
ವಿಜಯಪುರ, ಏಪ್ರಿಲ್:- ಮಾನವೀಯತೆಯೇ ನಡುಗಿಸುವಂತಹ ಭೀಕರ ಘಟನೆ ವಿಜಯಪುರದಲ್ಲಿ ಬೆಳಕಿಗೆ ಬಂದಿದೆ. ಕೇವಲ “ಮಗ ನೋಡಲು ತನ್ನಂತಿಲ್ಲ” ಎಂಬ ಮಾತುಗಳನ್ನು ಗಂಭೀರವಾಗಿ ತೆಗೆದುಕೊಂಡ ತಂದೆಯೊಬ್ಬ, ತನ್ನ ಆರು ವರ್ಷದ ಮಗನನ್ನೇ ಕೊ* ಮಾಡಿದ ದಾರುಣ ಘಟನೆ ನಡೆದಿದೆ. ಈ ಘಟನೆ ಸಮಾಜದ ನಿರ್ಲಕ್ಷ್ಯ ಮಾತುಗಳು ಎಷ್ಟು ಅಪಾಯಕರ ಪರಿಣಾಮ ಬೀರುತ್ತವೆ ಎಂಬುದಕ್ಕೆ ಕಠಿಣ ಉದಾಹರಣೆಯಾಗಿದೆ.
ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದ ನಿವಾಸಿಗಳಾದ ಮಲ್ಲಿಕಾರ್ಜುನ ಅರಕೇರಿ ಮತ್ತು ಭಾಗ್ಯಶ್ರೀ ದಂಪತಿಗೆ ಸಿದ್ದಾರ್ಥ ಎಂಬ ಆರು ವರ್ಷದ ಮಗನಿದ್ದ. ಗ್ರಾಮದಲ್ಲಿ ಕೆಲವರು ಮಗನ ಹೋಲಿಕೆ ಕುರಿತು ತಮಾಷೆ ಮಾತುಗಳನ್ನು ಆಡುತ್ತಿದ್ದರು. “ಮಗ ನೋಡಲು ನಿನ್ನಂತಿಲ್ಲ” ಎಂಬ ಛೇಡನೆಗಳನ್ನು ಮಲ್ಲಿಕಾರ್ಜುನ ಮನಸ್ಸಿನಲ್ಲಿ ಆಳವಾಗಿ ತೆಗೆದುಕೊಂಡಿದ್ದು, ಅದು ಕ್ರಮೇಣ ಅನುಮಾನವಾಗಿ ರೂಪಾಂತರಗೊಂಡಿತ್ತು.
ಮಾರ್ಚ್ 16ರಂದು ಮಗನನ್ನು ಶಾಲೆಗೆ ಸೇರಿಸುವ ನೆಪದಲ್ಲಿ ಮಲ್ಲಿಕಾರ್ಜುನ ಮನೆದಿಂದ ಕರೆದುಕೊಂಡು ಹೋಗಿದ್ದಾನೆ. ನಂತರ ಮಹಾರಾಷ್ಟ್ರದ ಕರಾಡ್ ಜಿಲ್ಲೆಯ ವಡೋಲಿ ಗ್ರಾಮದ ಬಳಿ ಹರಿಯುವ ಕೃಷ್ಣಾ ನದಿಯ ತೀರಕ್ಕೆ ಕರೆದುಕೊಂಡು ಹೋಗಿ, ಮಗ ಸಿದ್ದಾರ್ಥನನ್ನು ನದಿಗೆ ತಳ್ಳಿ ಹತ್ಯೆ ಮಾಡಿದ್ದಾನೆ. ಈ ಕೃತ್ಯದ ನಂತರ ಮನೆಗೆ ಹಿಂದಿರುಗಿ, ಮಗನನ್ನು ಶಾಲೆಯ ಹಾಸ್ಟೆಲ್‌ನಲ್ಲಿ ಬಿಟ್ಟಿದ್ದೇನೆ ಎಂದು ಸುಳ್ಳು ಹೇಳಿದ್ದಾನೆ.
ಏಪ್ರಿಲ್ 1ರಂದು ಮಗನ ಹುಟ್ಟುಹಬ್ಬದ ಹಿನ್ನೆಲೆ ತಾಯಿ ಭಾಗ್ಯಶ್ರೀ ಮಗನನ್ನು ಮನೆಗೆ ಕರೆತರಲು ಒತ್ತಾಯಿಸಿದ್ದಾಳೆ. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನನ ವರ್ತನೆಯಲ್ಲಿ ಅನುಮಾನಾಸ್ಪದ ಬದಲಾವಣೆ ಕಂಡುಬಂದಿದ್ದು, ಆತ ಮನೆಯಿಂದ ಪರಾರಿಯಾಗಿದ್ದಾನೆ. ಇದರಿಂದ ಆತಂಕಗೊಂಡ ಭಾಗ್ಯಶ್ರೀ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸರ ತೀವ್ರ ತನಿಖೆಯ ಬಳಿಕ ಆರೋಪಿ ಮಲ್ಲಿಕಾರ್ಜುನನನ್ನು ಬಂಧಿಸಲಾಗಿದ್ದು, ವಿಚಾರಣೆ ವೇಳೆ ಆತ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.





