
ಮೈಸೂರು, ಮಾ.06: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ರಾಜ್ಯ ಬಜೆಟ್ ಕುರಿತು ಮೈಸೂರು ನಗರ ಬಿಜೆಪಿ ತೀವ್ರ ಟೀಕೆ ವ್ಯಕ್ತಪಡಿಸಿದೆ. ಮೈಸೂರು ನಗರ ಬಿಜೆಪಿ ಘಟಕದ ವಕ್ತಾರ ಎಂ.ಎ. ಮೋಹನ್ ಅವರು ಪ್ರತಿಕ್ರಿಯೆ ನೀಡಿ, ಘೋಷಣೆಗಳು ಹೆಚ್ಚಿದ್ದರೂ ಅವುಗಳಿಗೆ ಅಗತ್ಯವಾದ ಅನುದಾನ ಮೀಸಲಿಡದ ಬಜೆಟ್ ಇದಾಗಿದೆ ಎಂದು ಆರೋಪಿಸಿದರು.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಅತಿ ಹೆಚ್ಚು ದಿನ ಮುಖ್ಯಮಂತ್ರಿ ಆಗಿ ಸೇವೆ ಸಲ್ಲಿಸಿರುವುದರ ಜೊತೆಗೆ ಅತಿ ಹೆಚ್ಚು ಬಜೆಟ್ ಮಂಡಿಸಿರುವ ದಾಖಲೆ ಬರೆದಿದ್ದಾರೆ. ಆದರೆ ಅದಕ್ಕೆ ಜೊತೆಯಾಗಿ ಅತಿ ಹೆಚ್ಚು ಸಾಲ ಮಾಡುವ ಕೀರ್ತಿಯನ್ನೂ ಪಡೆದುಕೊಂಡಿದ್ದಾರೆ ಎಂದು ಟೀಕಿಸಿದರು.
ಮೈಸೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ಹಲವು ವಿಚಾರಗಳನ್ನು ಉಲ್ಲೇಖಿಸಲಾಗಿದೆ. ಆದರೆ ಅವುಗಳನ್ನು ಜಾರಿಗೆ ತರಲು ಅಗತ್ಯವಾದ ಹಣಕಾಸು ಮೀಸಲು ಮಾಡಲಾಗಿಲ್ಲ ಎಂಬುದು ವಿಷಾದಕರ ಸಂಗತಿ ಎಂದು ಹೇಳಿದರು. ಉದಾಹರಣೆಗೆ ಮೈಸೂರಿನ ಪ್ರಮುಖ ಪರಿಸರ ಹಾಗೂ ಪ್ರವಾಸಿ ತಾಣವಾದ ಲಿಂಗಾಬುದಿ ಕೆರೆಯ ಅಭಿವೃದ್ಧಿ ಬಗ್ಗೆ ಸರ್ಕಾರ ಪ್ರಸ್ತಾಪ ಮಾಡಿದ್ದರೂ, ಅದಕ್ಕಾಗಿ ನಿರ್ದಿಷ್ಟ ಅನುದಾನವನ್ನು ಬಜೆಟ್‌ನಲ್ಲಿ ತೋರಿಸಿಲ್ಲ ಎಂದು ಅವರು ಆರೋಪಿಸಿದರು.
ಸಿದ್ದರಾಮಯ್ಯನವರ ರಾಜ್ಯ ಸರ್ಕಾರ ಘೋಷಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವಶಕ್ತಿ ಯೋಜನೆಗೆ ಈ ವರ್ಷದ ಬಜೆಟ್‌ನಲ್ಲಿ ಯಾವುದೇ ಹಣ ಮೀಸಲಿಡದಿರುವುದು ಯುವಕರಿಗೆ ನಿರಾಸೆ ತಂದಿದೆ ಎಂದು ಹೇಳಿದರು. ಸರ್ಕಾರ ಘೋಷಣೆ ಮಾಡಿದ ಯೋಜನೆಗಳನ್ನು ಜಾರಿಗೆ ತರಲು ಸ್ಪಷ್ಟವಾದ ಕ್ರಮಗಳನ್ನು ಕೈಗೊಳ್ಳಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟರು.
ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ರೇಷ್ಮೆ ನೂಲು ತೆಗೆಯುವ ಕಾರ್ಖಾನೆಯನ್ನು ಮುಚ್ಚಿ ತಾಂಡವಪುರದಲ್ಲಿ ಹೊಸ ರೇಷ್ಮೆ ಕ್ಲಸ್ಟರ್ ಸ್ಥಾಪಿಸುವ ಬಗ್ಗೆ ಸರ್ಕಾರ ಮುಂದಾಗಿರುವುದಾಗಿ ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ. ಆದರೆ ಈ ಬದಲಾವಣೆಗೆ ಕಾರಣವೇನು ಎಂಬುದರ ಬಗ್ಗೆ ಸರ್ಕಾರ ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದು ಮೋಹನ್ ಪ್ರಶ್ನಿಸಿದರು.
