HOMENews

ಜ್ಞಾನಕ್ಕೆ ಶಿಕ್ಷಣ, ಉದ್ಯೋಗಕ್ಕೆ ಕೌಶಲ್ಯ ಅಗತ್ಯ: ರಾಜ್ಯ ಶಿಕ್ಷಣ ನೀತಿ ಕಾರ್ಯಾಗಾರದಲ್ಲಿ ಪ್ರೊ. ಎನ್.ಕೆ. ಲೋಕನಾಥ್ ಅಭಿಮತ

ಮೈಸೂರು, ಫೆ.04:- ಇಂದಿನ ಬದಲಾಗುತ್ತಿರುವ ಜ್ಞಾನಾಧಾರಿತ ಹಾಗೂ ತಂತ್ರಜ್ಞಾನ ಚಾಲಿತ ಯುಗದಲ್ಲಿ ಶಿಕ್ಷಣವು ಕೇವಲ ಪಠ್ಯಪುಸ್ತಕಗಳಲ್ಲೇ ಸೀಮಿತವಾಗದೆ, ವಿದ್ಯಾರ್ಥಿಗಳಲ್ಲಿ ಕೌಶಲ್ಯ, ಮೌಲ್ಯ ಮತ್ತು practically ಉಪಯೋಗವಾಗುವ ಜ್ಞಾನವನ್ನು ಬೆಳೆಸುವತ್ತ ಕೇಂದ್ರೀಕೃತವಾಗಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಮಾನ್ಯ ಉಪ ಕುಲಪತಿಗಳಾದ ಪ್ರೊ. ಎನ್.ಕೆ. ಲೋಕನಾಥ್ ಅವರು ಹೇಳಿದರು.

ನಗರದ ಕುವೆಂಪುನಗರದಲ್ಲಿರುವ ಬಾಸುದೇವ ಸೋಮಾನಿ ಕಾಲೇಜು ಹಾಗೂ ಮೈಸೂರು ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ಅಧ್ಯಾಪಕರ ಸಂಘದ ಸಹಯೋಗದಲ್ಲಿ  “ರಾಜ್ಯ ಶಿಕ್ಷಣ ನೀತಿ–2024–25” ಎಂಬ ವಿಷಯದ ಕುರಿತಂತೆ ಆಯೋಜಿಸಲಾಗಿದ್ದ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ನೀತಿಯಲ್ಲಿ ಬದಲಾವಣೆ ತರಬೇಕಾದರೆ ಅದಕ್ಕೆ ಸೂಕ್ತ ಪೂರ್ವ ತಯಾರಿ ಅತ್ಯಂತ ಅಗತ್ಯ ಎಂದು ಒತ್ತಿ ಹೇಳಿದ ಪ್ರೊ. ಲೋಕನಾಥ್, ಇಂದಿನ ವಿದ್ಯಾರ್ಥಿಗಳ ಆಸಕ್ತಿ, ಜೀವನಶೈಲಿ ಹಾಗೂ ಉದ್ಯೋಗದ ಬೇಡಿಕೆಗಳನ್ನು ಮನಗಂಡು ಪಠ್ಯಕ್ರಮವನ್ನು ರೂಪಿಸಬೇಕಿದೆ ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ಅರ್ಥಶಾಸ್ತ್ರ ವಿಷಯದತ್ತ ವಿದ್ಯಾರ್ಥಿಗಳ ಆಸಕ್ತಿ ಕುಸಿಯುತ್ತಿರುವುದು ಆತಂಕಕಾರಿ ಸಂಗತಿ. ಆದರೆ ಸರ್ಕಾರದ ಯೋಜನೆಗಳು, ಆರ್ಥಿಕ ನೀತಿಗಳು, ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಮರ್ಥವಾಗಿ ಅರ್ಥೈಸಿಕೊಳ್ಳಲು ಅರ್ಥಶಾಸ್ತ್ರ ಅಧ್ಯಯನ ಬಹಳ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕೃತಕ ಬುದ್ಧಿಮತ್ತೆ, ಡೇಟಾ ವಿಶ್ಲೇಷಣೆ, ತಂತ್ರಜ್ಞಾನ ಆಧಾರಿತ ವಿಷಯಗಳನ್ನು ಪಠ್ಯಕ್ರಮದಲ್ಲಿ ಅಳವಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಉದ್ಯೋಗಕ್ಕೆ ಅನುಕೂಲವಾಗುವ ಶಿಕ್ಷಣ ನೀಡಬೇಕು ಎಂದು ಅವರು ಸಲಹೆ ನೀಡಿದರು. ಕಂಪ್ಯೂಟರ್ ಜ್ಞಾನ ಇಂದು ಆಯ್ಕೆಯಲ್ಲ, ಅನಿವಾರ್ಯವಾಗಿದೆ. ಶಿಕ್ಷಣವು ಜ್ಞಾನ ಸಂಪಾದನೆಗೆ ಬೇಕಾದರೆ, ಕೌಶಲ್ಯವು ಉದ್ಯೋಗ ಗಳಿಸಲು ಅಗತ್ಯವಾಗಿದೆ. ಹೀಗಾಗಿ ಪಠ್ಯಕ್ರಮವು ವಿದ್ಯಾರ್ಥಿಗಳಲ್ಲಿ ಜ್ಞಾನ, ಮೌಲ್ಯ ಹಾಗೂ ಕೌಶಲ್ಯಗಳನ್ನು ಸಮತೋಲನವಾಗಿ ಬೆಳೆಸುವಂತಿರಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮೈಸೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗದ ಅಧ್ಯಾಪಕರೂ ಹಾಗೂ ಮುಖ್ಯಸ್ಥರಾದ ಡಾ. ನವಿತಾ ತಿಮ್ಮಯ್ಯ ಅವರು, ಅರ್ಥಶಾಸ್ತ್ರ ಅಧ್ಯಯನವು ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಸಾಮರ್ಥ್ಯ, ಸ್ಥಿರತೆ ಹಾಗೂ ವಿಶ್ಲೇಷಣಾ ಕೌಶಲ್ಯವನ್ನು ಬೆಳೆಸುತ್ತದೆ ಎಂದು ತಿಳಿಸಿದರು. ದೇಶದ ಆರ್ಥಿಕ ನೀತಿ ರೂಪಿಸುವಲ್ಲಿ ಅರ್ಥಶಾಸ್ತ್ರ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಸಮಾಜ ಮತ್ತು ಆರ್ಥಿಕ ವ್ಯವಸ್ಥೆಯನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳಲು ಈ ವಿಷಯ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಕಚೇರಿ ಮೈಸೂರು ಜಂಟಿ ನಿರ್ದೇಶಕರಾದ ಡಾ. ಪ್ರತಿಮ ಡಿ.ಎಸ್. ಅವರು ಮಾತನಾಡಿ, ಪಠ್ಯಕ್ರಮವನ್ನು ವಿದ್ಯಾರ್ಥಿಗಳ ಬೌದ್ಧಿಕ ಮಟ್ಟಕ್ಕೆ ಅನುಗುಣವಾಗಿ ರೂಪಿಸಬೇಕೆ ಹೊರತು, ಶಿಕ್ಷಕರ ಮೇಲೆ ಅನಗತ್ಯ ಕಾರ್ಯಭಾರ ಹೆಚ್ಚಿಸುವ ಉದ್ದೇಶದಿಂದಲ್ಲ ಎಂದು ಸ್ಪಷ್ಟಪಡಿಸಿದರು. ತರಗತಿಗಳಲ್ಲಿ ದೇಶದ ಆರ್ಥಿಕ ಪ್ರಗತಿ, ಸರ್ಕಾರದ ಯೋಜನೆಗಳು ಹಾಗೂ ಸಾಮಾಜಿಕ ಅಭಿವೃದ್ಧಿ ವಿಷಯಗಳ ಕುರಿತು ಚರ್ಚೆ ನಡೆಯಬೇಕು. ಶಿಕ್ಷಕರು ಕೇವಲ ಪಾಠ ಹೇಳುವವರಾಗಿರದೆ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಮಾರ್ಗದರ್ಶಕರಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದ ಮತ್ತೊಬ್ಬ ಮುಖ್ಯ ಅತಿಥಿಗಳಾದ ಡಾ. ಎಂ. ಪುಟ್ಟಸ್ವಾಮಿ, ಅಧ್ಯಕ್ಷರು ಹಾಗೂ ಮ್ಯಾನೇಜಿಂಗ್ ಟ್ರಸ್ಟಿ, ದಿ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಷನ್ ಟ್ರಸ್ಟ್ ಅವರು ಮಾತನಾಡಿ, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ಉದ್ಯೋಗ ಮಾರುಕಟ್ಟೆಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಪಠ್ಯಕ್ರಮ ರೂಪಿಸಿದರೆ ಮಾತ್ರ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಲಾಭವಾಗಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗದ ಅಧ್ಯಾಪಕರಾದ ಡಾ. ಎಂ. ಮಹೇಶ್ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಸುದೇವ ಸೋಮಾನಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ. ಮಹದೇವಸ್ವಾಮಿ ಅವರು ಮಾತನಾಡಿ, ಇಂದಿನ ಶಿಕ್ಷಣವು ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ಸಿದ್ಧಗೊಳಿಸುವ ಜೊತೆಗೆ ಸಮಾಜಮುಖಿ ಚಿಂತನೆ ಬೆಳೆಸುವಂತಿರಬೇಕು. ಕೌಶಲ್ಯಾಧಾರಿತ ಶಿಕ್ಷಣ ನೀಡುವ ಪಠ್ಯಕ್ರಮ ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ಅಧ್ಯಾಪಕರ ಸಂಘದ ಅಧ್ಯಕ್ಷರಾದ ಡಾ. ಟಿ. ರಮೇಶ್ ಅವರು ಉಪಸ್ಥಿತರಿದ್ದು, ಕಾರ್ಯಾಗಾರದ ಉದ್ದೇಶ ಹಾಗೂ ಮಹತ್ವದ ಬಗ್ಗೆ ಮಾತನಾಡಿದರು. ಸಂಘದ ಪದಾಧಿಕಾರಿಗಳು, ಬಾಸುದೇವ ಸೋಮಾನಿ ಕಾಲೇಜಿನ ಬೋಧಕ ವೃಂದ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಾಗಾರವು ಸಂವಾದಾತ್ಮಕವಾಗಿ ನಡೆಯುತ್ತಾ, ರಾಜ್ಯ ಶಿಕ್ಷಣ ನೀತಿ–2024–25ರ ವಿವಿಧ ಅಂಶಗಳ ಕುರಿತು ಚರ್ಚೆ, ಅಭಿಪ್ರಾಯ ವಿನಿಮಯ ಮತ್ತು ಸಲಹೆಗಳೊಂದಿಗೆ ಯಶಸ್ವಿಯಾಗಿ ಸಂಪನ್ನವಾಯಿತು. ಶಿಕ್ಷಣ ವ್ಯವಸ್ಥೆಯನ್ನು ಹೆಚ್ಚು ಪ್ರಾಯೋಗಿಕ, ಉದ್ಯೋಗಮುಖಿ ಹಾಗೂ ವಿದ್ಯಾರ್ಥಿ ಕೇಂದ್ರಿತವಾಗಿಸುವತ್ತ ಈ ಕಾರ್ಯಾಗಾರ ಮಹತ್ವದ ಹೆಜ್ಜೆಯಾಗಿದೆ ಎಂದು ಭಾಗವಹಿಸಿದವರು ಅಭಿಪ್ರಾಯಪಟ್ಟರು.

Leave a Response