ರೇಷ್ಮೆ ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ಯೋಜನೆ ಕೈಬಿಟ್ಟ ಸರ್ಕಾರಕ್ಕೆ ಅಭಿನಂದನೆ ಕನ್ನಡಪರ ಹೋರಾಟಗಾರ ಎಸ್.ಕೆ. ರಾಜೂಗೌಡ ಅಭಿಪ್ರಾಯ

ವರದಿ :- ನಾಗೇಂದ್ರ ಕುಮಾರ್
ಟಿ.ನರಸೀಪುರ, ಮಾ.09: ಪಟ್ಟಣದಲ್ಲಿರುವ ಪಾರಂಪರಿಕ ರೇಷ್ಮೆ ನೂಲು ತೆಗೆಯುವ ಕಾರ್ಖಾನೆಯ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವ ಸರ್ಕಾರದ ಪ್ರಸ್ತಾವನೆಯನ್ನು ಕೈಬಿಟ್ಟಿರುವುದಕ್ಕೆ ಕನ್ನಡಪರ ಹೋರಾಟಗಾರ ಎಸ್.ಕೆ. ರಾಜೂಗೌಡ ಸಂತೋಷ ವ್ಯಕ್ತಪಡಿಸಿ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿದ ಅವರು, ಹಲವು ವರ್ಷಗಳ ಇತಿಹಾಸ ಹೊಂದಿರುವ ಟಿ.ನರಸೀಪುರದ ರೇಷ್ಮೆ ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವ ಯೋಜನೆ ಕಾರ್ಖಾನೆಯ ಭವಿಷ್ಯ ಹಾಗೂ ಅಲ್ಲಿನ ಕಾರ್ಮಿಕರ ಜೀವನಕ್ಕೆ ಧಕ್ಕೆಯಾಗುವ ಸಾಧ್ಯತೆ ಇತ್ತು. ಇಂತಹ ಯೋಜನೆಯನ್ನು ರದ್ದುಗೊಳಿಸಿರುವ ಸರ್ಕಾರದ ನಿರ್ಧಾರವು ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.
ಪಾರಂಪರಿಕ ಕಾರ್ಖಾನೆಯ ಅವನತಿಗೆ ಕಾರಣವಾಗಬಹುದಾಗಿದ್ದ ಈ ಯೋಜನೆಯನ್ನು ಕೈಬಿಟ್ಟಿರುವುದರಿಂದ ಕಾರ್ಖಾನೆಯ ಉಳಿವು ಹಾಗೂ ಅಲ್ಲಿನ ನೌಕರರ ಉದ್ಯೋಗ ಭದ್ರತೆಗೆ ಆಶಾಕಿರಣ ಮೂಡಿದೆ. ಮುಖ್ಯಮಂತ್ರಿಗಳ ಕ್ಷೇತ್ರವಾದ ಟಿ.ನರಸೀಪುರದಲ್ಲಿರುವ ಸರ್ಕಾರಿ ಸ್ವಾಮ್ಯದ ಏಕೈಕ ರೇಷ್ಮೆ ಕಾರ್ಖಾನೆಯನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಮೈಸೂರು ಪ್ರದೇಶವು ರೇಷ್ಮೆ ಉದ್ಯಮಗಳ ಪರಂಪರೆಗೆ ಹೆಸರುವಾಸಿಯಾಗಿದ್ದು, ಈ ಕಾರ್ಖಾನೆ ಆ ಪರಂಪರೆಯ ಒಂದು ಪ್ರಮುಖ ಭಾಗವಾಗಿದೆ. ಇದೇ ಆವರಣದಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸುವ ಪ್ರಸ್ತಾವನೆಗೆ ಕಾರ್ಖಾನೆಯ ನೌಕರರು, ಕಾರ್ಮಿಕ ಸಂಘಟನೆಗಳು ಹಾಗೂ ಸಾರ್ವಜನಿಕ ವಲಯದಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಕಳೆದ ಕೆಲವು ದಿನಗಳಿಂದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಿರಂತರ ಪ್ರತಿಭಟನೆಗಳು ನಡೆದಿದ್ದವು.
