಟಗೊಳ್ಳುತ್ತಿದೆ.

ಇದನ್ನೂ ಓದಿ:- ಫೆಬ್ರುವರಿ 30 ಸಿನಿಮಾ ಬಿಡುಗಡೆಗೆ ಉತ್ತಮ ಸ್ಪಂದನೆ: ನಿರ್ದೇಶಕ ಎಂ.ಎಲ್. ಪ್ರಶಾಂತ್

ಜಾಗತೀಕರಣವು ಅನುಕೂಲ ಮತ್ತು ಅನಾನುಕೂಲ ಎರಡನ್ನು ಒಳಗೊಂಡಿದೆ. ಜಾಗತಿಕವಾಗಿ ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಕೆನಡಾ ದೇಶಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಆದಿವಾಸಿಗಳ ಪಾಲುಗೊಳ್ಳುವಿಕೆ ಇದೆ. ಆದರೆ ಭಾರತದಲ್ಲಿ ಬಹಳ ಸಣ್ಣ ಪ್ರಮಾಣದಲ್ಲಿ ಇದೆ. ಆದಿವಾಸಿಗಳ ಪಾರಂಪರಿಕ ಜ್ಞಾನವನ್ನು ನಮ್ಮ ಆಧುನಿಕ ವೈದ್ಯ ಪದ್ಧತಿಯಲ್ಲಿ ಅಳವಡಿಸಿಕೊಳ್ಳುವುದು ಅತ್ಯಾವಶ್ಯಕವಾಗಿದೆ. ಆರೋಗ್ಯ ಎಂದರೆ ಶರೀರ, ಮನಸ್ಸು ಸದೃಢವಾಗಿರುವುದಕ್ಕೆ ಅಲ್ಲಾ. ಅದು ಬದುಕಿನ ಜೀವನ ಕ್ರಮವಾಗಿದೆ ಎಂದರು.

ಗಿಡಮೂಲಿಕೆ ಔಷಧಗಳು, ಧಾರ್ಮಿಕ ಚಿಕಿತ್ಸೆ, ಆಧ್ಯಾತ್ಮಿಕ ಸಮಾರಂಭಗಳು ಸಮುದಾಯ ಆಧಾರಿತ ಆರೈಕೆ. ಈ ಸಮಗ್ರ ವಿಧಾನವು ಆಧುನಿಕ ಜೈವಿಕ ವೈದ್ಯಕೀಯ ವ್ಯವಸ್ಥೆಗಳಿಗಿಂತ ಭಿನ್ನವಾಗಿವೆ. ಜಾಗತೀಕರಣವು ಹಲವಾರು ಸುಧಾರಣೆಗಳನ್ನು ತಂದಿದೆ. ಸರ್ಕಾರಿ ಯೋಜನೆಗಳು ದೂರದ ಪ್ರದೇಶಗಳನ್ನು ತಲುಪುತ್ತವೆ. ಮೊಬೈಲ್ ಚಿಕಿತ್ಸಾಲಯಗಳು ತರಬೇತಿ ಪಡೆದ ವೈದ್ಯರು ಬುಡಕಟ್ಟು ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಇದನ್ನೂ ಓದಿ:- ಕಾಂಗ್ರೆಸ್ ಕಾರ್ಯಕರ್ತರಿಗೆ ದ್ರೋಹವೆಂದ ಅಮಿತ್ ದೇವರಹಟ್ಟಿ ಆರೋಪ

