HOMENews

ಹಳೆಯ ಪದ್ಧತಿ ಮುಂದುವರಿಸಿ, ತಾಂತ್ರಿಕ ದೋಷ ಸರಿಪಡಿಸಿ: ಆಸ್ತಿ ನೋಂದಣಿಗೆ ಉದ್ಯಮಿಗಳ ಆಗ್ರಹ

ಮೈಸೂರು: ಸರ್ಕಾರವು ಆಸ್ತಿ ನೋಂದಣಿ, ಖಾತೆ ಸೇರಿದಂತೆ ವಿವಿಧ ಸೇವೆಗಳ ಡಿಜಿಟಲೀಕರಣಕ್ಕೆ ಮುಂದಾಗಿರುವ ಕ್ರಮವನ್ನು ಸ್ವಾಗತಿಸಬಹುದಾದದ್ದೇ ಆಗಿದ್ದರೂ, ತಾಂತ್ರಿಕ ದೋಷಗಳು ಸಾರ್ವಜನಿಕರು ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ತೊಂದರೆ ಉಂಟುಮಾಡುತ್ತಿರುವುದರಿಂದ ಅವುಗಳನ್ನು ತಕ್ಷಣ ಸರಿಪಡಿಸಬೇಕು ಎಂದು ಕ್ರೆಡೈ ಮೈಸೂರು ಅಧ್ಯಕ್ಷ ಹರೀಶ್ ಶೆಣೈ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ:- ಮೈಸೂರಿನಲ್ಲಿ “ಗಾಂಪರ ಗುಂಪು” ಕನ್ನಡ ನಾಟಕದ 17ನೇ ಯಶಸ್ವಿ ಪ್ರದರ್ಶನ

ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರ  ಇ-ಖಾತೆ ಅನುಷ್ಠಾನದ ವೇಳೆ ಹಲವು ತಾಂತ್ರಿಕ ಅಡಚಣೆಗಳು ಎದುರಾಗುತ್ತಿದ್ದು, ಇದರಿಂದ ಆಸ್ತಿ ನೋಂದಣಿ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಹೇಳಿದರು. ನೋಂದಣಿಗಾಗಿ ಮಾಡಿಸಲು ಸಾರ್ವಜನಿಕರು ಕಚೇರಿಗೆ ಬಂದಾಗ ಅಧಿಕಾರಿಗಳು ಸರ್ವರ್ ಸಮಸ್ಯೆ ಎಂಬ ಸಬೂಬು ನೀಡಿ ಮತ್ತೊಂದು ದಿನ ಬರುವಂತೆ  ಹೇಳಲಾಗುತ್ತದೆ. ಮತ್ತೆ ಇನ್ನೊಂದು ದಿನ ಬಂದರೆ ನಂತರವೂ ಇದೇ ಸಮಸ್ಯೆ ಮುಂದುವರಿಯುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಇದರಿಂದ ನಾಗರಿಕರು ಹಾಗೂ ನಿರ್ಮಾಣ ಕ್ಷೇತ್ರದ ಉದ್ಯಮಿಗಳು ಆರ್ಥಿಕ ಹಾಗೂ ಆಡಳಿತಾತ್ಮಕ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಸ್ಥಳೀಯ ದತ್ತಾಂಶಗಳ ಕೊರತೆಯಿಂದ ಸಾವಿರಾರು ಅರ್ಜಿಗಳು ಬಾಕಿ ಉಳಿದಿರುವುದು ಇಲ್ಲಿನ ಪರಿಸ್ಥಿತಿಯನ್ನು ಮತ್ತಷ್ಟು ಘಾಸಿಗೊಳಿಸಿದೆ. ಹೀಗಾಗಿ ತಾಂತ್ರಿಕ ದೋಷಗಳನ್ನು ತಕ್ಷಣ ಪರಿಹರಿಸುವುದು ಅಗತ್ಯವಿದೆ. ಜೊತೆಗೆ ಇ-ಖಾತೆ ನೀಡಲು ಸ್ಪಷ್ಟವಾದ ಕಾಲಮಿತಿ ನಿಗದಿಪಡಿಸಬೇಕು. ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಸುಗಮವಾಗುವವರೆಗೆ ಹಳೆಯ ಪದ್ಧತಿಯನ್ನು ಮುಂದುವರಿಸುವ ಬಗ್ಗೆ ಸರ್ಕಾರ ಪರಿಗಣಿಸಬೇಕು ಎಂದು ಅವರು ಸಲಹೆ ನೀಡಿದರು.

