ಮಡಿಕೇರಿ ಡಬಲ್ ಮರ್ಡರ್‌ಗೆ ಬಿಗ್ ಟ್ವಿಸ್ಟ್: ಅಣ್ಣ–ತಂಗಿ ಅಕ್ರಮ ಸಂಬಂಧದ ಆಕ್ರೋಶದಲ್ಲಿ ಇಬ್ಬರನ್ನೂ ಕೊ* ದ ಸಂಬಂಧಿ

ಮಡಿಕೇರಿ, ಮಾ.12: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಭಾಗಮಂಡಲ ಸಮೀಪದ ಕುಂದಚೇರಿ ಗ್ರಾಮದಲ್ಲಿ ನಡೆದಿದ್ದ ಜೋಡಿ ಕೊ* ಪ್ರಕರಣಕ್ಕೆ ಇದೀಗ ದೊಡ್ಡ ತಿರುವು ಸಿಕ್ಕಿದೆ. ಮೊದಲಿಗೆ ಸಾಮಾನ್ಯ ವೈಷಮ್ಯ ಅಥವಾ ವೈಯಕ್ತಿಕ ದ್ವೇಷದ ಹಿನ್ನೆಲೆ ಎಂದು ಶಂಕಿಸಲಾಗಿದ್ದ ಈ ಘಟನೆಗೆ ಇದೀಗ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಅಚ್ಚರಿಯ ಸಂಗತಿಗಳು ಬೆಳಕಿಗೆ ಬಂದಿವೆ.
ಕೊ* ಯಾದವರು ಯಶೋಧಾ (45) ಮತ್ತು ಕುಂಞರಾಮ (47). ಈ ಇಬ್ಬರು ಸಂಬಂಧದಲ್ಲಿ ಅಣ್ಣ–ತಂಗಿ ಆಗಬೇಕಾಗಿದ್ದವರು. ಆದರೆ ಕುಟುಂಬದ ಸಂಬಂಧಗಳನ್ನು ಮೀರಿ ಇವರಿಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿದ್ದು, ಕಳೆದ ಎರಡು ವರ್ಷಗಳಿಂದ ಒಂದೇ ಮನೆಯಲ್ಲಿದ್ದು ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿ ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ. ಈ ವಿಚಾರವೇ ಕೊಲೆ ಪ್ರಕರಣಕ್ಕೆ ಪ್ರಮುಖ ಕಾರಣವಾಗಿರುವುದು ತನಿಖೆಯಲ್ಲಿ ತಿಳಿದು ಬಂದಿದೆ.
ಪೊಲೀಸರ ಮಾಹಿತಿಯ ಪ್ರಕಾರ, ಯಶೋಧಳ ತಾಯಿ, ಕುಂಞರಾಮನ ತಾಯಿ ನಾರಾಯಣಿ ಹಾಗೂ ಕೊ* ಆರೋಪಿ ಚಂದುವಿನ ತಾಯಿ ಸ್ವಂತ ಅಕ್ಕ–ತಂಗಿಯರು. ಈ ಹಿನ್ನೆಲೆಯಲ್ಲಿ ಯಶೋಧಾ, ಕುಂಞರಾಮ ಮತ್ತು ಆರೋಪಿ ಚಂದು ಸಂಬಂಧದಲ್ಲಿ ಸಹೋದರ–ಸಹೋದರಿಯರ ಮಕ್ಕಳಾಗುತ್ತಾರೆ. ಆದರೆ ಇದೇ ಕುಟುಂಬದ ಸಂಬಂಧವನ್ನು ಮೀರಿ ಯಶೋಧಾ ಮತ್ತು ಕುಂಞರಾಮ ನಡುವೆ ಆಪ್ತ ಸಂಬಂಧ ಬೆಳೆದಿದ್ದು, ಗ್ರಾಮದಲ್ಲೂ ಈ ವಿಷಯ ಚರ್ಚೆಗೆ ಗ್ರಾಸವಾಗಿತ್ತು ಎಂದು ತಿಳಿದು ಬಂದಿದೆ.