ಈ ಹೋರಾಟಗಳ ಪರಿಣಾಮವಾಗಿ ಸರ್ಕಾರ ಒಳ್ಳೆಯ ತೀರ್ಮಾನ ಕೈಗೊಂಡು ಕ್ರೀಡಾಂಗಣ ನಿರ್ಮಾಣ ಯೋಜನೆಯನ್ನು ಕೈಬಿಟ್ಟಿರುವುದು ಹೋರಾಟಗಾರರ ಧ್ವನಿಗೆ ಸ್ಪಂದಿಸಿದಂತಾಗಿದೆ. ಜನರ ಭಾವನೆಗಳಿಗೆ ಗೌರವ ನೀಡಿರುವ ಸರ್ಕಾರದ ಈ ಕ್ರಮ ಮಾದರಿ ಹೆಜ್ಜೆಯಾಗಿದ್ದು ಸಂತೋಷ ತಂದಿದೆ ಎಂದು ರಾಜೂಗೌಡ ಹೇಳಿದರು.
ಇಂತಹ ಪಾರಂಪರಿಕ ಕೈಗಾರಿಕೆಗಳನ್ನು ಉಳಿಸಿ ಬೆಳೆಸುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ರೇಷ್ಮೆ ಉದ್ಯಮವನ್ನು ಮತ್ತಷ್ಟು ಅಭಿವೃದ್ಧಿಪಡಿಸುವತ್ತ ಸರ್ಕಾರ ಗಮನಹರಿಸಬೇಕು ಎಂದು ಅವರು ಮನವಿ ಮಾಡಿದರು.
ಐತಿಹಾಸಿಕ ರೇಷ್ಮೆ ಕಾರ್ಖಾನೆಯ ಅಭಿವೃದ್ಧಿಗೆ ಒತ್ತಾಯ
ಸುಮಾರು 114 ವರ್ಷಗಳ ಹಿಂದೆ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಸ್ಥಾಪನೆಯಾದ ಟಿ.ನರಸೀಪುರದ ಈ ರೇಷ್ಮೆ ಕಾರ್ಖಾನೆ ದೀರ್ಘಕಾಲದ ರೇಷ್ಮೆ ಉದ್ಯಮದ ಇತಿಹಾಸವನ್ನು ಹೊಂದಿದೆ. ಮೈಸೂರು ಪ್ರದೇಶದಲ್ಲಿ ರೇಷ್ಮೆ ಕೈಗಾರಿಕೆಯ ಬೆಳವಣಿಗೆಯಲ್ಲಿ ಈ ಕಾರ್ಖಾನೆಯ ಪಾತ್ರ ಮಹತ್ವದ್ದಾಗಿದೆ.
ಈ ಹಿನ್ನೆಲೆದಲ್ಲಿ, ಐತಿಹಾಸಿಕ ಮಹತ್ವ ಹೊಂದಿರುವ ಕಾರ್ಖಾನೆಯನ್ನು ಇರುವ ಸ್ಥಳದಲ್ಲಿಯೇ ಉಳಿಸಿಕೊಂಡು ನೂತನ ತಂತ್ರಜ್ಞಾನವನ್ನು ಬಳಸಿಕೊಂಡು ಅದನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಎಸ್.ಕೆ. ರಾಜೂಗೌಡ ಒತ್ತಾಯಿಸಿದ್ದಾರೆ.
ಇದಲ್ಲದೆ, ರೇಷ್ಮೆ ಉದ್ಯಮದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸ್ಮರಣಾರ್ಥವಾಗಿ ಕಾರ್ಖಾನೆ ಆವರಣದಲ್ಲಿ ಅವರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲು ಸರ್ಕಾರ ಮುಂದಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ.





