
ಮೈಸೂರು, ಮಾ. 26: ನಗರದ ವಲಯ ಕಚೇರಿ-2 ವ್ಯಾಪ್ತಿಯ ವಾರ್ಡ್ ಸಂಖ್ಯೆ 58ರ ಐಶ್ವರ್ಯ ಬಡಾವಣೆಗೆ ಇಂದು ಬೆಳಿಗ್ಗೆ 7:00 ಗಂಟೆಗೆ ಮಹಾನಗರ ಪಾಲಿಕೆಯ ಮಾನ್ಯ ಆಯುಕ್ತರು ಭೇಟಿ ನೀಡಿ, ಮೂಲಭೂತ ಸೌಕರ್ಯಗಳು ಹಾಗೂ ಸ್ವಚ್ಛತಾ ವ್ಯವಸ್ಥೆಗಳ ಕುರಿತು ಸ್ಥಳ ಪರಿಶೀಲನೆ ನಡೆಸಿದರು. ಈ ಭೇಟಿ ವೇಳೆ ಬಡಾವಣೆಯಲ್ಲಿನ ರಸ್ತೆ, ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರು, ಕಸದ ಸಂಗ್ರಹಣೆ ಮತ್ತು ವಿಲೇವಾರಿ ವ್ಯವಸ್ಥೆಗಳನ್ನು ಸಮಗ್ರವಾಗಿ ಪರಿಶೀಲಿಸಲಾಯಿತು.
ಪರಿಶೀಲನೆ ವೇಳೆ ಆಯುಕ್ತರು ಸ್ಥಳೀಯ ನಿವಾಸಿಗಳೊಂದಿಗೆ ನೇರವಾಗಿ ಸಂವಾದ ನಡೆಸಿ, ಅವರ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಆಲಿಸಿದರು. ಕೆಲವು ಪ್ರದೇಶಗಳಲ್ಲಿ ಕಸದ ಸಂಗ್ರಹಣೆ ಸರಿಯಾಗಿ ನಡೆಯುತ್ತಿಲ್ಲ ಎಂಬ ದೂರಗಳು ಕೇಳಿಬಂದಿದ್ದು, ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೊತೆಗೆ, ಒಳಚರಂಡಿ ನೀರು ಸರಿಯಾಗಿ ಹರಿಯದಿರುವ ಸಮಸ್ಯೆಗಳ ಬಗ್ಗೆ ಕೂಡ ಗಮನ ಸೆಳೆದ ನಿವಾಸಿಗಳಿಗೆ ಪರಿಹಾರ ಕ್ರಮಗಳನ್ನು ಶೀಘ್ರದಲ್ಲೇ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವಲಯ ಕಚೇರಿ-2ರ ವಲಯ ಆಯುಕ್ತರಾದ ಶ್ರೀ ಗಿರೀಶ್ ಜಿ ಅವರು ಬಡಾವಣೆಯಲ್ಲಿನ ಇತ್ತೀಚಿನ ಅಭಿವೃದ್ಧಿ ಕಾಮಗಾರಿಗಳ ವಿವರವನ್ನು ನೀಡಿದರು. ಪರಿಸರ ಸಂಬಂಧಿತ ವಿಷಯಗಳ ಬಗ್ಗೆ ಕಾರ್ಯಪಾಲಕ ಅಭಿಯಂತರರಾದ ಮೃತ್ಯುಂಜಯ ಕೆ ಎಸ್ ಹಾಗೂ ಪರಿಸರ ಅಭಿಯಂತರರಾದ ಮಹದೇವಮ್ಮ ಎನ್ ಅವರು ತ್ಯಾಜ್ಯ ನಿರ್ವಹಣಾ ಕ್ರಮಗಳು, ಸ್ವಚ್ಛತಾ ಕಾರ್ಯಗಳ ನಿರ್ವಹಣೆ ಹಾಗೂ ಮುಂದಿನ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಸ್ಥಳೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿ ಎಸ್ ಎಸ್ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಹರಿ ಜಿ ಎಸ್ ಅವರು ಕೂಡ ಸಭೆಯಲ್ಲಿ ಭಾಗವಹಿಸಿ, ನಿವಾಸಿಗಳ ಸಮಸ್ಯೆಗಳನ್ನು ಆಯುಕ್ತರ ಗಮನಕ್ಕೆ ತಂದರು. ಬಡಾವಣೆಯಲ್ಲಿನ ರಸ್ತೆ ದುರಸ್ಥಿ, ನೀರು ಸರಬರಾಜಿನ ವ್ಯತ್ಯಯ, ಮತ್ತು ಕಸದ ಬುಟ್ಟಿಗಳ ಕೊರತೆ ಕುರಿತಾಗಿ ಅವರು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಈ ಸಮಸ್ಯೆಗಳನ್ನು ಆದ್ಯತೆಯ ಆಧಾರದ ಮೇಲೆ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಅಧಿಕಾರಿಗಳು ಸ್ಥಳದಲ್ಲೇ ಕೆಲ ತಕ್ಷಣದ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದ್ದು, ಸ್ವಚ್ಛತೆ ಕಾಪಾಡುವಲ್ಲಿ ನಿವಾಸಿಗಳ ಸಹಕಾರವೂ ಅತ್ಯಂತ ಅಗತ್ಯ ಎಂದು ಒತ್ತಿ ಹೇಳಿದರು. “ಪಾಲಿಕೆಯ ಪ್ರಯತ್ನಕ್ಕೆ ಜನರ ಸಹಕಾರ ಕೂಡ ಸೇರಿದಾಗ ಮಾತ್ರ ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣ ಸಾಧ್ಯ” ಎಂದು ಆಯುಕ್ತರು ಅಭಿಪ್ರಾಯಪಟ್ಟರು.
ಈ ಭೇಟಿಯು ಸ್ಥಳೀಯ ನಿವಾಸಿಗಳಲ್ಲಿ ಆಶಾಭಾವನೆ ಮೂಡಿಸಿದ್ದು, ಸಮಸ್ಯೆಗಳ ಪರಿಹಾರ ಶೀಘ್ರವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಪರಿಶೀಲನೆಗಳನ್ನು ನಗರಾದ್ಯಂತ ವಿಸ್ತರಿಸುವುದಾಗಿ ಪಾಲಿಕೆ ತಿಳಿಸಿದೆ.