ಇನ್ನೊಂದು ಪ್ರಮುಖ ಅಂಶವೆಂದರೆ, ಕುಂಞರಾಮ ಸುಮಾರು ಎರಡು ವರ್ಷಗಳ ಹಿಂದೆ ತನ್ನ ಪತ್ನಿ ಕಲ್ಯಾಣಿಯನ್ನು ತ್ಯಜಿಸಿ ಯಶೋಧಳ ಜೊತೆ ವಾಸಿಸಲು ಆರಂಭಿಸಿದ್ದನು. ಈ ವಿಷಯ ಕುಟುಂಬದ ಕೆಲವರಿಗೂ ಮತ್ತು ಗ್ರಾಮಸ್ಥರಿಗೂ ಅಸಮಾಧಾನ ತಂದಿತ್ತು. ವಿಶೇಷವಾಗಿ ಆರೋಪಿ ಚಂದುವಿಗೆ ಈ ಸಂಬಂಧದ ಮೇಲೆ ತೀವ್ರ ವಿರೋಧವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ದಿನವಾದ ಮಾರ್ಚ್ 11ರಂದು ಕುಂದಚೇರಿ ಗ್ರಾಮದಲ್ಲಿ ನಾಮಕರಣ ಸಮಾರಂಭವೊಂದು ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಶೋಧಾ, ಕುಂಞರಾಮ ಹಾಗೂ ಚಂದು ಸೇರಿದಂತೆ ಹಲವು ಮಂದಿ ಭಾಗವಹಿಸಿ ನಂತರ ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಿದ್ದರು. ಕಾರ್ಯಕ್ರಮದ ವೇಳೆ ಮದ್ಯಪಾನವೂ ನಡೆದಿತ್ತು ಎನ್ನಲಾಗಿದೆ.
ರಾತ್ರಿ ವೇಳೆಗೆ ಮದ್ಯದ ಮತ್ತಿನಲ್ಲಿ ಇದ್ದ ಚಂದು, ಕೈಯಲ್ಲಿ ಮಚ್ಚು ಹಿಡಿದು ನೇರವಾಗಿ ಯಶೋಧಳ ಮನೆಗೆ ತೆರಳಿದ್ದಾನೆ. ಅಲ್ಲಿ ಯಶೋಧಾ ಮತ್ತು ಕುಂಞರಾಮ ಒಂದೇ ಮನೆಯಲ್ಲಿ ಇದ್ದುದನ್ನು ಕಂಡು ಆಕ್ರೋಶಗೊಂಡಿದ್ದಾನೆ. ಕ್ಷಣಾರ್ಧದಲ್ಲಿ ಕೋಪದ ಮಿತಿ ಮೀರಿ ಇಬ್ಬರ ಮೇಲೂ ಮಚ್ಚಿನಿಂದ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಚ್ಚಿನೇಟಿಗೆ ಗಂಭೀರವಾಗಿ ಗಾಯಗೊಂಡ ಯಶೋಧಾ ಮತ್ತು ಕುಂಞರಾಮ ಮಲಗಿದ್ದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಬೆಳಿಗ್ಗೆ ಈ ಘಟನೆ ಬೆಳಕಿಗೆ ಬಂದಾಗ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಜೋಡಿ ಕೊ* ಸುದ್ದಿ ಕ್ಷಣಾರ್ಧದಲ್ಲೇ ಗ್ರಾಮದಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿತು.
ಸುದ್ದಿ ತಿಳಿದು ಸ್ಥಳಕ್ಕೆ ಭಾಗಮಂಡಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಆರೋಪಿಯಾದ ಚಂದುವನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಅಕ್ರಮ ಸಂಬಂಧದ ಹಿನ್ನೆಲೆ ಹಾಗೂ ವೈಯಕ್ತಿಕ ಆಕ್ರೋಶವೇ ಈ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣ ಕೇವಲ ಒಂದು ಅಪರಾಧ ಘಟನೆಯಷ್ಟೇ ಅಲ್ಲದೆ, ಕೆಲವು ಸಮುದಾಯಗಳಲ್ಲಿ ಇನ್ನೂ ಶಿಕ್ಷಣ ಮತ್ತು ಸಾಮಾಜಿಕ ಜಾಗೃತಿ ಕೊರತೆಯಿಂದ ಉಂಟಾಗುವ ಸಮಸ್ಯೆಗಳನ್ನೂ ಬೆಳಕಿಗೆ ತಂದಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಸಮಾಜದ ಮುಖ್ಯವಾಹಿನಿಗೆ ಎಲ್ಲರನ್ನು ಸಮಾನವಾಗಿ ತರಲು ಅಧಿಕಾರಿಗಳು ಮತ್ತು ಸಾಮಾಜಿಕ ಸಂಘಟನೆಗಳು ಹೆಚ್ಚು ಗಮನ ಹರಿಸಬೇಕೆಂಬ ಮಾತುಗಳು ಕೂಡ ಕೇಳಿಬರುತ್ತಿವೆ.
ಸದ್ಯ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ಮುಂದುವರಿದಿದೆ. ಪ್ರಕರಣದ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಪೊಲೀಸರು ಮುಂದಿನ ತನಿಖೆ ಮುಂದುವರೆಸಿದ್ದಾರೆ.





