
ಮೈಸೂರು: ಸಮರ್ಥನಂ ಅಂಗವಿಕಲರ ಸಂಸ್ಥೆಯು ಸಿಗ್ನಿಫೈ ಕಂಪನಿಯ ಜಗ್ ಮಗ್ ಪಾಠಶಾಲಾ ಸಿ.ಎಸ್.ಆರ್ ಯೋಜನೆಯಡಿ ಜೆ.ಎಸ್.ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಕಾಲೇಜಿಗೆ ಉಚಿತವಾಗಿ 18 ಕಂಪ್ಯೂಟರ್ ಗಳನ್ನು ಕಾಲೇಜಿನ ಲ್ಯಾಬ್ ಗೆ ಅಳವಡಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಮರ್ಥನಂ ಸಂಸ್ಥೆಯ ಎಟಿಎ ವಿಭಾಗದ ಮುತ್ತುರಾಜು ಅವರು, ಸಿಗ್ನಿಫೈ ಸಂಸ್ಥೆಯ ಸಹಕಾರದೊಂದಿಗೆ ಕಳೆದ ಮೂರು ವರ್ಷಗಳಲ್ಲಿ ದೇಶಾದ್ಯಂತ 57 ವಿಶೇಷ ಶಾಲಾ ಹಾಗೂ ಕಾಲೇಜುಗಳಿಗೆ ಉಚಿತ ಕಂಪ್ಯೂಟರ್ ಲ್ಯಾಬ್‌ಗಳನ್ನು ನೀಡಲಾಗಿದೆ ಎಂದು ತಿಳಿಸಿದರು. ಸಮರ್ಥನಂ ಸಂಸ್ಥೆಯು 2019ರಲ್ಲಿ ಎಟಿಎ ವಿಭಾಗವನ್ನು ಸ್ಥಾಪಿಸಿ, ವಿಕಲಚೇತನರಿಗೆ ಅಗತ್ಯವಿರುವ ಸಹಾಯಕ ತಂತ್ರಜ್ಞಾನಗಳ ಸಂಶೋಧನೆ ಹಾಗೂ ಅಭಿವೃದ್ಧಿಗೆ ಸಹಕಾರ ನೀಡುತ್ತಿದೆ ಎಂದು ಹೇಳಿದರು.

ಮೈಸೂರು ವಿಭಾಗದ ಮುಖ್ಯಸ್ಥರಾದ ಶಿವರಾಜ್ ಅವರು ಮಾತನಾಡಿ, ಸಮರ್ಥನಂ ಸಂಸ್ಥೆಯು ಮೈಸೂರಿನಲ್ಲಿ ಪ್ರತಿವರ್ಷ 350ಕ್ಕೂ ಹೆಚ್ಚು ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಉದ್ಯೋಗ ಮೇಳ, ಬುದ್ಧಿ ವಿಕಲಚೇತನ ಶಾಲೆ ಹಾಗೂ ಮಹಿಳೆಯರಿಗೆ ಉಚಿತ ಕಂಪ್ಯೂಟರ್ ತರಬೇತಿಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಜೆ.ಎಸ್.ಎಸ್ ಸಂಸ್ಥೆಯೊಂದಿಗೆ ಕೈಜೋಡಿಸಿ ವಿಕಲಚೇತನರ ಕ್ಷೇಮಾಭಿವೃದ್ಧಿಗೆ ಇನ್ನಷ್ಟು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಂಸ್ಥೆಯ ಜಯಂತ್ ಶ್ರೀನಿವಾಸ್ ಅವರು ಮಾತನಾಡಿ, ಹೊಸ ಕಂಪ್ಯೂಟರ್ ಲ್ಯಾಬ್‌ನ ಸದುಪಯೋಗ ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು ಮತ್ತು ಶುಭಾಶಯಗಳನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆ.ಎಸ್.ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಕೆ. ಮಹದೇವಸ್ವಾಮಿ ಅವರು, ಈ ಕಾಲೇಜು ಏಷ್ಯಾದಲ್ಲೇ ಪ್ರಥಮ ವಿಕಲಚೇತನರ ಪಾಲಿಟೆಕ್ನಿಕ್ ಕಾಲೇಜಿಯಾಗಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ ಎಂದು ಹೇಳಿದರು. ಸಮರ್ಥನಂ ಸಂಸ್ಥೆಯಿಂದ ದೊರೆತಿರುವ ಕಂಪ್ಯೂಟರ್ ಲ್ಯಾಬ್ ಅನ್ನು ಸಮರ್ಪಕವಾಗಿ ಬಳಸಿಕೊಳ್ಳುವುದಾಗಿ ತಿಳಿಸಿ, ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.

ಈ ಕಾರ್ಯಕ್ರಮದಲ್ಲಿ ಕಾವಿ ವಿಭಾಗದ ಮುಖ್ಯಸ್ಥೆ ವಿ. ಗೀತಾ, ಇ.ಎನ್. ಸಿ ವಿಭಾಗ ಮುಖ್ಯಸ್ಥೆ ಎಂ.ಕೋಮಲ, ಕಾಂಚನ, ಸುಮಾ, ಭಾಗ್ಯಶ್ರೀ ಶಂಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.