ಸಹಪ್ರಾಧ್ಯಾಪಕರಾದ ಧಾರವಾಡದ ಡಾ. ಜೈ ಪ್ರಭಾಕರ್ ಎಸ್.ಸಿ. ಮಾತನಾಡಿ ಆದಿವಾಸಿಗಳ ಆರೋಗ್ಯದ ಬಗ್ಗೆ ಬಹಳಷ್ಟು ಸಂಶೋಧನೆಗಳು ನಡೆಯುತ್ತಿವೆ. ಇದರಲ್ಲಿ ಧಾರ್ಮಿಕ ನಂಬಿಕೆಗಳಿಗೆ ಬೆಲೆ ಕೊಡಬೇಕು. ಜಾಗತೀಕರಣ ಬೇಕು, ದೇಶೀಯತೆಯನ್ನು ಒಳಗೊಂಡ ಜಾಗತೀಕರಣ ಬೇಕು. ಆದಿವಾಸಿಗಳಲ್ಲಿ ಅಪೌಷ್ಠಿಕತೆ ಹೆಚ್ಚಾಗಿದೆ. ಬದಲಾದ ಜೀವನಶೈಲಿಯಿಂದ ಹಲವಾರು ಕಾಯಿಲೆಗಳು ಹೆಚ್ಚಾಗುತ್ತಿವೆ. ಆದಿವಾಸಿಗಳ ಜಾನಪದ ವೈದ್ಯಪದ್ಧತಿಯನ್ನು ಪೋಷಿಸಬೇಕಾಗಿದೆ ಎಂದರು.

ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪನಿರ್ದೇಶಕಿ ಹೆಚ್.ಎಸ್. ಗಿರಿಜಾಂಬ ಮಾತನಾಡಿ ಆದಿವಾಸಿಗಳಿಗೆ ಔಷಧಿಯ ಮೇಲೆ ಆಳವಾದ ಜ್ಞಾನವಿದೆ. ಆಯುರ್ವೇದ ಪದ್ಧತಿ ಹಾಗೂ ನಾಟಿ ವೈದ್ಯ ಪದ್ಧತಿಯನ್ನು ಸಾಮಾನ್ಯ ಜನರಿಗೆ ಹೇಗೆ ಪರಿಚಯಿಸಬಹುದು ಎಂಬುದರ ಬಗ್ಗೆ ಕಾರ್ಯಾಗಾರದಲ್ಲಿ ಚರ್ಚಿಸಬೇಕಾಗಿದೆ. ಜಿಲ್ಲೆ ಹಾಗೂ ಬೇರೆ ಬೇರೆ ರಾಜ್ಯಗಳಿಂದ ಕಾರ್ಯಾಗಾರಕ್ಕೆ ಬಂದಿರುವುದರಿಂದ ಪ್ರಾದೇಶಿಕ ಬುಡಕಟ್ಟು ಸಮುದಾಯದವರ ವಿವಿಧ ವೈದ್ಯಪದ್ಧತಿಗಳನ್ನು ತಿಳಿದುಕೊಳ್ಳಲು ಇದೊಂದು ಸದಾವಕಾಶ. ಈ ಕಾರ್ಯಾಗಾರದ ಚರ್ಚೆ ಆರೋಗ್ಯಕರವಾಗಿರಲಿ, ಆರೋಗ್ಯದ ಮೇಲೆ ಇರಲಿ ಎಂದರು.

ಕಾರ್ಯಾಗಾರದಲ್ಲಿ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಕಂಡಿಕೆರೆ ರಾಮಯ್ಯ ಶ್ರೀಧರ್, ಸಂಶೋಧನಾಧಿಕಾರಿ ಶಿವಕುಮಾರ್ ಸಿ., ಡಾ. ಕೃಷ್ಣಮೂರ್ತಿ ಕೆ.ವಿ. ಮಾತನಾಡಿದರು. ಕ್ಷೇತ್ರ ಸಂಶೋಧಕರಾದ ಡಾ. ದಿನೇಶ್ ಕೆ.ಡಿ., ಡಾ. ರಾಮಕೃಷ್ಣಯ್ಯ ಡಿ.ಸಿ. ಡಾ. ರವಿಕುಮಾರ್, ಡಾ. ಮೋಹನ್‌ಕುಮಾರ್, ಕಛೇರಿ ಅಧೀಕ್ಷಕಿ ಎಂ.ವಿ. ನಾಗರತ್ನ ಹಾಜರಿದ್ದರು.

ಜಾಗತಿಕ ಉದ್ಯೋಗ ಸವಾಲುಗಳಿಗೆ ತಳಮಟ್ಟದ ನವೀನತೆ ಅಗತ್ಯ: ತಜ್ಞರ ಅಭಿಪ್ರಾಯ

Leave a Reply