
ಮೈಸೂರು: ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ (ಮೈಮುಲ್) ವತಿಯಿಂದ ಆಲನಹಳ್ಳಿಯ ಒಕ್ಕೂಟದ ಸಭಾಂಗಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಭಕ್ತಿಪೂರ್ವಕವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮೈಮುಲ್ ಅಧ್ಯಕ್ಷ ಕೆ. ಈರೇಗೌಡ ಅವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಡಾ. ಅಂಬೇಡ್ಕರ್ ಒಬ್ಬ ವ್ಯಕ್ತಿ ಮಾತ್ರವಲ್ಲ, ದೇಶದ ಶಕ್ತಿಯಾಗಿದ್ದರು. ೩೨ ವಿಧವಾದ ಪದವಿಗಳನ್ನು ಪಡೆದ ಅಪರೂಪದ ಜ್ಞಾನಿ. ಅವರ ಜ್ಞಾನ ಸಂಪತ್ತು ಈ ದೇಶದ ಸಾಮಾಜಿಕ ಬದಲಾವಣೆಗೆ ದಿಕ್ಕು ತೋರಿಸಿತು,” ಎಂದು ಹೇಳಿದರು. ಅಂಬೇಡ್ಕರ್ ಯಾವುದೇ ಒಂದು ಜಾತಿಗೆ ಸೀಮಿತ ವ್ಯಕ್ತಿಯಲ್ಲ, ಅವರನ್ನು ಎಲ್ಲರೂ ಸಮಾನವಾಗಿ ಸ್ಮರಿಸಬೇಕು ಎಂದು ತಿಳಿಸಿದರು.
ಹಿಂದಿನ ಕಾಲದಲ್ಲಿ ಸಮಾಜದಲ್ಲಿ ಅಸಮಾನತೆ, ಶಿಕ್ಷಣದ ಕೊರತೆ ಹಾಗೂ ಅಧಿಕಾರದ ಏಕಾಧಿಪತ್ಯವಿತ್ತು. ಆದರೆ, ಅಂಬೇಡ್ಕರ್ ರಚಿಸಿದ ಸಂವಿಧಾನದ ಪರಿಣಾಮವಾಗಿ ಎಲ್ಲ ವರ್ಗದ ಜನರಿಗೆ ಸಮಾನ ಹಕ್ಕುಗಳು ಹಾಗೂ ಅವಕಾಶಗಳು ಲಭಿಸಿವೆ ಎಂದು ಅವರು ವಿವರಿಸಿದರು. ಅಂಬೇಡ್ಕರ್ ಹೆಚ್ಚು ಕಾಲ ಬದುಕಿದ್ದರೆ ದೇಶ ಇನ್ನಷ್ಟು ಉನ್ನತ ಮಟ್ಟ ತಲುಪುತ್ತಿತ್ತೇ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಎಚ್.ಡಿ.ಕೋಟೆ ತಾಲೂಕಿನಲ್ಲಿ ಹಿಂದೆ ವೀರಶೈವ ಹಾಗೂ ಒಕ್ಕಲಿಗ ಸಂಘಗಳು ಮಾತ್ರ ಹೆಚ್ಚು ಇದ್ದವು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸಂಘಟನೆಗಳ ಕೊರತೆ ಇತ್ತು. ಇದನ್ನು ಮನಗಂಡು ನೂರು ಸಂಘಗಳನ್ನು ರಚಿಸಿ, ಹೈನುಗಾರಿಕೆಯಲ್ಲಿ ಅವರನ್ನು ತೊಡಗಿಸಿ ಸಹಕಾರ ಸಂಘಗಳ ಲಾಭವನ್ನು ಪಡೆಯುವಂತಾಗಿದೆ ಎಂದು ತಿಳಿಸಿದರು. ಇದು ಅಂಬೇಡ್ಕರ್ ಅವರ ಚಿಂತನೆಯ ಪರಿಣಾಮ ಎಂದು ಹೇಳಿದರು.
ಮೈಮುಲ್ ನಿರ್ದೇಶಕ ಓಂ ಪ್ರಕಾಶ್ ಅವರು ಮಾತನಾಡಿ, “ಅಂಬೇಡ್ಕರ್ ದೇಶದ ಸಂವಿಧಾನ ರಚನೆಯಲ್ಲಿ ಮಹತ್ವದ ಪಾತ್ರವಹಿಸಿದ್ದು, ಎಲ್ಲರಿಗೂ ಸಂವಿಧಾನಬದ್ಧ ಹಕ್ಕುಗಳನ್ನು ಒದಗಿಸಿದ್ದಾರೆ. ಹಿಂದುಳಿದ ವರ್ಗಗಳು ಮುನ್ನಡೆಯಲು ಶಿಕ್ಷಣವೇ ಮುಖ್ಯ ಸಾಧನ,” ಎಂದು ಹೇಳಿದರು. ಜಯಂತಿಗಳನ್ನು ಆಚರಿಸುವುದಷ್ಟೇ ಅಲ್ಲ, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ ಎಂದು ತಿಳಿಸಿದರು.
