HOMENewsPolitical

“ರೈತರ ಪಾಲಿಗೆ ನಿರಾಶಾದಾಯಕ ಬಜೆಟ್”– ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್

ಮೈಸೂರು:- ರಾಜ್ಯ ಸರ್ಕಾರ ಮಂಡಿಸಿರುವ ಇತ್ತೀಚಿನ ಬಜೆಟ್ ಕುರಿತು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಬಜೆಟ್ ರೈತರ ಪಾಲಿಗೆ ನಿರಾಶೆ ಮೂಡಿಸುವಂತದ್ದಾಗಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ನಲ್ಲಿ ಕೃಷಿ ಕ್ಷೇತ್ರಕ್ಕೆ ಸಮರ್ಪಕ ಪ್ರಾಧಾನ್ಯತೆ ನೀಡಲಾಗಿಲ್ಲ. ರೈತರ ಸಂಕಷ್ಟಗಳಿಗೆ ತಕ್ಕಂತೆ ಪರಿಣಾಮಕಾರಿ ಯೋಜನೆಗಳನ್ನು ರೂಪಿಸದೆ, ನೀರಿನಲ್ಲಿ ಬೆರಳು ಅದ್ದಿ ಚೀಪಿದಂತೆ ಸ್ವಲ್ಪ ಮಟ್ಟಿನ ಘೋಷಣೆಗಳ ಮೂಲಕ ರೈತರನ್ನು ಸಮಾಧಾನಪಡಿಸಲು ಪ್ರಯತ್ನಿಸಿರುವಂತೆ ಕಾಣುತ್ತದೆ ಎಂದು ಅವರು ಟೀಕಿಸಿದರು.

ಬಜೆಟ್ನಲ್ಲಿ ಉದ್ಯಮಿಗಳು ಹಾಗೂ ಬಂಡವಾಳಶಾಹಿಗಳ ಹಿತಾಸಕ್ತಿಗಳಿಗೆ ಹೆಚ್ಚು ಒತ್ತು ನೀಡಲಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ದೇವರಾಜ್, ರೈತರ ಜೀವನಮಟ್ಟ ಸುಧಾರಿಸುವ ಮಹತ್ವದ ವಿಚಾರಗಳಿಗೆ ಸ್ಪಷ್ಟ ಉತ್ತರ ಸಿಗಲಿಲ್ಲ ಎಂದು ಹೇಳಿದರು.
ಕೃಷಿ ಕಾಯ್ದೆ ತಿದ್ದುಪಡಿ ಕೈಬಿಡುವ ಕುರಿತು ಸರ್ಕಾರ ಯಾವುದೇ ನಿರ್ಧಾರ ಘೋಷಿಸಿಲ್ಲ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಖಾತರಿ ಕಾನೂನು ಜಾರಿಗೆ ತರುವ ಬಗ್ಗೆ ಸಹ ಸರ್ಕಾರ ಸ್ಪಷ್ಟ ನಿಲುವು ಪ್ರಕಟಿಸಿಲ್ಲ. ರೈತರಿಗೆ ಸ್ಥಿರ ಆದಾಯದ ಭದ್ರತೆ ನೀಡಲು ಈ ರೀತಿಯ ಕಾನೂನು ಅತ್ಯಂತ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇದಲ್ಲದೆ, ರಾಜ್ಯದಲ್ಲಿನ ರೈತರ ಮೇಲೆ ಇರುವ ಕೃಷಿ ಸಾಲದ ಭಾರವನ್ನು ಕಡಿಮೆ ಮಾಡಲು ಸಂಪೂರ್ಣ ಸಾಲ ಮನ್ನಾ ಮಾಡುವ ಕುರಿತು ಬಜೆಟ್ನಲ್ಲಿ ಯಾವುದೇ ಕ್ರಮ ಘೋಷಿಸಲಾಗಿಲ್ಲ. ರೈತರ ಸಂಕಷ್ಟವನ್ನು ಮನಗಂಡು ಸರ್ಕಾರ ಸಂಪೂರ್ಣ ಸಾಲಮನ್ನಾ ಜಾರಿಗೆ ತರಬೇಕಾಗಿತ್ತು ಎಂದು ಅವರು ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ನಿವಾರಣೆಗಾಗಿ ಕೆರೆ-ಕಟ್ಟೆಗಳ ಒತ್ತುವರಿಯನ್ನು ತೆರವುಗೊಳಿಸಿ, ಅವುಗಳಲ್ಲಿ ಸಂಗ್ರಹವಾಗಿರುವ ಹೂಳನ್ನು ತೆಗೆದು ಆ ಮಣ್ಣನ್ನು ರೈತರ ಜಮೀನುಗಳಿಗೆ ಒದಗಿಸುವ ಮೂಲಕ ಮಣ್ಣಿನ ಫಲವತ್ತತೆ ಹೆಚ್ಚಿಸುವ ಕಾರ್ಯಯೋಜನೆ ರೂಪಿಸಬೇಕಾಗಿತ್ತು. ಇದರ ಜೊತೆಗೆ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಮಗ್ರ ನೀರಾವರಿ ಯೋಜನೆಗಳನ್ನು ಜಾರಿಗೆ ತರಬೇಕಾಗಿತ್ತು ಎಂದು ಅವರು ಒತ್ತಾಯಿಸಿದರು.

ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ಮಾತನಾಡಿದ ದೇವರಾಜ್, ಕಬ್ಬಿನ ಎಫ್.ಆರ್.ಪಿ (FRP) ದರವನ್ನು ರೈತರ ಹೊಲದಲ್ಲಿನ ದರ ಎಂದು ನಿಗದಿ ಮಾಡುವ ಮಾನದಂಡ ಜಾರಿಗೆ ತರಬೇಕು. ಸಕ್ಕರೆ ಇಳುವರಿ 9.5 ಪ್ರಮಾಣಕ್ಕೆ ಎಫ್.ಆರ್.ಪಿ ದರವನ್ನು 3,500 ರೂಪಾಯಿ ಎಂದು ನಿಗದಿ ಮಾಡಬೇಕಾಗಿತ್ತು ಎಂದು ಹೇಳಿದರು.
ಬೆಳೆ ವಿಮೆ ವ್ಯವಸ್ಥೆಯಲ್ಲಿಯೂ ಮಹತ್ವದ ಬದಲಾವಣೆ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು. ಫಸಲ್ ಭೀಮಾ ಯೋಜನೆಯಲ್ಲಿ ಈಗಿರುವ ವ್ಯವಸ್ಥೆಯಿಂದ ಅನೇಕ ರೈತರಿಗೆ ಸರಿಯಾದ ಪರಿಹಾರ ಸಿಗುತ್ತಿಲ್ಲ. ಆದ್ದರಿಂದ ಪ್ರತಿ ರೈತನ ಹೊಲದ ಆಧಾರದ ಮೇಲೆ ಬೆಳೆ ನಷ್ಟ ಮೌಲ್ಯಮಾಪನ ಮಾಡಿ ಪರಿಹಾರ ನೀಡುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಅವರು ಹೇಳಿದರು.

ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಸಂಪರ್ಕ ಸಂಬಂಧಿಸಿದ ಅಕ್ರಮ-ಸಕ್ರಮ ಯೋಜನೆಯನ್ನು ಮುಂದುವರಿಸುವ ಬಗ್ಗೆ ಬಜೆಟ್ನಲ್ಲಿ ಯಾವುದೇ ಸ್ಪಷ್ಟತೆ ನೀಡಿಲ್ಲ. ಇದು ಸಾವಿರಾರು ರೈತರನ್ನು ಸಂಕಷ್ಟಕ್ಕೆ ತಳ್ಳುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ದಲ್ಲಾಳಿಗಳ ಪ್ರಭಾವ ಹೆಚ್ಚುತ್ತಿರುವುದನ್ನು ಅವರು ಗಂಭೀರವಾಗಿ ಉಲ್ಲೇಖಿಸಿದರು. ಹಲವಾರು ಮಾರುಕಟ್ಟೆಗಳಲ್ಲಿ ದಲ್ಲಾಳಿಗಳು ರೈತರಿಂದ 10 ಶೇಕಡಾ ಕಮಿಷನ್ ವಸೂಲಿ ಮಾಡುತ್ತಿರುವುದು ಸಾಮಾನ್ಯವಾಗಿದೆ. ಇದನ್ನು ತಡೆಯಲು ಸರ್ಕಾರ ಕಠಿಣ ಕಾನೂನು ಕ್ರಮ ಜಾರಿಗೆ ತರಬೇಕಾಗಿತ್ತು ಎಂದು ಅವರು ಹೇಳಿದರು.
ರೈತರ ಕಲ್ಯಾಣಕ್ಕಾಗಿ ತೆಲಂಗಾಣ ಮಾದರಿಯಲ್ಲಿ 60 ವರ್ಷ ಮೇಲ್ಪಟ್ಟ ರೈತರಿಗೆ ತಿಂಗಳಿಗೆ 10,000 ರೂಪಾಯಿ ಪಿಂಚಣಿ ನೀಡುವ ಯೋಜನೆ ಜಾರಿಗೆ ತರಬೇಕೆಂದು ಅವರು ಒತ್ತಾಯಿಸಿದರು. ಇದು ವಯೋವೃದ್ಧ ರೈತರಿಗೆ ಆರ್ಥಿಕ ಭದ್ರತೆ ನೀಡುವ ಪ್ರಮುಖ ಕ್ರಮವಾಗುತ್ತದೆ ಎಂದು ಹೇಳಿದರು.
ಇದಲ್ಲದೆ, ರೈತರ ಕುಟುಂಬಗಳ ಸಾಮಾಜಿಕ ಸಮಸ್ಯೆಗಳತ್ತ ಗಮನ ಹರಿಸುವ ಅಗತ್ಯವಿದೆ ಎಂದು ದೇವರಾಜ್ ಅಭಿಪ್ರಾಯಪಟ್ಟರು. ರೈತನ ಮಗನೊಂದಿಗೆ ಮದುವೆಯಾಗುವ ಹೆಣ್ಣು ಮಕ್ಕಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇಕಡಾ 25ರಷ್ಟು ಮೀಸಲಾತಿ ನೀಡುವ ನೀತಿ ಜಾರಿಗೆ ತರಬೇಕು ಎಂದು ಅವರು ಸಲಹೆ ನೀಡಿದರು.
ರೈತರ ಕೃಷಿ ಸಾಲ ವಸೂಲಾತಿಗಾಗಿ ಜಮೀನು ವಶಪಡಿಸಿಕೊಳ್ಳಲು ಅವಕಾಶ ನೀಡುವ ಸರ್ಪೈಸಿ ಕಾಯ್ದೆಯನ್ನು (SARFAESI Act) ರದ್ದುಪಡಿಸುವ ಬಗ್ಗೆ ಸಹ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಟೀಕಿಸಿದರು.
ಇದಲ್ಲದೆ, ಮಾರುಕಟ್ಟೆಯಲ್ಲಿ ನಕಲಿ ಬಿತ್ತನೆ ಬೀಜ, ನಕಲಿ ರಸಗೊಬ್ಬರ ಹಾಗೂ ನಕಲಿ ಕೀಟನಾಶಕಗಳನ್ನು ಮಾರಾಟ ಮಾಡುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇಂತಹ ಅಂಗಡಿಗಳ ಮಾಲೀಕರ ವಿರುದ್ಧ ಕಠಿಣ ಜೈಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರಬೇಕೆಂದು ಅವರು ಒತ್ತಾಯಿಸಿದರು.
ಒಟ್ಟಾರೆ ಈ ಬಜೆಟ್ ರೈತರ ಸಂಕಷ್ಟಗಳಿಗೆ ಸಮರ್ಪಕ ಪರಿಹಾರ ನೀಡದ ನಿರಾಶಾದಾಯಕ ಬಜೆಟ್ ಆಗಿದ್ದು, ಕೃಷಿ ಕ್ಷೇತ್ರವನ್ನು ಬಲಪಡಿಸುವ ದೃಢ ಕ್ರಮಗಳನ್ನು ಸರ್ಕಾರ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಆಗ್ರಹಿಸಿದರು.

Leave a Reply