ಇದರೊಂದಿಗೆ, ಹೊಸ ಬಡಾವಣೆಗಳಿಗೆ ದರ ನಿಗದಿ ಮಾಡಲು ಇರುವ ಕೇಂದ್ರ ಮೌಲ್ಯಮಾಪನ ಸಮಿತಿಯ ನಿಯಮವನ್ನು ಹಳೆಯ ಬಡಾವಣೆಗಳಿಗೂ ಅನ್ವಯಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಇದು ವೈಜ್ಞಾನಿಕವಾಗಿಯೂ ಸಮಂಜಸವಾಗಿಲ್ಲ ಮತ್ತು ಆಡಳಿತಾತ್ಮಕ ವಿಳಂಬ, ಭ್ರಷ್ಟಾಚಾರಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಹೀಗಾಗಿ ಹಳೆಯ ಬಡಾವಣೆಗಳನ್ನು ಈ ಸಮಿತಿಯ ವ್ಯಾಪ್ತಿಯಿಂದ ಕೈಬಿಟ್ಟು, ಉಪ ನೋಂದಣಾಧಿಕಾರಿಗಳ ಮಾರ್ಗಸೂಚಿ ದರದ ಆಧಾರದ ಮೇಲೆ ಸರಳವಾಗಿ ನೋಂದಣಿ ಪ್ರಕ್ರಿಯೆ ನಡೆಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ:- ಪ್ರೇಮಿಗಳ ದಿನ ದುರಂತ: ಪತ್ನಿಯನ್ನು ಕೊಂದು ದಾರಿ ತಪ್ಪಿಸಲು ಯತ್ನಿಸಿದ ಪತಿ

ಈ ವೇಳೆ ಮಾತನಾಡಿದ ಉದ್ಯಮಿ ಶ್ರೀಹರಿ, ಪ್ರತಿ ವ್ಯವಹಾರಕ್ಕೂ ಜಿಪಿಎ ನೋಂದಣಿ ಸಂದರ್ಭದಲ್ಲಿ ಜೀವಂತ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಿರುವ ನಿಯಮವು ಹಲವರಿಗೆ ಸಮಸ್ಯೆ ಉಂಟುಮಾಡುತ್ತಿದೆ ಎಂದು ತಿಳಿಸಿದರು. ವಿಶೇಷವಾಗಿ ಹಿರಿಯ ನಾಗರಿಕರು ಹಾಗೂ ಅನಿವಾಸಿ ಭಾರತೀಯರಿಗೆ ಇದು ಹೆಚ್ಚಿನ ತೊಂದರೆ ತಂದಿದೆ. ಹಲವರು ತಮ್ಮ ಪರವಾಗಿ ವ್ಯವಹಾರ ನಡೆಸಲು ಜಿಪಿಎಗೆ ಅವಲಂಬಿತರಾಗುತ್ತಾರೆ. ಆದರೆ ಪ್ರತೀ ವ್ಯವಹಾರಕ್ಕೂ ಹೊಸದಾಗಿ ಜೀವಂತ ಪ್ರಮಾಣಪತ್ರ ಸಲ್ಲಿಸಬೇಕೆಂಬ ನಿಯಮ ಅನಾವಶ್ಯಕ ತೊಂದರೆಯನ್ನುಂಟುಮಾಡುತ್ತಿದೆ ಎಂದು ಹೇಳಿದರು.

ಈ ನಿಯಮವನ್ನು ಪುನರ್ಪರಿಶೀಲಿಸಿ ಸಡಿಲಿಕೆ ನೀಡಬೇಕು ಎಂಬುದು ಅವರ ಮನವಿಯಾಗಿದೆ. ಒಟ್ಟಾರೆ, ಡಿಜಿಟಲೀಕರಣದ ಪ್ರಯತ್ನಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ತಾಂತ್ರಿಕ ಮೂಲಸೌಕರ್ಯ ಬಲಪಡಿಸುವುದು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ನಿಯಮಾವಳಿಗಳನ್ನು ಪರಿಷ್ಕರಿಸುವುದು ಅಗತ್ಯ ಎಂದು ಉದ್ಯಮಿಗಳು ಅಭಿಪ್ರಾಯಪಟ್ಟರು.

ಈ ವಿಚಾರಗಳಿಗೆ ಸರ್ಕಾರ ಸೂಕ್ತ ಗಮನಹರಿಸಿ ಶೀಘ್ರ ಪರಿಹಾರ ಕೈಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.

Leave a Response