ನಿರ್ದೇಶಕ ಬಿ.ಎನ್. ಸದಾನಂದ ಅವರು, “ಅಂಬೇಡ್ಕರ್ ಸಮ ಸಮಾಜದ ಕನಸು ಕಂಡ ಮಹಾನ್ ವ್ಯಕ್ತಿ. ಜಾತಿ ವ್ಯವಸ್ಥೆ ಇನ್ನೂ ಕೆಲವು ಕಡೆಗಳಲ್ಲಿ ಬೇರೂರಿರುವುದು ವಿಷಾದನೀಯ. ಆದರೆ ಸಂವಿಧಾನದ ಮೂಲಕ ದೇಶಕ್ಕೆ ಸಮಾನತೆಯ ಮಾರ್ಗ ತೋರಿಸಿದ್ದಾರೆ. ನಾವು ವಿಶ್ವಮಾನವರಾಗಿ ಬೆಳೆಯಬೇಕು,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ನಾಯ್ಕ್, ವಿವಿಧ ವಿಭಾಗಗಳ ವ್ಯವಸ್ಥಾಪಕರು, ಉಪ ವ್ಯವಸ್ಥಾಪಕರು, ನೌಕರ ಸಂಘದ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದಲ್ಲಿ ಗಮನ ಸೆಳೆದ 11 ವರ್ಷದ ಪುಟ್ಟ ಬಾಲಕ

ಕಾರ್ಯಕ್ರಮದಲ್ಲಿ 11 ವರ್ಷದ ದೇವನಶ್ ಎಂಬ ಬಾಲಕ ಮೂರು ನಿಮಿಷಗಳ ಕಾಲ ಅಂಬೇಡ್ಕರ್ ಅವರ ಜೀವನ, ಸಂವಿಧಾನ ರಚನೆ ಮತ್ತು ಶಿಕ್ಷಣದ ಮಹತ್ವ ಕುರಿತು ನಿರಂತರವಾಗಿ ಇಂಗ್ಲಿಷ್‌ನಲ್ಲಿ ಭಾಷಣ ಮಾಡಿ ಎಲ್ಲರ ಗಮನ ಸೆಳೆದನು. ಅವನ ಪ್ರತಿಭೆಗೆ ಮೆಚ್ಚಿದ ಉಪಸ್ಥಿತರು ವಿಶೇಷ ಬಹುಮಾನ ನೀಡಿ ಪ್ರೋತ್ಸಾಹಿಸಿದರು.
“ಶಿಕ್ಷಣವೇ ಬದಲಾವಣೆಯ ಶಕ್ತಿ”
ಆಡಳಿತ ವಿಭಾಗದ ಪ್ರಭಾರ ವ್ಯವಸ್ಥಾಪಕಿ ಸೌಮ್ಯ ಅವರು ಮಾತನಾಡಿ, “ಹಿಂದಿನ ಶತಮಾನಗಳಲ್ಲಿ ಜಾತಿ ತಾರತಮ್ಯವನ್ನು ಕೇಳಿದ್ದೇವೆ. ಆದರೆ ಇಂದಿಗೂ ಕೆಲವು ಗ್ರಾಮೀಣ ಭಾಗಗಳಲ್ಲಿ ಅದು ಕಂಡು ಬರುತ್ತಿತ್ತು. ಈಗ ಶಿಕ್ಷಣ, ಸಂಘಟನೆ ಹಾಗೂ ಹೋರಾಟದಿಂದ ಈ ಸ್ಥಿತಿ ಬದಲಾಗುತ್ತಿದೆ. ಮಕ್ಕಳನ್ನು ಜಾತ್ಯಾತೀತ ಮನೋಭಾವದಿಂದ ಬೆಳೆಸಬೇಕು. ಅವರಿಗೆ ಸಂವಿಧಾನ ಹಾಗೂ ಶಿಕ್ಷಣದ ಮಹತ್ವ ತಿಳಿಸಬೇಕು,” ಎಂದು ಹೇಳಿದರು.
ಈ ಕಾರ್ಯಕ್ರಮವು ಕೇವಲ ಜಯಂತಿ ಆಚರಣೆಗೆ ಸೀಮಿತವಾಗದೇ, ಅಂಬೇಡ್ಕರ್ ಅವರ ಚಿಂತನೆಗಳನ್ನು ಸಮಾಜದಲ್ಲಿ ಬಿತ್ತುವ ಪ್ರಯತ್ನವಾಗಿ ಪರಿಣಮಿಸಿತು.