ಮೈಸೂರು ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನ ಸಂಚಾರದಿಂದ ಉಂಟಾಗಿರುವ ಟ್ರಾಫಿಕ್ ಸಮಸ್ಯೆ ಕುರಿತು ಕೂಡ ಬಜೆಟ್‌ನಲ್ಲಿ ಯಾವುದೇ ಸಮಗ್ರ ಪರಿಹಾರ ಸೂಚಿಸಲಿಲ್ಲ ಎಂದು ಅವರು ಟೀಕಿಸಿದರು. ನಗರದಲ್ಲಿ ರಸ್ತೆ ವಿಸ್ತರಣೆ, ಪರ್ಯಾಯ ಮಾರ್ಗಗಳ ಅಭಿವೃದ್ಧಿ ಅಥವಾ ಸಮಗ್ರ ಸಾರಿಗೆ ಯೋಜನೆಗಳ ಬಗ್ಗೆ ಸರ್ಕಾರ ಸ್ಪಷ್ಟ ಯೋಜನೆ ರೂಪಿಸಬೇಕಿತ್ತು ಎಂದು ಹೇಳಿದರು.
ವಿಶ್ವ ವಿಖ್ಯಾತ ಹೆಸರುವಾಸಿಯಾದ ಮೈಸೂರು ರೇಷ್ಮೆ ಉದ್ಯಮದ ಬಗ್ಗೆ ಸಹ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದ ಅವರು, ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ನಕಲಿ ರೇಷ್ಮೆ ಉತ್ಪನ್ನಗಳ ಮಾರಾಟವನ್ನು ತಡೆಯಲು ಯಾವುದೇ ಕಠಿಣ ಕ್ರಮಗಳ ಬಗ್ಗೆ ಬಜೆಟ್‌ನಲ್ಲಿ ಉಲ್ಲೇಖವಿಲ್ಲ. ಜೊತೆಗೆ ಮೈಸೂರು ರೇಷ್ಮೆ ಉತ್ಪಾದನೆಯನ್ನು ಉತ್ತೇಜಿಸಲು ಸಹ ಯಾವುದೇ ಹೊಸ ಯೋಜನೆ ಘೋಷಿಸಲಾಗಿಲ್ಲ ಎಂದು ಹೇಳಿದರು.
ರಾಜ್ಯದ ಈ ಬಜೆಟ್‌ನಲ್ಲಿ ಅನೇಕ ವಿಷಯಗಳನ್ನು ಪ್ರಸ್ತಾಪಿಸಿದರೂ ಅವುಗಳಿಗೆ ಅಗತ್ಯವಾದ ಹಣಕಾಸು ವ್ಯವಸ್ಥೆ ಹಾಗೂ ಅನುಷ್ಠಾನ ಕುರಿತ ಸ್ಪಷ್ಟತೆ ಕಾಣುತ್ತಿಲ್ಲ. ಘೋಷಣೆಗಳಿಗಿಂತ ಕಾರ್ಯಗತಗೊಳಿಸುವ ಕ್ರಮಗಳಿಗೆ ಹೆಚ್ಚಿನ ಮಹತ್ವ ನೀಡಬೇಕಿತ್ತು ಎಂದು ಎಂ.ಎ. ಮೋಹನ್ ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಹಣಕಾಸು ಮೀಸಲು ಮಾಡದೇ ಕೇವಲ ಯೋಜನೆಗಳನ್ನು ಘೋಷಿಸುವ ಮೂಲಕ ಬಜೆಟ್ ಮಂಡಿಸಿರುವುದು ಸರ್ಕಾರದ ದಾಖಲೆಯಾಗಬಹುದು. ಆದರೆ ಜನರಿಗೆ ಮತ್ತು ನಗರಗಳ ಅಭಿವೃದ್ಧಿಗೆ ಅದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಅವರು ಹೇಳಿದರು.
ಮೈಸೂರು ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ಮುಂದಿನ ದಿನಗಳಲ್ಲಿ ಸ್ಪಷ್ಟ ಮತ್ತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮೈಸೂರು ನಗರ ಬಿಜೆಪಿ ವಕ್ತಾರ ಎಂ.ಎ. ಮೋಹನ್ ಆಗ್ರಹಿಸಿದರು.




