
ವರದಿ: ರವಿಚಂದ್ರ ಬೂದಿತಿಟ್ಟು.
ಪಿರಿಯಾಪಟ್ಟಣ: ಸಾಲಬಾಧೆ ಹಾಗೂ ನಿರಂತರ ಬೆಳೆ ನಷ್ಟದಿಂದ ಮನನೊಂದು ವಡ್ಡರಹಳ್ಳಿ ಗ್ರಾಮದ ರೈತ ರಮೇಶ್ (50) ವಿಷ ಸೇವಿಸಿ ಆಹ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.
ರಮೇಶ್ ಅವರು ತಮ್ಮ ತಂದೆಯ ಹೆಸರಿನಲ್ಲಿದ್ದ ಜಮೀನು ಸೇರಿದಂತೆ ಇತರರಿಂದ ಭೋಗ್ಯಕ್ಕೆ ಪಡೆದ ಜಮೀನಿನಲ್ಲಿ ತಂಬಾಕು, ಶುಂಠಿ ಮತ್ತು ರಾಗಿ ಬೆಳೆಗಳನ್ನು ಬೆಳೆಸುತ್ತಿದ್ದರು. ಕೃಷಿಯ ಮೇಲೆಯೇ ಅವಲಂಬಿತವಾಗಿದ್ದ ಅವರು, ಬೆಳೆಗಾಗಿ ಕಿತ್ತೂರು ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಸುಮಾರು 24 ಲಕ್ಷ ರೂ. ಸಾಲ ಪಡೆದಿದ್ದರು. ಇದಲ್ಲದೆ, ಖಾಸಗಿ ಹಣಕಾಸು ಸಂಸ್ಥೆಗಳು ಹಾಗೂ ಸಾರ್ವಜನಿಕರಿಂದಲೂ ಪತ್ನಿ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.
ಆದರೆ ಕಳೆದ ಎರಡು ಮೂರು ವರ್ಷಗಳಿಂದ ಸರಿಯಾದ ಸಮಯಕ್ಕೆ ಮಳೆಯಾಗದೆ ಬೆಳೆಗಳು ಕೈಕೊಟ್ಟ ಪರಿಣಾಮ ಭಾರೀ ನಷ್ಟ ಉಂಟಾಯಿತು. ಸಾಲ ತೀರಿಸಲು ಸಾಧ್ಯವಾಗದ ಸ್ಥಿತಿ ಎದುರಾದ ಹಿನ್ನೆಲೆಯಲ್ಲಿ ರಮೇಶ್ ತೀವ್ರ ಮನೋವ್ಯಥೆಗೆ ಒಳಗಾಗಿದ್ದರು ಎನ್ನಲಾಗಿದೆ.
ಏಪ್ರಿಲ್ 7ರಂದು ಅವರು ವಿಷ ಸೇವಿಸಿ ಆಹ ಗೆ ಯತ್ನಿಸಿದ್ದರು. ತಕ್ಷಣವೇ ಅವರನ್ನು ಕೆ.ಆರ್.ನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ಅವರು ಮೃತಪಟ್ಟಿದ್ದಾರೆ.
ಈ ಸಂಬಂಧ ಮೃತರ ಪತ್ನಿ ಕುಸುಮಾ ಅವರು ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಗ್ರಾಮದಲ್ಲಿ ಈ ಘಟನೆ ದುಃಖದ ವಾತಾವರಣವನ್ನು ಸೃಷ್ಟಿಸಿದ್ದು, ರೈತರ ಸಂಕಷ್ಟಗಳ ಬಗ್ಗೆ ಮತ್ತೊಮ್ಮೆ ಚರ್ಚೆ ಪ್ರಾರಂಭವಾಗಿದೆ. ನಿರಂತರ ಬೆಳೆ ನಷ್ಟ ಹಾಗೂ ಸಾಲಬಾಧೆಯಿಂದ ಬಳಲುತ್ತಿರುವ ರೈತರಿಗೆ ತಕ್ಷಣದ ನೆರವು ಮತ್ತು ಸೂಕ್ತ ಪರಿಹಾರ ನೀಡಬೇಕೆಂಬ ಬೇಡಿಕೆ ಸ್ಥಳೀಯರಿಂದ ಕೇಳಿಬರುತ್ತಿದೆ.





